
ಬೆಂಗಳೂರು: ‘ರಾಜಕೀಯ ಶಾಶ್ವತ ಅಲ್ಲ. ನಮ್ಮಪ್ಪನ ಆಸ್ತಿಯೂ ಅಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿರುವ ‘ಅಸ್ಪಷ್ಟ’ ಮಾತುಗಳ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಮಂತ್ರಣದ ಮೇರೆಗೆ, ಅವರ ಮನೆಗೆ ಮಂಗಳವಾರ ಬೆಳಿಗ್ಗೆ ಸಿದ್ದರಾಮಯ್ಯ ಹೋಗಿದ್ದರು. ಅಲ್ಲಿ ಶಿವಕುಮಾರ್ ಜತೆಗೆ ಉಪಹಾರ ಸೇವಿಸಿದ ಸಿದ್ದರಾಮಯ್ಯ ಅವರು ವಿಧಾನಸೌಧಕ್ಕೆ ಬಂದಿದ್ದರು. ಅಲ್ಲಿಂದ ಹೊರಡುವಾಗ, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ, ಮದ್ದೂರು ಶಾಸಕ ಉದಯ ಕದಲೂರು ಅವರಿಗೆ ಎದುರಾದರು.
ಈ ವೇಳೆ, ಗೋಪಾಲಕೃಷ್ಣ ಅವರು ಸಿದ್ದರಾಮಯ್ಯ ಅವರನ್ನು ಮಾತಿಗೆ ಎಳೆದರು. ಅಗ ನಗುತ್ತಲೇ ಮಾತನಾಡಿದ ಸಿದ್ದರಾಮಯ್ಯ ಅವರು, ‘ಏನು ಆಗುತ್ತದೆಯೋ ಆಗಲಿ. ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದು ಅಲ್ಲಿಂದ ನಡೆದರು.
ಇಬ್ಬರ ನಡುವಣ ಈ ಮಾತುಕತೆಯ ದೃಶ್ಯದಲ್ಲಿ ಧ್ವನಿ ಸ್ಪಷ್ಟವಾಗಿಲ್ಲ. ಗೋಪಾಲಕೃಷ್ಣ ಅವರು ಕೇಳಿದ ಪ್ರಶ್ನೆ ಯಾವುದು ಎಂಬುದು ಕೇಳದಿದ್ದರೂ ಸಿದ್ದರಾಮಯ್ಯ ಅವರು, ‘ರಾಜಕೀಯ ಶಾಶ್ವತ ಅಲ್ಲ’ ಎಂಬುದು ಮಾತ್ರ ಗಟ್ಟಿಯಾಗಿ ಕೇಳುತ್ತದೆ.
‘ನಮ್ಮಲ್ಲಿ ಭಿನ್ನಾಭಿಪ್ರಾಯಗಳಿಲ್ಲ. ಒಗ್ಗಟ್ಟಿನಿಂದ ಇದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದರೆ ‘ನಮ್ಮದು ಒಂದೇ ಧ್ವನಿ. ಯಾವುದೇ ಗೊಂದಲ ಇಲ್ಲ. ಇಬ್ಬರೂ ಜೊತೆಯಾಗಿ ಸರ್ಕಾರವನ್ನು ಮುನ್ನಡೆಸುತ್ತೇವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದನಿಗೂಡಿಸಿದರು.
ಆ ಮೂಲಕ ‘ನಾಯಕತ್ವ ವಿಚಾರದಲ್ಲಿ ನಮ್ಮ ನಡುವೆ ಯಾವುದೇ ಒಡಕು ಇಲ್ಲ. ರಾಹುಲ್ ಗಾಂಧಿ ಏನು ತೀರ್ಮಾನ ಮಾಡುತ್ತಾರೊ ಅದರಂತೆ ಹೈಕಮಾಂಡ್ ಹೇಳಿದಂತೆ ಇಬ್ಬರೂ ನಡೆದುಕೊಳ್ಳುತ್ತೇವೆ. ಸಮಯ ಸಿಕ್ಕಿದರೆ ಹೈಕಮಾಂಡ್ ಅವಕಾಶ ನೀಡಿದರೆ ಹೋಗಿ ಭೇಟಿ ಮಾಡುತ್ತೇವೆ’ ಎಂದು ಹೇಳುವ ಮೂಲಕ ಮತ್ತೊಮ್ಮೆ ಒಗ್ಗಟ್ಟು ತೋರಿಸಿದರು.
‘ನಾನು ಮತ್ತು ಉಪ ಮುಖ್ಯಮಂತ್ರಿ ಸಹೋದರರಿದ್ದಂತೆ. ಇವತ್ತು ಒಗ್ಗಟ್ಟಾಗಿ ಇರುವುದಲ್ಲ ಮೊನ್ನೆಯೂ ಒಗ್ಗಟ್ಟಾಗಿದ್ದಲ್ಲ. ನಾವು ಯಾವಾಗಲೂ ಒಗ್ಗಟ್ಟಾಗಿದ್ದೇವೆ. ಒಂದೇ ಪಕ್ಷದಲ್ಲಿದ್ದು ಒಂದೇ ಸಿದ್ಧಾಂತ ನಂಬಿದ್ದೇವೆ. 2028ರ ವಿಧಾನಸಭಾ ಚುನಾವಣೆಯಲ್ಲಿಯೂ ಒಟ್ಟಿಗೆ ಕೆಲಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ’ ಎಂದು ಹೇಳಿದರು.
