ADVERTISEMENT

ನಿಮ್ಗು ಕೇರ್‌ ಮಾಡಲ್ಲ... ಯಾರಪ್ಪಂಗೂ ಕೇರ್‌ ಮಾಡಲ್ಲ: ಸಿದ್ದರಾಮಯ್ಯ ಗುಡುಗು

ಎಚ್‌ಡಿಕೆ–ಸಿದ್ದರಾಮಯ್ಯ, ಎಚ್‌ಡಿಕೆ–ಚಲುವರಾಯಸ್ವಾಮಿ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2023, 23:30 IST
Last Updated 6 ಜುಲೈ 2023, 23:30 IST
   

ಬೆಂಗಳೂರು: ‘ನಿಮಗೂ ಕೇರ್‌ ಮಾಡಲ್ಲ, ಯಾರಪ್ಪಂಗೂ ಕೇರ್‌ ಮಾಡಲ್ಲ, ಏಯ್‌ ಹೋಗ್ರಿ. ನಿಮ್ಮನ್ನ ನೋಡಿ ಹೆದ್ರಲ್ಲ’... ಹೀಗೆಂದು ಕೋಪದಿಂದ ಮುಖ ಕೆಂಪು ಮಾಡಿಕೊಂಡು ಗುಡುಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ.

‘ದೇವೇಗೌಡರ ಕುಟುಂಬದ ಬಗ್ಗೆ ಚೆನ್ನಾಗಿ ಉತ್ತರ ಕೊಟ್ಟಿದ್ದೀರಿ ಎಂದು ಸಿಎಂ ಶೇಕ್‌ ಹ್ಯಾಂಡ್‌ ಮಾಡಿದರು. ವ್ಯಂಗ್ಯವಾದ ನಗು ಬೇರೆ. ಇದೆನ್ನೆಲ್ಲಾ ಗಮನಿಸುತ್ತಿದ್ದೇನೆ. ನೀವು ದೇವೇಗೌಡರ ಕುತ್ತಿಗೆ ಕೊಯ್ದವರು, ಬಿಜೆಪಿ ‘ಬಿ’ ಟೀಮ್‌ ಎಂದಿರಿ’ ಎಂದು ಸಿಟ್ಟಿನಿಂದ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದು ಜೆಡಿಎಸ್‌ ಶಾಸಕಾಂಗ ಪಕ್ಷ ನಾಯಕ ಎಚ್‌.ಡಿ.ಕುಮಾರಸ್ವಾಮಿ.

ಮಂಡ್ಯ ಜಿಲ್ಲೆಯ ಕೆಎಸ್‌ಆರ್‌ಟಿಸಿ ಚಾಲಕನ ಆತ್ಮಹತ್ಯೆ ಯತ್ನ ಪ್ರಕರಣದ ಕುರಿತ ಚರ್ಚೆಯ ವೇಳೆ ಕುಮಾರಸ್ವಾಮಿ ಮತ್ತು ಸಚಿವ ಎನ್‌.ಚಲುವರಾಯಸ್ವಾಮಿ ಮಧ್ಯೆ ಹೊತ್ತಿಕೊಂಡ ಜಗಳ ಪರಸ್ಪರ ಏಕವಚನಕ್ಕೆ ತಿರುಗಿತು. ಆ ಬಳಿಕ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಏರಿದ ಧ್ವನಿಯಲ್ಲಿ ಅಬ್ಬರಿಸಿದರು. 

ADVERTISEMENT

ಚಲುವರಾಯಸ್ವಾಮಿ ವಾಗ್ದಾಳಿಯ ಬಳಿಕ ಮುಖ್ಯಮಂತ್ರಿಯವರ ಮುಖವನ್ನು ಗಮನಿಸಿದ ಕುಮಾರಸ್ವಾಮಿ, ‘ಶೇಕ್‌ ಹ್ಯಾಂಡ್‌...ಹುಸಿ ನಗೆ ಬೇರೆ, ಇದಕ್ಕೆಲ್ಲ ಕೇರ್‌ ಮಾಡೊಲ್ಲ. ನಮ್ಮಲ್ಲಿದ್ದವರನ್ನು ಎಳೆದುಕೊಂಡು ಆಟ ಆಡುತ್ತಿದ್ದೀರಾ, ನಮಗೂ ಆಟ ಆಡಲು ಬರುತ್ತದೆ’ ಎಂದು ಸಿಟ್ಟಿನಿಂದ ಮಾತಿನ ಚಾಟಿ ಬೀಸಿದರು.

