ADVERTISEMENT

ಟಿಪ್ಪು ಸುಲ್ತಾನ್ ಪಠ್ಯ ಕೈಬಿಟ್ಟರೆ ಇತಿಹಾಸಕ್ಕೆ ಅಪಚಾರ: ಸಿದ್ದರಾಮಯ್ಯ

ಸರ್ಕಾರದ ನಡೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2019, 12:05 IST
Last Updated 30 ಅಕ್ಟೋಬರ್ 2019, 12:05 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬಾಗಲಕೋಟೆ:ಟಿಪ್ಪು ಸುಲ್ತಾನ್‌ ಪಠ್ಯ ಕೈಬಿಟ್ಟರೆ ಇತಿಹಾಸವನ್ನು ತಿರುಚಿದಂತಾಗುತ್ತೆ. ಬ್ರಿಟಿಷರ ವಿರುದ್ಧ ಟಿಪ್ಪು ಹೋರಾಡಿದ್ದು ಸುಳ್ಳಾ... ನಿಜಾನಾ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

ಟಿಪ್ಪು ಹೋರಾಟ ನಿಜ. ಅದನ್ನು ಬದಲಿಸಿ ಬಿಡುತ್ತಾರಾ? ಯಾವುದೇ ಕಾರಣಕ್ಕೂ ಇತಿಹಾಸ ತಿರುಚಬಾರದು. ಮಕ್ಕಳಿಗೆ ಕಲಿಸಬೇಕು, ಇತಿಹಾಸದಿಂದ ಪಾಠ ಕಲಿಯಬೇಕು. ಟಿಪ್ಪುವನ್ನು ಮತಾಂಧರೆಂದು ಬಿಜೆಪಿಯವರು ಕರೆಯುತ್ತಾರೆ. ನಿಜಕ್ಕೂ ಬಿಜೆಪಿಯವರೇ ಮತಾಂಧರು ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಸತ್ತು ಹೋಗಿರುವ ಸರ್ಕಾರ: ‘ಸತ್ತು ಹೋಗಿರುವ ಸರ್ಕಾರ ಮಾತ್ರ ಹೀಗಿರಲು ಸಾಧ್ಯ. ಜೀವಂತವಿದ್ದರೆ ಜನರ ಕಷ್ಟಗಳಿಗೆ ಸ್ಪಂದಿಸಿ. ನಿಮ್ಮ ಜೀವಂತಿಕೆ ತೋರಿಸಿ.‌ ಜನರ ಗಮನ ಬೇರೆ ಕಡೆ ಸೆಳೆಯುವ ಕುತಂತ್ರ ಬೇಡ. ಮೊದಲು ನೆರೆ ಪರಿಹಾರ‌ ಮಾಡಿ ಲೆಕ್ಕಕೊಡಿ, ಆ ಮೇಲೆ ಟಿಪ್ಪು, ಸಾವರ್ಕರ್ ಬಗ್ಗೆ ಮಾತನಾಡೋಣ ಎಂದು ಸಿದ್ದರಾಮಯ್ಯ ಟ್ವಿಟ್‌ ಮಾಡಿದ್ದಾರೆ.

ಟಿಪ್ಪು ಪಠ್ಯ ಕೈಬಿಡುವ ಬಗ್ಗೆ ಅವಿವೇಕದಿಂದ ಹೇಳಿಕೆ ನೀಡಿದ್ದಾರೆ. ಅಜ್ಞಾನಿಗಳು ಮಾತ್ರ ಈ ರೀತಿ ಮಾತನಾಡಲು ಸಾಧ್ಯ ಎಂದುಕೆಪಿಸಿಸಿ ಅಧ್ಯಕ್ಷದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.

ಬೆಂಗಳೂರು ಪ್ರೆಸ್‌ ಕ್ಲಬ್‌ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಟಿಪ್ಪು ಜಯಂತಿ ರದ್ದು ಮತ್ತು ಪಠ್ಯದಿಂದ ಟಿಪ್ಪು ವಿಷಯ ಕೈಬಿಡುವ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಟಿಪ್ಪುವಿಗೆ ಸಂಬಂಧಪಟ್ಟ ವಿಷಯವನ್ನು ಶೇ 101ರಷ್ಟು ತೆಗೆದು ಹಾಕುವುದಾಗಿ ಹೇಳಿದ್ದರು. ಬಳಿಕ ಸಮಜಾಯಿಷಿ ನೀಡಿ, ಈ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇಕಾಂಗ್ರೆಸ್‌ ತೀವ್ರ ವಿರೋಧ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.