ಸಿದ್ದರಾಮಯ್ಯ , ಮುಖ್ಯಮಂತ್ರಿ
ಬೆಂಗಳೂರು/ ಬೆಳಗಾವಿ: ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಿಂದ ಮತಾಂತರಕ್ಕೆ ಹೇಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂಬುದನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಸ್ಪಷ್ಟಪಡಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.
‘ರಾಜ್ಯ ಸರ್ಕಾರದ ಜಾತಿಗಣತಿಯು ಹಿಂದೂಗಳನ್ನು ಮತಾಂತರಕ್ಕೆ ಪ್ರೋತ್ಸಾಹಿಸುತ್ತದೆ’ ಎಂದು ಪ್ರಲ್ಹಾದ ಜೋಶಿ ಅವರು ಟೀಕಿಸಿದ್ದರು. ಇದಕ್ಕೆ, ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಶನಿವಾರ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಜೋಶಿ ಅವರನ್ನು ಪ‍್ರಶ್ನಿಸಿದರು.
‘ಜನರ ಸಾಮಾಜಿಕ ಮತ್ತು ಆರ್ಥಿಕ ವಿವರಗಳನ್ನು ಕಲೆ ಹಾಕುವುದರಿಂದ ಮತಾಂತರಕ್ಕೆ ಹೇಗೆ ಪ್ರೋತ್ಸಾಹ ನೀಡಿದಂತಾಗುತ್ತದೆ? ಜಾತಿಗಳನ್ನು ಹೇಗೆ ಒಡೆದಂತಾಗುತ್ತದೆ’ ಎಂದೂ ಅವರು ಪ್ರಶ್ನಿಸಿದರು.
‘ಕೇಂದ್ರ ಸರ್ಕಾರವು ಮುಂದಿನ ವರ್ಷ ಜಾತಿ ಗಣತಿ ನಡೆಸಲಿದೆ. ಆ ಮೂಲಕ ಕೇಂದ್ರ ಸರ್ಕಾರವು ಜನರನ್ನು ಮತಾಂತರಕ್ಕೆ ಪ್ರೋತ್ಸಾಹಿಸಲಿದೆಯೇ ಅಥವಾ ಜಾತಿಗಳನ್ನು ಒಡೆಯಲು ಯತ್ನಿಸಲಿದೆಯೇ ಎಂಬುದನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಸ್ಪಷ್ಟಪಡಿಸಬೇಕು’ ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.
‘ರಾಜ್ಯ ಸರ್ಕಾರದ ಸಮೀಕ್ಷೆಯು ಜಾತಿ ಗಣತಿ ಅಲ್ಲ. ಕೇಂದ್ರ ಸರ್ಕಾರ ನಡೆಸಲು ಹೊರಟಿರುವುದು ಜಾತಿ ಗಣತಿ. ಎರಡಕ್ಕೂ ಬಹಳ ವ್ಯತ್ಯಾಸವಿದೆ. ಬಿಜೆಪಿಯವರು ಈ ವ್ಯತ್ಯಾಸವನ್ನು ಅರಿತುಕೊಳ್ಳಲಿ’ ಎಂದ ಅವರು, ‘ನೀವೂ ಸಹ ಅವರು ಹೇಳಿದ್ದೆಲ್ಲವನ್ನೂ ಇಲ್ಲಿ ಪ್ರಶ್ನಿಸಬೇಡಿ. ನಿಮ್ಮದೇ ಪ್ರಶ್ನೆಗಳಿದ್ದರೆ ಕೇಳಿ’ ಎಂದು ಸುದ್ದಿಗಾರರಿಗೆ ಕಿವಿಮಾತು ಹೇಳಿದರು.
‘ಬಿಜೆಪಿಯವರಿಗೆ ಸಮೀಕ್ಷೆ ಬೇಕಾಗಿಲ್ಲ’: ‘ಬಿಜೆಪಿ ಹಾಗೂ ಆರ್‌ಎಸ್‌ಎಸ್ ಹಿಂದುಳಿದ ವರ್ಗಗಳು, ದಲಿತರು ಮತ್ತು ಅಲ್ಪಸಂಖ್ಯಾತರ ಪರವಾಗಿ ಯಾವತ್ತಿಗೂ ನಿಂತಿರಲಿಲ್ಲ. ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆಯಿಂದ ಈ ವರ್ಗಗಳಿಗೆ ಅನುಕೂಲವಾಗಲಿದೆ. ಬಿಜೆಪಿಯವರಿಗೆ ಇದು ಬೇಕಾಗಿಲ್ಲ. ಹೀಗಾಗಿಯೇ ಸಮೀಕ್ಷೆಯನ್ನು ವಿರೋಧಿಸುತ್ತಿದ್ದಾರೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಸಮೀಕ್ಷೆ ಕುರಿತಾಗಿ ಪ್ರಲ್ಹಾದ ಜೋಶಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅವರು, ‘ಆರ್‌ಎಸ್‌ಎಸ್ ತನ್ನ ನೂರು ವರ್ಷಗಳ ಇತಿಹಾಸದಲ್ಲಿ ಎಂದಿಗೂ ದಮನಿತರ ಪರವಾಗಿ ನಿಂತಿರಲಿಲ್ಲ. ಈಗ ಬಿಜೆಪಿ ಕಾರ್ಯಕರ್ತರು, ಮನೆ–ಮನೆಗೆ ಹೋಗಿ ಸಮೀಕ್ಷೆಗೆ ವಿವರ ನೀಡಬೇಡಿ ಎಂದು ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.