ಬೆಂಗಳೂರು: ಲವ್ ಜಿಹಾದ್ ತಡೆಗೆ ಸರ್ಕಾರ ಕಠಿಣ ಕಾಯ್ದೆ ತರಲು ಸರ್ಕಾರ ಮುಂದಾಗಿದ್ದು, ಈ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬೇಜವಾಬ್ದಾರಿ ಹೇಳಿಕೆಯು ಜಂಗಲ್ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಹೇಳಿದ್ದಾರೆ.
ಲವ್ ಜಿಹಾದ್ ಹೆಸರಿನಲ್ಲಿ ಹಿಂದೂ ಯುವತಿಯರು ಮತ್ತು ಮಹಿಳೆಯರನ್ನು ಮತಾಂತರಗೊಳಿಸುವ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದೆ. ಇಂತಹ ಅನಾಚಾರಕ್ಕೆ ಕಡಿವಾಣ ಹಾಕಲು ಸರ್ಕಾರ ಕಾನೂನು ರೂಪಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಕ್ರಾಸ್ ಬ್ರೀಡ್ ಕುರಿತು ಮಾತನಾಡಿರುವ ಸಿದ್ದರಾಮಯ್ಯ ಅವರು ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು. ಲವ್ ಜಿಹಾದ್ ನಡೆಸಲು ಎನ್‌ಜಿಒಗಳಿಗೆ ವಿದೇಶಗಳಿಂದ ಹೇರಳವಾಗಿ ಹಣ ಬರುತ್ತಿದೆ. ಈ ಹಣದ ಮೂಲಕ ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡಿ, ಅವರ ದಾರಿ ತಪ್ಪಿಸಿ ಮತಾಂತರ ಮಾಡುವುದು ಸಂವಿಧಾನ ಬಾಹಿರ. ಸಂವಿಧಾನ ಬಾಹಿರ ಕೃತ್ಯಗಳನ್ನು ತಡೆಯಲು ಮುಂದಾದರೆ ಸಿದ್ದರಾಮಯ್ಯ ಅವರಿಗೆ ಸಂಕಟ ಏಕೆ ಎಂದು ಅವರು ಪ್ರಶ್ನಿಸಿದ್ದಾರೆ.
‘ಈ ದೇಶದಲ್ಲಿ ಮೊಗಲರು ಮತ್ತು ಟಿಪ್ಪು ಸುಲ್ತಾನನ ಕೊಡುಗೆ ಏನೆಂಬುದು ಇಡೀ ಸಮಾಜಕ್ಕೆ ಗೊತ್ತಿದೆ. ದೇಶದ ಪರಂಪರೆಯನ್ನು ಹಾಳು ಮಾಡಿದ್ದೂ ಅಲ್ಲದೆ, ದೇವಸ್ಥಾನಗಳನ್ನು ಧ್ವಂಸ ಮಾಡಿ, ಅಮಾಯಕರನ್ನು ಮತಾಂತರ ಮಾಡಿದರು. ಇಂತಹವರ ಚರಿತ್ರೆ ನಮ್ಮ ಸಮಾಜಕ್ಕೆ ಬೇಕಿಲ್ಲ’ ಎಂದು ರವಿಕುಮಾರ್ ಹೇಳಿದ್ದಾರೆ.
‘ತ್ರಿವಳಿ ತಲಾಖ್, ಕಾಶ್ಮೀರದ 370 ವಿಧಿ ರದ್ದು ಮಾಡಿದ್ದು, ಸಿಎಎ ಜಾರಿ ಮಾಡಿದ್ದು, ರಾಮಮಂದಿರ ನಿರ್ಮಾಣ, ಗೋಹತ್ಯೆ ನಿಷೇಧದಂತಹ ಕ್ರಮಗಳನ್ನು ಕೈಗೊಂಡಾಗ ಕಾಂಗ್ರೆಸ್ ವಿರೋಧಿಸಿತು. ಇದಕ್ಕೆ ಮುಖ್ಯ ಕಾರಣ ಮುಸ್ಲಿಂ ವೋಟ್ ಬ್ಯಾಂಕ್. ಲವ್ ಜಿಹಾದ್ ತಡೆಗೆ ತರುವ ಕಾನೂನು ವಿರೋಧಿಸಲು ಮತ ಬ್ಯಾಂಕ್ ರಾಜಕೀಯವೇ ಕಾರಣ’ ಎಂದು ಅವರು ತಿಳಿಸಿದ್ದಾರೆ.
‘ಕಾಂಗ್ರೆಸ್‌ಗೆ ಹಿಂದುಗಳ ಮತದ ಅಗತ್ಯವಿಲ್ಲ. ಅವರಿಗೆ ಮುಸ್ಲಿಂ ಮತಗಳಷ್ಟೇ ಸಾಕು ಎಂಬ ಭಾವನೆಯಲ್ಲಿ ಇದ್ದಂತಿದೆ. ಇದನ್ನು ಹಿಂದುಗಳು ಅರ್ಥ ಮಾಡಿಕೊಳ್ಳಬೇಕು. ಇನ್ನೊಂದೆಡೆ ಮುಸ್ಲಿಮರ ಹಿತ ಕಾಯುತ್ತೇವೆ ಎಂದು ಅವರನ್ನು ಹಿಂದುಳಿದವರನ್ನಾಗಿಯೇ ಉಳಿಸಿದೆ’ ಎಂದು ರವಿಕುಮಾರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.