ಮೈಸೂರು: ವರ್ಗಾವಣೆ ಕುರಿತ ಆರೋಪಗಳಿಗೆ ವಿಧಾನಸಭೆ ಸದನದಲ್ಲಿ ತಕ್ಕ ಉತ್ತರ ನೀಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಶನಿವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು 'ವಿಡಿಯೊದಲ್ಲಿ ಚರ್ಚೆ ಆಗಿರುವ ಹೆಸರು ಮೈಸೂರು ಬಿಇಒ ವಿವೇಕಾನಂದರ ಹೆಸರೇ ಹೊರತು ಪೊಲೀಸ್ ಅಧಿಕಾರಿಯದ್ದಲ್ಲ. ವಿ.ವಿ.ಪುರಂ ಇನ್ ಸ್ಪೆಕ್ಟರ್ ವಿವೇಕಾನಂದ ವರ್ಗಾವಣೆ ಆಗಿರುವುದು ಚಾಮರಾಜ ವಿಧಾನಸಭಾ ಕ್ಷೇತ್ರಕ್ಕೆ. ಈ ಬಗ್ಗೆ ಅಲ್ಲಿನ ಶಾಸಕರನ್ನೇ ಕೇಳಿ' ಎಂದರು.
' ಕುಮಾರಸ್ವಾಮಿ ಈ ಹಿಂದೆ ಪೆನ್ ಡ್ರೈವ್ ತೋರಿಸುತ್ತೇನೆ ಎಂದಿದ್ದರು. ತೋರಿಸುವಂತೆ ಸಾಕಷ್ಟು ಮಂದಿ ಮನವಿ ಮಾಡಿದ್ದಾರೆ. ಮೊದಲು ತೋರಿಸಲು ಹೇಳಿ. ವಿದ್ಯುತ್ ಕದ್ದವರ ಬಗ್ಗೆ ಏನು ಕೇಳುತ್ತೀರಿ. ಅಪರಾಧ ಎಂದರೆ ಅಪರಾಧವೇ. ಅವರಿಗೆ ಯಾವ ನೈತಿಕತೆ ಇದೆ' ಎಂದು ಪ್ರಶ್ನಿಸಿದರು.
' ಜೆಡಿಎಸ್ ಕಳೆದ ಚುನಾವಣೆಯಲ್ಲಿ 37ರಿಂದ 19 ಸ್ಥಾನಕ್ಕೆ ಇಳಿದಿದೆ. ಹೀಗಾಗಿ ಕುಮಾರಸ್ವಾಮಿ ಹತಾಶೆಯಿಂದ ಮಾತನಾಡುತ್ತಿದ್ದಾರೆ. ಅವರು ತಮ್ಮೆಲ್ಲ ಆರೋಪಗಳನ್ನು ಸಾಬೀತು ಮಾಡುತ್ತಾರ' ಎಂದು ಸವಾಲು ಹಾಕಿದರು.
ಈಗ ಚುನಾವಣೆ ನಡೆದರೂ ಬಿಜೆಪಿ ಗೆಲ್ಲುತ್ತದೆ ಎಂಬ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ ' ಬಿಜೆಪಿಯವರು ಕನಸು ಕಾಣುತ್ತ ಇದ್ದಾರೆ. ರಮೇಶ, ಬೆಲ್ಲದ, ಯತ್ನಾಳ್ ಏಕೆ ಸಭೆಯಿಂದ ಎದ್ದು ಹೋದರು? ತಮ್ಮ ಮಗನನ್ನು ರಾಜ್ಯ ಅಧ್ಯಕ್ಷ, ಅಶೋಕನನ್ನು ವಿಪಕ್ಷ ನಾಯಕನನ್ನಾಗಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ಪರಿಸ್ಥಿತಿ ಏನಾಗಲಿದೆ ಎಂಬುದನ್ನು ಕಾದು ನೋಡಿ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.