ADVERTISEMENT

ಸಿದ್ದರಾಮಯ್ಯರ ಸೊಕ್ಕು ಹೆಚ್ಚು ದಿನ ನಡೆಯದು: ಶೆಟ್ಟರ್

ಸ್ಪೀಕರ್‌ ಕುರಿತು ಏಕವಚನ ಪ್ರಯೋಗ–ವ್ಯಾಪಕ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2019, 3:04 IST
Last Updated 25 ಅಕ್ಟೋಬರ್ 2019, 3:04 IST
   

ಬೆಂಗಳೂರು: ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರುವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಬಗ್ಗೆ ಸಾರ್ವಜನಿಕವಾಗಿ ಏಕವಚನದಲ್ಲಿ ಮಾತನಾಡಿದ್ದಕ್ಕೆ ವಿವಿಧ ನಾಯಕರಿಂದಗುರುವಾರ ವ್ಯಾಪಕ ವಿರೋಧ ವ್ಯಕ್ತವಾಗಿದೆ.

‘ಸ್ಪೀಕರ್ ಸ್ಥಾನದ ಘನತೆ ಮರೆತು, ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಅವನು, ಇವನು ಎಂದು ಮಾತನಾಡಿರುವ ಸಿದ್ದರಾಮಯ್ಯ ಅವರಿಗೂ ಇನ್ನು ಮುಂದೆ ಏಕವಚನ ಬಳಸಬೇಕಾಗುತ್ತದೆ’ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹುಬ್ಬಳ್ಳಿಯಲ್ಲಿಎಚ್ಚರಿಕೆ ನೀಡಿದರು.

‘ಮುಖ್ಯಮಂತ್ರಿಯಾಗಿ ಕೆಲಸ ಮಾಡಿರುವ ಸಿದ್ದರಾಮಯ್ಯ, ಈ ರೀತಿ ಮಾತನಾಡುವುದನ್ನು ನೋಡಿದರೆ ಅವರಿಗೆ ಮನೋರೋಗ ಇರಬೇಕು’ ಎಂದು ಲೇವಡಿ ಮಾಡಿದರು.

ADVERTISEMENT

‘ಸ್ಪೀಕರ್‌ ಬಗ್ಗೆ ಇಷ್ಟೊಂದು ಕೀಳಾಗಿ ಮಾತನಾಡಿರುವವರನ್ನು ನನ್ನ ರಾಜಕೀಯ ಜೀವನದಲ್ಲೇ ನೋಡಿಲ್ಲ. ಸಿದ್ದರಾಮಯ್ಯ ಅವರ ಈ ಸೊಕ್ಕು ಹೆಚ್ಚು ದಿನ ನಡೆಯುವುದಿಲ್ಲ. ಕೂಡಲೇ ಅವರು, ಸ್ಪೀಕರ್ ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿದರು.

ಯೋಚಿಸಿ ಮಾತನಾಡಲಿ: ಶ್ರೀನಿವಾಸ ಪ್ರಸಾದ್‌

‘ಸಭಾಧ್ಯಕ್ಷ ಸ್ಥಾನ ಅತ್ಯಂತ ಗೌರವಯುತವಾದ ಹುದ್ದೆ. ಅವರ ಬಗ್ಗೆ ಸಾರ್ವಜನಿಕವಾಗಿ ಯಾರೂ ಏಕವಚನದಲ್ಲಿ ಮಾತನಾಡಬಾರದು. ದೇಶದ ಯಾವ ರಾಜಕಾರಣಿ ಕೂಡ ಈ ರೀತಿ ವರ್ತಿಸಲು ಸಾಧ್ಯವಿಲ್ಲ. ವಿರೋಧ ಪಕ್ಷದ ನಾಯಕರಾಗಿರುವವರು ಯೋಚನೆ ಮಾಡಿ ಮಾತನಾಡಬೇಕು’ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಚಾಮರಾಜನಗರದಲ್ಲಿ ಹೇಳಿದರು.

ಇದು ಅಹಂಕಾರದ ನಡವಳಿಕೆ

‘ಸಿದ್ದರಾಮಯ್ಯ ಅವರ ಮಾತು ಶಾಸನಸಭೆಗೆ ತೋರಿದ ಅಗೌರವವಷ್ಟೇ ಅಲ್ಲ, ಸಮಸ್ತ ಜನಪ್ರತಿನಿಧಿಗಳಿಗೆ ಮಾಡಿದ ಅವಮಾನ. ಅವರಿಗೆ ಇಂತಹ ಅಹಂಕಾರ ಶೋಭೆ ತರುವುದಿಲ್ಲ. ಸದನದಲ್ಲಿ ಸದಸ್ಯರನ್ನು ನಿಯಂತ್ರಿಸುವ ಕಾರ್ಯಕ್ಕಾಗಿಯೇ ಸ್ಪೀಕರ್‌ ಹುದ್ದೆಯನ್ನು ಸೃಷ್ಟಿಸಲಾಗಿದೆಯೇ ಹೊರತು, ಎಷ್ಟಾದರೂ ಹೊತ್ತು ಮಾತನಾಡಲು ಅವಕಾಶ ನೀಡುವುದಕ್ಕಲ್ಲ. ಸದನದ ವಿಷಯದಲ್ಲೂ ರಾಜಕೀಯವಾಗಿ ಟೀಕೆ ಮುಂದುವರಿಸಿದರೆ ಸಿದ್ದರಾಮಯ್ಯ ವಿರುದ್ಧ ಎಲ್ಲೆಡೆ ಪ್ರತಿಭಟನೆ ನಡೆಸಬೇಕಾದೀತು’ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌. ರವಿಕಮಾರ್‌ ಎಚ್ಚರಿಸಿದ್ದಾರೆ.

**

ಸಿದ್ದರಾಮಯ್ಯ ವಿಧಾನಸಭೆಯ ಸ್ಪೀಕರ್ ಕಾಗೇರಿ ಬಗ್ಗೆ ಏಕವಚನದಲ್ಲಿ ಮಾತನಾಡಿ ಅಗೌರವ ತೋರಿಸಿರುವುದು ಸರಿಯಲ್ಲ. ರಾಜ್ಯದ ಜನರ ಕ್ಷಮೆ ಕೇಳಬೇಕು
- ಕೆ.ಎಸ್‌.ಈಶ್ವರಪ್ಪ,ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.