ADVERTISEMENT

ರಾಜಸ್ಥಾನ ರಾಜಕೀಯ | ಬಿಜೆಪಿ ಷಡ್ಯಂತ್ರದಲ್ಲಿ ರಾಜ್ಯಪಾಲರೂ ಭಾಗಿ: ಸಿದ್ದರಾಮಯ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜುಲೈ 2020, 13:47 IST
Last Updated 27 ಜುಲೈ 2020, 13:47 IST
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ   

ಬೆಂಗಳೂರು: 'ರಾಜಸ್ಥಾನದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಹೊರಟಿರುವ ಬಿಜೆಪಿಯವರದು ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿ ನಡೆ. ಬಿಜೆಪಿಯ ಈ ಷಡ್ಯಂತ್ರದಲ್ಲಿ ರಾಜ್ಯಪಾಲರೂ ಭಾಗಿಯಾಗಿದ್ದಾರೆ' ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಸಚಿವ ಸಂಪುಟದ ತೀರ್ಮಾನದಂತೆ ನಡೆದುಕೊಳ್ಳುವುದು ರಾಜ್ಯಪಾಲರ ಕರ್ತವ್ಯ. ಆದರೆ, ರಾಜಸ್ಥಾನದಲ್ಲಿ ಬಿಜೆಪಿಗೆ ಸಹಕಾರ ನೀಡುವ ಮೂಲಕ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟಿಸಿದ್ದಾರೆ.

'ಇಡೀ ದೇಶದಲ್ಲಿ ಆಪರೇಷನ್ ಕಮಲ ಎಂಬುದು ಚಾಲ್ತಿಗೆ ಬಂದಿದ್ದರೆ ಅದು ಬಿ.ಎಸ್‌.ಯಡಿಯೂರಪ್ಪ ಅವರಿಂದ. ಅವರೇ ಆಪರೇಷನ್ ಕಮಲದ ಪಿತಾಮಹ. ಅದಕ್ಕೂ ಮುಂಚೆ ಇಂತಹ ಯಾವ ಆಪರೇಷನ್‌ಗಳು, ಸರ್ಜರಿಗಳು ನಡೆದಿರಲಿಲ್ಲ. ಇದೀಗ ಪ್ರಜಾಪ್ರಭುತ್ವಕ್ಕೆ ಮಾರಕವಾದ ಆಪರೇಷನ್ ಕಮಲದ ಸೋಂಕು ರಾಷ್ಟ್ರವ್ಯಾಪಿ ಹಬ್ಬುತ್ತಿದೆ. ಈ ಹಿಂದೆ ಬಿಜೆಪಿಯವರು ಮಧ್ಯಪ್ರದೇಶದ ಸರ್ಕಾರ ಉರುಳಿಸಿದರು. ಇದೀಗ ರಾಜಸ್ಥಾನ ಸರ್ಕಾರ ಕೆಡವಲು ಹೊರಟಿದ್ದಾರೆ' ಎಂದಿದ್ದಾರೆ.

ADVERTISEMENT

ನಿತ್ಯ ಚಿಕಿತ್ಸೆ ಸಿಗದೆ ಸಾವಿರಾರು ಮಂದಿ ಕೊರೊನಾ ಸೋಂಕಿನಿಂದ ಸಾವಿಗೀಡಾಗುತ್ತಿದ್ದಾರೆ, ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಳಜಿ ಇದೆಯೇ ಎಂದು ಪ್ರಶ್ನಿಸಿದ್ದಾರೆ.

ಪೊಲೀಸರು ಕಾನೂನುಬದ್ಧವಾಗಿ ನಡೆದುಕೊಂಡು ನಮಗೆ ಪ್ರತಿಭಟಿಸಲು ಹಾಗೂ ರಾಜ್ಯಪಾಲರ ಕಚೇರಿಗೆ ಹೋಗಲು ಅವಕಾಶ ಮಾಡಿಕೊಡಬೇಕು. ಇದು ನಮ್ಮ ಹಕ್ಕು ಕೂಡ.‌ ಪೊಲೀಸ್ ಇಲಾಖೆ ಆಳುವ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯದೆ, ನಿಷ್ಪಕ್ಷಪಾತವಾಗಿ ವರ್ತಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿಯುತವಾಗಿ ಅನ್ಯಾಯವನ್ನು ಪ್ರತಿಭಟಿಸಲು ಸಂವಿಧಾನ ಎಲ್ಲರಿಗೂ ಅವಕಾಶ ಕೊಟ್ಟಿದೆ ಎಂದು ಸರಣಿ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.