ಅಧಿಕಾರ ಹಸ್ತಾಂತರದ ವಿಷಯದಲ್ಲಿ ಎದ್ದಿದ್ದ ಗೊಂದಲ ನಿವಾರಿಸಿಕೊಳ್ಳುವಂತೆ ಉಭಯ ನಾಯಕರಿಗೆ ಆ ಪಕ್ಷದ ಹೈಕಮಾಂಡ್ ಸೂಚನೆ ನೀಡಿತ್ತು. ಸಿದ್ದರಾಮಯ್ಯ ಅವರ ನಿವಾಸದಲ್ಲಿ ಶನಿವಾರ (ನ. 29) ನಡೆದ ಉಪಾಹಾರ ಸಭೆಯ ಮುಂದುವರೆದ ಭಾಗವಾಗಿ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರದಲ್ಲಿರುವ ಮನೆಯಲ್ಲಿ ಸಿದ್ದರಾಮಯ್ಯ ಮಂಗಳವಾರ ಬೆಳಿಗ್ಗೆ ಉಪಾಹಾರ ಸೇವಿಸಿದರು. ಒಂದು ಗಂಟೆಗೂ ಹೆಚ್ಚು ತಾಸು ಉಭಯ ನಾಯಕರು ವಿಚಾರವಿನಿಮಯ ನಡೆಸಿದರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿ ‘ಕಾಂಗ್ರೆಸ್‌ನ ಯಾವ ಶಾಸಕರಲ್ಲಿಯೂ ಭೇದವಿಲ್ಲ. ಶಾಸಕರು ತಮ್ಮ ಅಭಿಪ್ರಾಯಗಳನ್ನು ನೀಡಿದ್ದಾರೆ ಅಷ್ಟೇ. ಕಾಂಗ್ರೆಸ್‌ನ ಎಲ್ಲ ಶಾಸಕರೂ ಅಧಿವೇಶನದಲ್ಲಿ ಭಾಗವಹಿಸಿ ವಿರೋಧ ಪಕ್ಷಗಳನ್ನು ಒಗ್ಗಟ್ಟಿನಿಂದ ಎದುರಿಸಲಿದ್ದಾರೆ’ ಎಂದು ಸಿದ್ದರಾಮಯ್ಯ ತಿಳಿಸಿದರು.
ಸಚಿವ ಸಂಪುಟ ಪುನರ್‌ರಚನೆ ಬಗ್ಗೆ ಕೇಳಿದ ಪ್ರಶ್ನೆಗೆ ‘ಪಕ್ಷದ ವರಿಷ್ಠರು ತೀರ್ಮಾನಿಸಬೇಕಾಗಿದೆ’ ಎಂದರು. ‘ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುವುದು ಯಾವಾಗ’ ಎಂದು ಕೇಳಿದಾಗ ‘ಹೈಕಮಾಂಡ್ ತೀರ್ಮಾನಿಸಿದಾಗ’ ಎಂದರು. ‘ಬೆಳಗಾವಿ ಅಧಿವೇಶನ ಡಿಸೆಂಬರ್ 8ರಂದು ಆರಂಭವಾಗಲಿದೆ. ವಿಪಕ್ಷಗಳು ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಮಾಹಿತಿ ಪತ್ರಿಕೆಗಳಿಂದ ಗೊತ್ತಾಗಿದೆ. ವಿಪಕ್ಷಗಳನ್ನು ಎದುರಿಸಲು ಸರ್ಕಾರದ ರಣನೀತಿಗಳ ಬಗ್ಗೆ ನಾವಿಬ್ಬರೂ ಚರ್ಚಿಸಿದ್ದೇವೆ. ಅಲ್ಲದೆ ವಿಪಕ್ಷಗಳು ಕೇಳಬಹುದಾದ ಪ್ರಶ್ನೆಗಳನ್ನು ಸಮರ್ಥವಾಗಿ ಸರ್ಕಾರ ಎದುರಿಸಲಿದೆ. ಕಬ್ಬು ಮೆಕ್ಕೆಜೋಳದ ಸಮಸ್ಯೆ ಸೇರಿದಂತೆ ರಾಜ್ಯದ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಈ ಅಧಿವೇಶನದಲ್ಲಿ ಪ್ರಯತ್ನಿಸುತ್ತೇವೆ’ ಎಂದೂ ಮುಖ್ಯಮಂತ್ರಿ ಹೇಳಿದರು.
‘ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ನಾನು ಬುಧವಾರ ಮಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜೊತೆಯಲ್ಲಿರುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.