ADVERTISEMENT

‘ಆಡಳಿತ ಪಕ್ಷದವರೇ ಬೀದಿಗಿಳಿದು ಹೋರಾಡುತ್ತಿರುವುದು ಯಾರ ವಿರುದ್ಧ?’

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2021, 21:53 IST
Last Updated 14 ಫೆಬ್ರುವರಿ 2021, 21:53 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ರಾಜ್ಯದಲ್ಲಿ ಆಡಳಿತ ಪಕ್ಷದವರೇ ಮೀಸಲಾತಿಗಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿರುವುದು ಯಾರ ವಿರುದ್ಧ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

‘#ಸಾಮಾಜಿಕನ್ಯಾಯ’ ಹ್ಯಾಷ್‌ಟ್ಯಾಗ್‌ನಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು, ‘ಮರೆತುಬಿಟ್ಟಿದ್ದರೆ ನೆನಪಿಸ ಬಯಸುತ್ತೇನೆ. ಕೇಂದ್ರ ಹಾಗೂ ರಾಜ್ಯದಲ್ಲಿರುವುದು ಬಿಜೆಪಿ. ಕೇಂದ್ರದಲ್ಲಿರುವುದು ಪ್ರಧಾನಿ ನರೇಂದ್ರ ಮೋದಿ. ರಾಜ್ಯದಲ್ಲಿರುವುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ’ ಎಂದು ವ್ಯಂಗ್ಯವಾಡಿದ್ದಾರೆ.

‘ಮೀಸಲಾತಿ ಹೆಚ್ಚಳಕ್ಕಾಗಿ ಆಧಾರ ಕೋರುತ್ತಿರುವ ನ್ಯಾಯಾಲಯಕ್ಕೆ, ಕರ್ನಾಟಕದಲ್ಲಿ ನಡೆದಿರುವ ಸಾಮಾಜಿಕ-ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯೇ ಉತ್ತರ. ರಾಜ್ಯ ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಳದ ಪರವಾಗಿದ್ದರೆ ಮೊದಲು ಈ ಸಮೀಕ್ಷೆಯನ್ನು ಸ್ವೀಕರಿಸಿ, ಶಿಫಾರಸುಗಳನ್ನು ಅನುಷ್ಠಾನಗೊಳಿಸಬೇಕು’ ಎಂದು ಆಗ್ರಹಿಸಿದ್ದಾರೆ.

ADVERTISEMENT

‘ಈಗಿನ ಮೀಸಲಾತಿ ಬದಲಾವಣೆ- ಹೆಚ್ಚಳದ ಬೇಡಿಕೆಗೆ ತಮಿಳುನಾಡಿನ ಮಾದರಿಯಲ್ಲಿ ಕರ್ನಾಟಕದ ಮೀಸಲಾತಿಯನ್ನು ಶೇ 73ಕ್ಕೆ ಹೆಚ್ಚಿಸಬೇಕೆಂದು ಕಾಂಗ್ರೆಸ್ ಸರ್ಕಾರವೇ ಮಾಡಿರುವ ಕಾನೂನು ಮಾತ್ರ ಪರಿಹಾರ. ಅದರ ಅನುಷ್ಠಾನ ಕೇಂದ್ರದ ಕೈಯಲ್ಲಿದೆ’

‘ಮೀಸಲಾತಿ ವಿರೋಧಿಸುತ್ತಲೇ ಬಂದಿರುವ ರಾಜ್ಯ ಬಿಜೆಪಿ ನಾಯಕರು ಸಾಲುಸಾಲಾಗಿ ನಿಂತು ಮೀಸಲಾತಿಗಾಗಿ ಕೂಗೆಬ್ಬಿಸಿರುವುದು ಪ್ರಾಮಾಣಿಕ ಜ್ಞಾನೋದಯವೇ. ಸಾಮಾಜಿಕ ನ್ಯಾಯದ ಹೋರಾಟದ ದಿಕ್ಕುತಪ್ಪಿಸುವ ಇನ್ನೊಂದು ರಾಜಕೀಯ ಷಡ್ಯಂತ್ರವೇ. ಮಂಡಲ್ ವರದಿಯನ್ನು ವಿರೋಧಿಸಿ ಮೈಗೆ ಬೆಂಕಿಹಚ್ಚಿಕೊಂಡವರು ಯಾರು. ಉನ್ನತ ಶಿಕ್ಷಣದಲ್ಲಿ ಮೀಸಲಾತಿ ವಿರೋಧಿಸಿ ಬೀದಿಗಿಳಿದವರು ಯಾರು. ಸ್ಥಳೀಯ ಸಂಸ್ಥೆಗಳಲ್ಲಿನ ಮೀಸಲಾತಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ ರಾಮಾ ಜೋಯಿಸ್ ಯಾವ ಪಕ್ಷದವರು’ ಎಂದು ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.