ಇದರಿಂದ ಕೆರಳಿದ ಸಿದ್ದರಾಮಯ್ಯ ಕುಮಾರಸ್ವಾಮಿಯತ್ತ ಕೈ ತೋರಿಸುತ್ತಾ ‘ಏಯ್ ನಿಮಗೆ ಹೆದರಲ್ಲ, ನಾನೂ ಕೇರ್‌ ಮಾಡಲ್ಲ. ನಿಮ್ಮನ್ನು ನೋಡಿ ಹೆದರುವುದೂ ಇಲ್ಲ’ ಎಂದು ಹೇಳಿದರು. ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತ ಕಾಂಗ್ರೆಸ್ ಶಾಸಕರು ಅದರಲ್ಲೂ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದವರು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ಎಚ್‌ಡಿಕೆ– ಚಲುವರಾಯಸ್ವಾಮಿ ಕದನ:

ಚಾಲಕನ ಆತ್ಮಹತ್ಯೆ ಬಗ್ಗೆ ಉತ್ತರ ನೀಡುವಾಗ ಚಲುವರಾಯಸ್ವಾಮಿ ಅವರು ಕುಮಾರಸ್ವಾಮಿ ವಿರುದ್ಧ ವೈಯಕ್ತಿಕವಾಗಿ ವಾಗ್ದಾಳಿ ನಡೆಸಿದ್ದು ಮತ್ತು ಜೆಡಿಎಸ್‌ ಬಿಟ್ಟ ಸಂದರ್ಭದ ವಿಚಾರಗಳನ್ನು ಪ್ರಸ್ತಾಪಿಸಿದ್ದು ಇಬ್ಬರ ಮಧ್ಯೆ ಕದನಕ್ಕೆ ಕಾರಣವಾಯಿತು.

‘ಅಧಿಕಾರ ಇಲ್ಲ ಅಂದ್ರೆ ಕುಮಾರಸ್ವಾಮಿ ಬೆಳಿಗ್ಗೆಯಿಂದ ಸಂಜೆವರೆಗೆ ನನ್ನ ಬಳಿ ಫೈಲ್‌ ಇದೆ, ಸಿ.ಡಿ ಇದೆ, ಪೆನ್‌ಡ್ರೈವ್ ಇದೆ ಎನ್ನುತ್ತಾರೆ. ಇದನ್ನೆಲ್ಲ ಇಟ್ಟುಕೊಂಡು ತೇಜೋವಧೆ ಮಾಡುವುದನ್ನು ಬಿಟ್ಟು ಬಿಡಿ. ಕ್ಷೇತ್ರಕ್ಕೆ ಬಂದು ಆಜನ್ಮ ವೈರಿ ಎಂದು ಹೇಳಿದರು. ನಮ್ಮದೆಲ್ಲ ಮುಗಿದೇ ಹೋಯಿತು ಎನ್ನುವ ರೀತಿಯಲ್ಲಿ ಮಾತನಾಡಿ ಹೋಗಿದ್ದರು. ರಾಜಕಾರಣದಲ್ಲಿ ಸೋಲು–ಗೆಲುವು ಸಾಮಾನ್ಯ. ಅಧಿಕಾರ ಶಾಶ್ವತ ಅಲ್ಲ’ ಎಂದು ಚೆಲುವರಾಯ ಸ್ವಾಮಿ ಹೇಳಿದರು.

‘ಸಿದ್ದರಾಮಯ್ಯ ಅವರು ಜೆಡಿಎಸ್‌ ಅನ್ನು ಅವರಾಗಿಯೇ ಬಿಡಲಿಲ್ಲ. ಅವರನ್ನು ಪಕ್ಷದಿಂದ ಹೊರ ನೂಕಿದರು. ಹಿಂದಿನ ಚರಿತ್ರೆ ಬಗ್ಗೆ ಮಾತನಾಡಲು ಒಂದು ದಿನ ಅವಕಾಶ ನೀಡಿದರೆ ಎಲ್ಲವನ್ನೂ ಬಿಚ್ಚಿಡುತ್ತೇವೆ. ನಮ್ಮ ವಿರುದ್ಧ ಇವರ ಕಿರುಕುಳಕ್ಕೆ ಬೇಸತ್ತಿದ್ದೇವೆ’ ಎಂದರು.

