ADVERTISEMENT

ಸಿ.ಟಿ. ರವಿಯವರೇ ಆರ್‌ಎಸ್‌ಎಸ್ ಎಂದರೇನು? ಬಿಜೆಪಿಗೆ ಸಂಬಂಧ ಏನು?: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 17:26 IST
Last Updated 28 ಸೆಪ್ಟೆಂಬರ್ 2021, 17:26 IST
   

ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಆರ್‌ಎಸ್ಎಸ್ ಅನ್ನು ತಾಲಿಬಾನ್‌ಗೆ ಹೋಲಿಸಿದ ಬಳಿಕ ಸಿ.ಟಿ. ರವಿ ತಿರುಗೇಟು ನೀಡುವ ಮೂಲಕ ಆರಂಭವಾದ ವಾಕ್ಸಮರ ಮತ್ತಷ್ಟು ಮುಂದುವರಿದಿದೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿಗೆ ಮತ್ತೆ ಸರಣಿ ಟ್ವೀಟ್ ಮೂಲಕ ಸಿದ್ದರಾಮಯ್ಯ ಮತ್ತಷ್ಟು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

‘ತಾಲಿಬಾನ್‌ ಏನು, ಬಿಜೆಪಿ ಏನು, ಆರ್‌ಎಸ್‌ಎಸ್‌ ಏನು ಎಂಬುದನ್ನು ಅರ್ಥ ಮಾಡಿಕೊಳ್ಳದಷ್ಟು ಏನಾದರೂ ವ್ಯತ್ಯಾಸ ಆಗಿದೆಯೇ’ ಎಂದು ಸಿ.ಟಿ. ರವಿ ಪ್ರಶ್ನಿಸಿದ್ದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಆರ್ ಎಸ್ ಎಸ್ ಎಂದ ಕೂಡಲೇ ಉರಿದು ಬೀಳುವ ಸಿ.ಟಿ. ರವಿಯವರೇ ಆರ್ ಎಸ್ ಎಸ್ ಎಂದರೆ ಏನು? ಅದರ ಜೊತೆ ಬಿಜೆಪಿ ಸಂಬಂಧ ಏನು? ಆರ್ ಎಸ್ ಎಸ್ ಎಂದರೆ ಏನು ಸಾಮಾಜಿಕ ಸೇವಾ ಸಂಘಟನೆಯೇ? ಸಾರ್ವಜನಿಕ ದತ್ತಿಯೇ? ಇಲ್ಲವೇ ಬಿಜೆಪಿ ಎಂಬ ರಾಜಕೀಯ ಪಕ್ಷಕ್ಕೆ ನಾಯಕರನ್ನುಉತ್ಪಾದಿಸಿ ಕೊಡುವ ಕಾರ್ಖಾನೆಯೇ? ಎಂದು ಪ್ರಶ್ನಿಸಿದ್ದಾರೆ.

ಆರ್ ಎಸ್ ಎಸ್ ಎನ್ನುವುದು ಹಿಂದುಗಳ ಸಂಘಟನೆ ಎಂದು ನೀವು ಹೇಳುವುದಾದಾರೆ ಬಿಜೆಪಿಯಲ್ಲಿರುವವರು ಮಾತ್ರ ಹಿಂದೂಗಳೇ? ಬೇರೆ ಪಕ್ಷದವರು ಹಿಂದೂಗಳಲ್ಲವೇ? ದೆಹಲಿಯಲ್ಲಿ 10 ತಿಂಗಳಿಂದ ಬೀದಿಯಲ್ಲಿರುವವರು ಹಿಂದುಗಳಲ್ಲವೇ? ವಾರದ ಹಿಂದೆ ಉತ್ತರಪ್ರದೇಶದಲ್ಲಿ ಅತ್ಯಾಚಾರಕ್ಕೀಡಾದ ದಲಿತ ಯುವತಿ ಹಿಂದು ಅಲ್ಲವೇ?

‘ಸುಳ್ಳು ಮತ್ತು ಸಿದ್ದರಾಮಯ್ಯ ಒಂದೇ ನಾಣ್ಯದ ಎರಡು ಮುಖಗಳು. ಅವರು ಸುಳ್ಳುರಾಮಯ್ಯ ಆಗಿದ್ದಾರೆ. ವಯಸ್ಸಾದ ಮೇಲೆ ಕಣ್ಣಿನ ಪೊರೆ ಜಾಸ್ತಿ ಆಗುತ್ತಂತೆ. ಅವರಿಗೆ ಯಾವ್ಯಾವ ಪೊರೆ ಬೆಳೆದಿದೆಯೋ ಗೊತ್ತಿಲ್ಲ. ಅದೇ ಕಾರಣಕ್ಕೆ ತಾಲಿಬಾನ್‌ ಮತ್ತು ಆರ್‌ಎಸ್‌ಎಸ್‌ ಒಂದೇ ತರ ಕಾಣುತ್ತಿದೆ. ಪೊರೆ ಸರಿಸಿದರೆ ತಾಲಿಬಾನ್ ಏನೆಂದು ಗೊತ್ತಾಗುತ್ತದೆ. ತಾಲಿಬಾನ್‌ ಇದ್ದರೆ ಸಿದ್ದರಾಮಯ್ಯ ಬದುಕಲು ಸಾಧ್ಯವಿತ್ತೇ’ ಎಂಬ ಸಿ.ಟಿ. ರವಿ ಟೀಕೆಗೆಸಿದ್ದರಾಮಯ್ಯ ಉತ್ತರಿಸಿದ್ದಾರೆ.

