ADVERTISEMENT

ಸಂಪತ್ತಿನ ಸಣ್ಣ ಪಾಲು ಸಮಾಜಕ್ಕೆ ಬಳಸಿ: ಸಿಎಂ ಸಿದ್ದರಾಮಯ್ಯ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 15:31 IST
Last Updated 25 ಅಕ್ಟೋಬರ್ 2025, 15:31 IST
ಸಮಾರಂಭದಲ್ಲಿ ಕಲಬುರಗಿ ವಿಭಾಗದ ಕಾಗಿನೆಲೆ ಗುರುಪೀಠದ ಸಿದ್ದರಾಮಾನಂದಪುರಿ ಸ್ವಾಮೀಜಿ, ಮೈಸೂರು ವಿಭಾಗದ ಕನಕ ಗುರುಪೀಠದ ಶಿವಾನಂದ ಪುರಿ ಸ್ವಾಮೀಜಿ, ಸಿದ್ದರಾಮಯ್ಯ, ಬಿ.ಝಡ್. ಜಮೀರ್ ಅಹಮದ್ ಖಾನ್, ನಸೀರ್ ಅಹಮದ್, ಎಚ್‌.ಎಂ. ರೇವಣ್ಣ ಇದ್ದರು.
ಸಮಾರಂಭದಲ್ಲಿ ಕಲಬುರಗಿ ವಿಭಾಗದ ಕಾಗಿನೆಲೆ ಗುರುಪೀಠದ ಸಿದ್ದರಾಮಾನಂದಪುರಿ ಸ್ವಾಮೀಜಿ, ಮೈಸೂರು ವಿಭಾಗದ ಕನಕ ಗುರುಪೀಠದ ಶಿವಾನಂದ ಪುರಿ ಸ್ವಾಮೀಜಿ, ಸಿದ್ದರಾಮಯ್ಯ, ಬಿ.ಝಡ್. ಜಮೀರ್ ಅಹಮದ್ ಖಾನ್, ನಸೀರ್ ಅಹಮದ್, ಎಚ್‌.ಎಂ. ರೇವಣ್ಣ ಇದ್ದರು.   

ಬೆಂಗಳೂರು: ‘ವೈದ್ಯಕೀಯ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು, ಸಮಾಜಮುಖಿಯಾಗಿ ಕೆಲಸ ಮಾಡಬೇಕು. ಗಳಿಸುವ ಸಂಪತ್ತಿನ ಸಣ್ಣ ಪಾಲನ್ನು ಸಮಾಜದ ಒಳಿತಿಗಾಗಿ ಸದ್ಬಳಕೆ ಮಾಡಬೇಕು’ ಎಂದು ಭವಿಷ್ಯದ ವೈದ್ಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿಮಾತು ಹೇಳಿದರು.

2025ರ ಶೈಕ್ಷಣಿಕ ಸಾಲಿನ ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಕೋರ್ಸ್‌ಗೆ ಪ್ರವೇಶ ಪಡೆದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಸಂತ ನಗರದಲ್ಲಿರುವ ದೇವರಾಜ ಅರಸು ಭವನದಲ್ಲಿ ಕಾಳಿದಾಸ ಹೆಲ್ತ್ ಎಜುಕೇಶನ್ ಮತ್ತು ಅಹಿಲ್ಯಾ ಟ್ರಸ್ಟ್ ವತಿಯಿಂದ ಶನಿವಾರ ನಡೆದ ಪ್ರೇರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದ ಪ್ರತಿಭಾವಂತ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುತ್ತಿರುವುದು ಉತ್ತಮ ಕಾರ್ಯ. ಎಂಬಿಬಿಎಸ್ ಶಿಕ್ಷಣಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಿ ಪ್ರೋತ್ಸಾಹ ನೀಡಲಾಗುತ್ತಿದೆ. ಸಂಸ್ಥೆಯ ರೂವಾರಿಗಳು, ಉತ್ತಮ ಸಾಮಾಜಿಕ ಕೆಲಸದಲ್ಲಿ ತೊಡಗಿಕೊಂಡಿರುವುದು ಅನುಕರಣೀಯ’ ಎಂದು ಪ್ರಶಂಸಿದರು.

ADVERTISEMENT

ಅಲ್ಪ ಮೊತ್ತ ಸಮಾಜಕ್ಕೆ ಬಳಸಿ: ‘ವಿದ್ಯಾರ್ಥಿವೇತನ ಪಡೆಯುವ ವೈದ್ಯಕೀಯ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು, ಸಮಾಜಮುಖಿಯಾಗಿ ಸೇವೆ ಸಲ್ಲಿಸಬೇಕು. ಜಾತಿವ್ಯವಸ್ಥೆಯಿಂದಾಗಿ ಸಮಾಜದಲ್ಲಿ ಅಸಮಾನತೆಯಿದೆ. ಸಮಾನತೆಯನ್ನು ಸಾಧಿಸಿ ಸಮಸಮಾಜವನ್ನು ನಿರ್ಮಿಸಬೇಕಿದೆ. ಇಂದಿನ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಸ್ಥಾನಕ್ಕೇರಿದಾಗ, ಸಾಮಾಜಿಕ ಚಿಂತನೆಯಿಂದ ದುಡಿಯಬೇಕು’ ಎಂದೂ ಅವರು ಸಲಹೆ ನೀಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.