ADVERTISEMENT

ಆಪರೇಷನ್ ‌ಕಮಲಕ್ಕೆ ಪಾಪದ ಹಣ: ಸಿದ್ದರಾಮಯ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 9:10 IST
Last Updated 27 ಜೂನ್ 2022, 9:10 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಕೊಪ್ಪಳ: ಪ್ರಜಾಪ್ರಭುತ್ವಕ್ಕೆ ಆಪರೇಷನ್ ಕಮಲ ‌ಮಾರಕ‌ ಎನ್ನುವುದು ಗೊತ್ತಿದ್ದರೂ ಬಿಜೆಪಿ ಪಾಪದ ಹಣದಿಂದ ಈ‌ ಕೆಲಸ ಮಾಡುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.

ಸಿಂಧನೂರಿಗೆ ತೆರಳುವ ಮುನ್ನ ಇಲ್ಲಿಗೆ ಸಮೀಪದ ಬಸಾಪುರ ಬಳಿ‌ ಇರುವ ಖಾಸಗಿ ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಬಿಜೆಪಿ ಈಗ ಮಾಡುತ್ತಿರುವುದು ಎನು? ಎಂದು ಪ್ರಶ್ನಿಸಿದರು.

ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಬಿಜೆಪಿಯವರು ಟೀಕಿಸುತ್ತಾರೆ. ಹಾಗಾದರೆ ಇವರು ಈಗ ಮಾಡುತ್ತಿರುವುದು ಎನು? ಮಧ್ಯ ಪ್ರದೇಶ ಸರ್ಕಾರ ಕಿತ್ತು ಹಾಕಿದವರು ಯಾರು? ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ತೆಗೆದು ಹಾಕಿದವರು ಯಾರು? ಆಪರೇಷನ್ ಕಮಲ ಶುರು ಮಾಡಿದ್ದು ಯಾರು? ಎಂದು ಪ್ರಶ್ನೆಗಳ‌‌ ಮಳೆ ಸುರಿಸಿದರು.

ADVERTISEMENT

ಆಪರೇಷನ್ ಕಮಲಕ್ಕೆ ಬಿಜೆಪಿ ಪಾಪದ ಹಣ ಖರ್ಚು ಮಾಡುತ್ತಿದೆ. ಇದೆಲ್ಲ ಲೂಟಿ ಮಾಡಿದ ಹಣ. ಒಬ್ಬ ಶಾಸಕನಿಗೆ
₹25 ರಿಂದ ₹30 ಕೋಟಿ ಹಣ ಕೊಡುತ್ತಾರೆ. ಇದಕ್ಕೆಲ್ಲ ಎಲ್ಲಿಂದ ಹಣ ಬರುತ್ತದೆ. ಸರ್ಕಾರದಲ್ಲಿ ಶೇ 40ರಷ್ಟು ಕಮಿಷನ್ ಇದೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಬಳಿ ದುಡ್ಡಿದೆ. ಅಧಿಕಾರ ಇದೆ. ಹಾಗಾಗಿ ಅವರು ಎಲ್ಲ ಕಡೆ ಆಪರೇಷನ್ ಮಾಡುತ್ತಾರೆ ಎಂದರು.

ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗುವುದಾಗಿ‌‌‌ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿ ಜನ ಯಾರಿಗೆ ಆಶೀರ್ವಾದ ಮಾಡುತ್ತಾರೊ ಅವರು ಸಿಎಂ ಆಗುತ್ತಾರೆ. ನಾನೇ ಸಿಎಂ ಆಗುತ್ತೇನೆ ಎಂದು ಕಾದು ಕುಳಿತುಕೊಳ್ಳಲು ಆಗುತ್ತದೆಯೇ ಎಂದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಯಾವ ಸ್ಥಾನಕ್ಕೆ ಹೋಗಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಆ ಪಕ್ಷ ಮತ್ತೆ ಅಧಿಕಾರಕ್ಕೆ ‌ಬರುತ್ತಾ ಎಂದು ವ್ಯಂಗ್ಯವಾಡಿದರು.

ನನ್ನನ್ನು ಕಂಡರೆ ಆರ್‌ಎಸ್‌ಎಸ್ಹಾಗೂ ಜೆಡಿಎಸ್‌ಗೆ ಭಯ. ಇದೇ ಕಾರಣಕ್ಕಾಗಿ‌ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.