ಚಲುವರಾಯಸ್ವಾಮಿ ಮಾತಿಯಿಂದ ಸಿಟ್ಟಿಗೆದ್ದ ಕುಮಾರಸ್ವಾಮಿ, ನನ್ನ ಜೀವನದಲ್ಲಿ ಲಕ್ಷಾಂತರ ಜೀವಗಳನ್ನು ಉಳಿಸಿ ಬಂದವನು ನಾನು. ಇವರ ರೀತಿ ಕೊಲೆಗಡುಕ ರಾಜಕೀಯ ಮಾಡಿ ಬಂದಿಲ್ಲ ಎಂದು ಕಾಂಗ್ರೆಸ್‌ನ ಎಚ್‌.ಸಿ. ಬಾಲಕೃಷ್ಣ ಮತ್ತು ಚಲುವರಾಯಸ್ವಾಮಿ ಅವರನ್ನು ಉದ್ದೇಶಿಸಿ ಹೇಳಿದರು.

ಕೊಲೆಗಡುಕ ಪದ ಬಳಕೆ ಬಗ್ಗೆ ಕಾಂಗ್ರೆಸ್‌ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

‘ನಮ್ಮ ಹಂಗಿನಲ್ಲಿ ನೀವು ಮುಖ್ಯಮಂತ್ರಿ ಆಗಿದ್ದು’  ಎಂದು ಚಲುವರಾಯಸ್ವಾಮಿ ಮತ್ತು ಬಾಲಕೃಷ್ಣ ಕುಟುಕಿದರು.

‘ಈ ಸದನ ನಿಮ್ಮಪ್ಪಂದು ಅಲ್ಲ. ಇವರು ಮಂತ್ರಿ ಆಗಬೇಕೆಂದು ಆರು ತಿಂಗಳು ಏನೆಲ್ಲ ಮಾಡಿದರು ಎಂಬುದು ಗೊತ್ತಿದೆ’ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಚಲುವರಾಯಸ್ವಾಮಿ,‘ಸದನ ನಿಮ್ಮಪ್ಪಂದೂ ಅಲ್ಲ ನಮ್ಮ ಅಪ್ಪಂದೂ ಅಲ್ಲ. ಆರೂವರೆ ಕೋಟಿ ಜನರದ್ದು’ ಎಂದರು. ಈ ಹಂತದಲ್ಲಿ ಇಬ್ಬರೂ ಏಕವಚನ ಪ್ರಯೋಗಿಸಿದರು.

ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಇಬ್ಬರನ್ನೂ ಸಮಾಧಾನಪಡಿಸಲು ಯತ್ನಿಸಿದರು. ಕುಮಾರಸ್ವಾಮಿ ವಿರುದ್ಧ ಕಿಡಿಕಾರುತ್ತಿದ್ದ ಕೆ.ಎಂ.ಶಿವಲಿಂಗೇಗೌಡ, ಸಚಿವ ಕೆ.ಎನ್‌.ರಾಜಣ್ಣ, ಬಾಲಕೃಷ್ಣ, ನರೇಂದ್ರಸ್ವಾಮಿ ಮತ್ತಿತರರನ್ನು ಸಮಾಧಾನಪಡಿಸಲು ಖಾದರ್‌ ಯತ್ನಿಸಿದರು.

ಜಂಟಿ ವಾಗ್ದಾಳಿ: ಬೆಳಗಿನ ಶೂನ್ಯ ವೇಳೆಯಲ್ಲಿ ಬಿಜೆಪಿಯ ಬಸವರಾಜ ಬೊಮ್ಮಾಯಿ ಈ ಪ್ರಕರಣದ ಕುರಿತು ಪ್ರಸ್ತಾಪಿಸಿದರು. ‘ಚಲುವರಾಯಸ್ವಾಮಿ ಅವರೇ ಚಾಲಕನ ಆತ್ಮಹತ್ಯೆ ಯತ್ನಕ್ಕೆ ಕಾರಣ. ಸರ್ಕಾರ ಅವರನ್ನು ರಕ್ಷಿಸುತ್ತಿದೆ’ ಎಂದರು.