ಆರ್ ಎಸ್ ಎಸ್ ಸಾಂಸ್ಕೃತಿಕ ಸಂಘಟನೆ ಎಂದಾದರೆ. ಅದರ ಸಂಸ್ಕೃತಿಯ ವ್ಯಾಖ್ಯಾನವೇನು? ನಿನ್ನೆ ತಾನೆ ಮಂಗಳೂರಿನಲ್ಲಿ ಅಮಾಯಕ ವಿದ್ಯಾರ್ಥಿ-ವಿದ್ಯಾರ್ಥಿನಿಗಳ ಮೇಲೆ ನಿಮ್ಮ ಪರಿವಾರದ ಗೂಂಡಾಗಳು ನಡೆಸಿದ ದೌರ್ಜನ್ಯ ಕೂಡಾ ಈ ಸಂಸ್ಕೃತಿಯಲ್ಲಿ ಸೇರಿದೆಯೇ?

ದೇಶ ಮತ್ತು ಹಿಂದೂಗಳ ರಕ್ಷಣೆ ಮಾಡಲು ಆರ್ ಎಸ್ ಎಸ್ ನಾಯಕರಿಗೆ ಗುತ್ತಿಗೆ ಕೊಟ್ಟವರಾರು? ಆರ್ ಎಸ್ ಎಸ್ ನಾಯಕರೇನು ಜನರಿಂದ ಚುನಾಯಿತರಾದ ನಾಯಕರೇ? ಅವರು ಯಾಕೆ ಚುನಾವಣೆಯಲ್ಲಿ‌ ಸ್ಪರ್ಧಿಸಬಾರದು? ನಿಮ್ಮ ಎರಡು ಸಂಘಟನೆಗಳ ನಡುವೆ ಮುಖ ಯಾವುದು? ಮುಖವಾಡ ಯಾವುದು? ಸಿ.ಟಿ. ರವಿ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ನಾನು ಮತ್ತು ನನ್ನಂತಹ ಕೋಟ್ಯಂತರ ಜನ ನಿರ್ಭೀತಿ ಮತ್ತು ಆತ್ಮಗೌರವದಿಂದ ಬದುಕುತ್ತಿರುವುದು ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದಿಂದ. ನಿಮ್ಮ ಪರಿವಾರದ ತಾಲಿಬಾನ್‌ಗಿರಿಯನ್ನು ಅದೇ ಸಂವಿಧಾನದಿಂದ ಹಿಮ್ಮೆಟ್ಟಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ,


‘ಒಂದು ವೇಳೆ ತಾಲಿಬಾನ್‌ ಭಾರತದಲ್ಲಿ ಇದ್ದಿದ್ದರೆ ಸಿದ್ದರಾಮಯ್ಯ ಬದುಕಲು ಸಾಧ್ಯವಿತ್ತೇ? ಅಂತಹ (ಅಘ್ಗನ್) ಸ್ಥಿತಿ ಇಲ್ಲಿ ಇದ್ದರೆ ಪಂಚೆ ಮಾತ್ರ ನೇತಾಡುತ್ತಿರಲಿಲ್ಲ. ಅವರೂ ನೇತಾಡುವ ಸ್ಥಿತಿ ಇರುತ್ತಿತ್ತು’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿಕೆಗೆ ಸಿದ್ದರಾಮಯ್ಯ ಜೋರಾಗಿಯೇ ಪ್ರಶ್ನಿಸಿದ್ದಾರೆ.

ರೈತನ ಮಗ ಎನ್ನುತ್ತೀರಿ, ನಾನು ಉಡುವ ರೈತ ಮಕ್ಕಳ ಪಂಚೆಯನ್ನು ಗೇಲಿ ಮಾಡುತ್ತೀರಿ. ನಿಮ್ಮ ತಂದೆ ಕೂಡಾ ಪಂಚೆ ಉಡುವವರು ಎಂದು ಅಂದುಕೊಳ್ತೀನಿ.
ನಿಮ್ಮಂತಹ ಮಗನ ಬಗ್ಗೆ ಅವರೇನು ಅಂದುಕೊಳ್ಳಬಹುದು ಯೋಚಿಸಿದ್ದೀರಾ? ಈ ರೀತಿ ನಾಲಿಗೆ ಸಡಿಲ ಬಿಟ್ಟು ಮನೆಗೆ ಹೋಗುವಾಗ ಹುಷಾರಾಗಿರಿ.

ಕೊನೆಯದಾಗಿ, ಸಿ.ಟಿ. ರವಿ ಅವರೇ? ಕಣ್ಣಿಗೆ ಪೊರೆ ಬಂದವರು ಕತ್ತಲಲ್ಲಿ ಕಾರು ಚಲಾಯಿಸಬಾರದು, ಅಪಘಾತವಾಗಿ ಅಮಾಯಕರು ಜೀವ ಕಳೆದುಕೊಳ್ಳುತ್ತಾರೆ.ಪೊರೆ ಬಂದಿದ್ದರೆ ಕ್ಯಾಟಾರಕ್ಟ್ ಮಾಡಿಸಿಕೊಳ್ಳಿ. ಸಾರ್ವಜನಿಕರ ಜೀವ ಮುಖ್ಯ ಎಂದು ಕುಟುಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.