ADVERTISEMENT

ಜಮೀರ್‌ ರಾಜಕೀಯ ಚರ್ಚಿಸಿಲ್ಲ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2021, 19:45 IST
Last Updated 15 ಆಗಸ್ಟ್ 2021, 19:45 IST
ತಮ್ಮ ಮನೆಗೆ ಬಂದ ಸಿದ್ದರಾಮಯ್ಯ ಅವರನ್ನು ಜಮೀರ್ ಗೌರವಿಸಿದರು
ತಮ್ಮ ಮನೆಗೆ ಬಂದ ಸಿದ್ದರಾಮಯ್ಯ ಅವರನ್ನು ಜಮೀರ್ ಗೌರವಿಸಿದರು   

ಬೆಂಗಳೂರು: ಚಾಮರಾಜಪೇಟೆಯ ಪಕ್ಷದ ಶಾಸಕ ಜಮೀರ್ ಅಹಮ್ಮದ್ ಖಾನ್ ಅವರ ಮನೆಗೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಭಾನುವಾರ ಭೇಟಿ ನೀಡಿದರು.

ಆಗಸ್ಟ್‌ 5ರಂದು ಜಮೀರ್ ಮನೆ, ಕಚೇರಿ ಮತ್ತು ಸಹೋದರರು, ಸಂಬಂಧಿಕರ ಮನೆಗಳ ಮೇಲೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ದಾಳಿ ನಡೆಸಿ, ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಆ ಬಳಿಕ, ಮೊದಲ ಬಾರಿಗೆ ಸಿದ್ದರಾಮಯ್ಯ ಅವರನ್ನು ಅವರ ನಿವಾಸದಲ್ಲಿ ಜಮೀರ್‌ ಶನಿವಾರ ಭೇಟಿ ಮಾಡಿದ್ದರು.

‘ಐಎಂಎ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ. ನಾನು ಮನೆ ಕಟ್ಟಿರುವುದು ಐಎಂಎ ಹಣದಿಂದ ಎಂದು ಅಪಪ್ರಚಾರ ಮಾಡಲಾಗಿದೆ. ಇದೆಲ್ಲ ಸುಳ್ಳು’ ಎಂದು ಸಿದ್ದರಾಮಯ್ಯ ಬಳಿ ಜಮೀರ್ ಹೇಳಿಕೊಂಡಿದ್ದಾರೆ. ಅದಕ್ಕೆ ಸಿದ್ದರಾಮಯ್ಯ, ಹಿರಿಯ ವಕೀಲರನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ADVERTISEMENT

ಭೇಟಿ ಬಳಿಕ ಮಾತನಾಡಿದ ಸಿದ್ದರಾಮಯ್ಯ, ‘ಜಮೀರ್‌ ಅವರ ಗೃಹಪ್ರವೇಶಕ್ಕೆ ಬರಲು ಆಗಿರಲಿಲ್ಲ. ಹೀಗಾಗಿ, ಜಮೀರ್ ಮನೆಗೆ ಇಂದು ಬಂದಿದ್ದೇನೆ. ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ. ಅವರ ಮೇಲೆ ಇಡಿ ದಾಳಿ ರಾಜಕೀಯ ಪ್ರೇರಿತ’ ಎಂದು ಆರೋಪಿಸಿದರು.

‘ಇಡಿ ದಾಳಿ ಬಗ್ಗೆ ಜಮೀರ್‌ಗೆ ನಾನು ಸಲಹೆ ನೀಡಿಲ್ಲ. ಸಲಹೆ ನೀಡಲು ಅವರ ವಕೀಲರಿದ್ದಾರೆ. ನಮ್ಮ ಪಕ್ಷದ ಕುರಿತು ಮಾತ್ರ ಮಾತನಾಡಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.