ಬಳಿಕ ಜೆಡಿಎಸ್‌ನ ಎಚ್‌.ಡಿ. ಕುಮಾರಸ್ವಾಮಿ ಮಾತು ಆರಂಭಿಸಿದರು. ನೇರಾನೇರ ಚಲುವರಾಯಸ್ವಾಮಿ ಅವರತ್ತ ವಾಗ್ದಾಳಿಗೆ ಇಳಿದರು. ವಾಕ್ಸಮರದ ಮಧ್ಯೆಯೇ ಬಿಜೆಪಿ ಸದಸ್ಯರು ಚಲುವರಾಯಸ್ವಾಮಿ ರಾಜೀನಾಮೆಗೆ ಆಗ್ರಹಿಸಿ ಧರಣಿ ಆರಂಭಿಸಿದರು. ಆಗ ಸ್ಪೀಕರ್‌ ಖಾದರ್‌ ಸದನವನ್ನು ಮಧ್ಯಾಹ್ನ 2.45ಕ್ಕೆ ಮುಂದೂಡಿದರು. ಮಧ್ಯಾಹ್ನದ ಬಳಿಕ ಬಹುತೇಕ ಕಲಾಪವನ್ನು ಇದೇ ಪ್ರಕರಣ ನುಂಗಿಹಾಕಿತು.

ಚಲುವರಾಯಸ್ವಾಮಿ

ಯತ್ನಾಳ– ಪಾಟೀಲ ಜಟಾಪಟಿ

ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ ಮತ್ತು ಸಚಿವ ಎಂ.ಬಿ. ಪಾಟೀಲ ಮಧ್ಯೆ ಜಟಾಪಟಿ ನಡೆಯಿತು. ಯತ್ನಾಳರು ಕುಮಾರಸ್ವಾಮಿ ಬೆಂಬಲಕ್ಕೆ ನಿಂತಾಗ ‘ಹಿಂದೆ ನೀವೇನು ಹೇಳಿದ್ದೀರಿ ಗೊತ್ತಿದೆ. ಮುಖ್ಯಮಂತ್ರಿ ಆಗಲು ಹೈಕಮಾಂಡ್‌ಗೆ ₹2500 ಕೋಟಿ ಕೊಡಬೇಕು ಎಂದು ಹೇಳಿಲ್ಲವಾ? ವಿಡಿಯೊ ಇದೆ’ ಎಂದು ಪಾಟೀಲ ತಿರುಗೇಟು ನೀಡಿದರು. ‘ನನ್ನ ಹೇಳಿಕೆ ಬಗ್ಗೆಯೂ ಸಿಬಿಐ ತನಿಖೆ ನಡೆಸಿ ಶೇಕಡ 40ರಷ್ಟು ಲಂಚದ ಆರೋಪ ಮಾಡಿದ್ರಲ್ಲಾ ಅದರ ಬಗ್ಗೆಯೂ ಸಿಬಿಐಗೆ ಕೊಡಿ’ ಎಂದು ಯತ್ನಾಳ ಸವಾಲು ಹಾಕಿದರು.

ಇವತ್ತಿನದು ಅತಿಯಾಯ್ತು: ಪರಮೇಶ್ವರ

ಜೆಡಿಎಸ್‌ ಮತ್ತು ತಮ್ಮ ಪಕ್ಷದ ನಾಯಕರ ಮಧ್ಯೆ ನಡೆದ ವಾಕ್ಸಮರಕ್ಕೆ ಗೃಹ ಸಚಿವ ಜಿ.ಪರಮೇಶ್ವರ ಅವರು ತಮ್ಮದೇ ಶೈಲಿಯಲ್ಲಿ ಕಿವಿ ಮಾತು ಹೇಳಿದರು. ‘ಎರಡು ಬಾರಿ ಸಿಎಂ ಆಗಿದ್ದೀರಿ. ಈ ಕಡೆ ಸಚಿವರೂ ಇದ್ದಾರೆ. ಇಬ್ಬರೂ ಜತೆಗೆ ಕೆಲಸ ಮಾಡಿದ್ದೀರಿ. ಚರ್ಚೆ ಮಾಡುವಾಗ ಇತಿ ಮಿತಿ ಇದ್ದರೆ ಸದನಕ್ಕೂ ಗೌರವ ಬರುತ್ತದೆ. 65 ಹೊಸ ಶಾಸಕರು ನಮ್ಮನ್ನೆಲ್ಲ ನೋಡುತ್ತಿದ್ದಾರೆ.  ಇವತ್ತು ನಡೆದದ್ದು ನೋಡಿ ಅತಿ ಆಯ್ತು ಎನಿಸಿತು. ಎರಡೂ ಕಡೆಯವರಿಗೆ ತಾಳ್ಮೆ ಅಗತ್ಯ. ಮುಂದಿನ ದಿನಗಳಲ್ಲಿ ಇಂತಹದ್ದು ಕಾಣಬಾರದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.