
ಸಿದ್ದರಾಮಯ್ಯ
ಬೆಂಗಳೂರು: ವೈವಿಧ್ಯತೆಯ ನಡುವೆ ಮನುಷ್ಯರು ಒಗ್ಗಟ್ಟಾಗಿ ಬಾಳುವ ಸಹೃದಯಿ ಭಾರತ ನಿರ್ಮಾಣ ನಾರಾಯಣ ಗುರುಗಳ ಆಶಯವಾಗಿತ್ತು. ನೈತಿಕತೆ ಇಲ್ಲದ ಅಹಂಕಾರದ ಭಾಷೆಯಲ್ಲಿ ಕೋಮುವಾದ ಮಾತಾಡುವ ಬಗ್ಗೆ ನಾರಾಯಣ ಗುರುಗಳು ಎಚ್ಚರಿಸಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕೇರಳದ ತಿರುವನಂತಪುರಂ ಜಿಲ್ಲೆಯ ಶಿವಗಿರಿ ಮಠದಲ್ಲಿ ಇಂದು ಶ್ರೀ ನಾರಾಯಣ ಧರ್ಮಸಂಗಮ ಟ್ರಸ್ಟ್ ಆಯೋಜಿಸಿರುವ ಮಠದ ಯಾತ್ರಾರ್ಥಿಗಳ ಸಮಾವೇಶದಲ್ಲಿ ಪಾಲ್ಗೊಂಡು ಸಿದ್ದರಾಮಯ್ಯ ಮಾತನಾಡಿದರು. ಈ ಕುರಿತು ಮಾಹಿತಿಯನ್ನು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
ನಾರಾಯಣ ಗುರುಗಳು ಕೇವಲ ಒಬ್ಬ ಸಂತ ಮಾತ್ರ ಆಗಿರಲಿಲ್ಲ. ಸಮಾನತೆ ಮತ್ತು ನೈತಿಕತೆಯ ಚಳವಳಿಯಾಗಿದ್ದರು. ಹೀಗಾಗಿ ಶಿವಗಿರಿ ತೀರ್ಥಯಾತ್ರೆ ಕೂಡ ಚಳವಳಿಯ ಸ್ವರೂಪ ಪಡೆದು ಜಾತಿ ದೌರ್ಜನ್ಯವನ್ನು ಅಳಿಸಿ ಸಮಾಜವನ್ನು ಸಾಮಾಜಿಕ ನ್ಯಾಯದ ಕಡೆ ಮುನ್ನಡೆಸಬೇಕು.ಇದೇ ನಾರಾಯಣ ಗುರುಗಳು ಕಂಡ ಭಾರತ, ಇದೇ ಶಿವಗಿರಿ ಪ್ರತಿಪಾದಿಸುವ ಭಾರತ. ಇಂತಹ ಭಾರತವನ್ನು ನಾವು ಒಟ್ಟಾಗಿ ಗಟ್ಟಿಗೊಳಿಸಬೇಕಿದೆ ಎಂದಿದ್ದಾರೆ.
ಶಿವಗಿರಿ ಮಠವು ಕೇವಲ ಒಂದು ಯಾತ್ರಾ ಕೇಂದ್ರವಾಗಿರದೇ, ಭಾರತದ ಆತ್ಮಸಾಕ್ಷಿಯ ನೈತಿಕ ವಿಶ್ವವಿದ್ಯಾಲಯವಾಗಿದೆ. ಈ ಪವಿತ್ರ ಕ್ಷೇತ್ರದಲ್ಲಿ ನಿಮ್ಮ ಮುಂದೆ ನಿಂತಿರುವುದು ನನ್ನ ಸೌಭಾಗ್ಯ. ಇದು ಬೌದ್ಧಿಕ ಮತ್ತು ವಿಶ್ವದ ಮಾನವಕುಲದ ಚಳವಳಿಯಾಗಿದೆ. ಇದು ಭೌಗೋಳಿಕವಲ್ಲ, ನೈತಿಕತೆಯ ಪ್ರವಾಸ ಎಂದು ಹೇಳಿದ್ದಾರೆ.
ರಾಜಕಾರಣ ನೈತಿಕತೆಯಿಂದ ದೂರವಾಗುತ್ತಾ, ಧರ್ಮವು ನೈತಿಕತೆಗಿಂತ ಹೆಚ್ಚಾಗಿ ಅಧಿಕಾರಕ್ಕಾಗಿ ಆಯುಧವಾಗುತ್ತಿರುವ ಅಪಾಯದ ದಿನಗಳಲ್ಲಿ ಶಿವಗಿರಿ ಒಂದು ನೈತಿಕ ಚಳವಳಿಯಾಗಿ ನಮಗೆ ಆದರ್ಶವಾಗಬೇಕು. ಶಿವಗಿರಿ ಮಠ 'ಜೀವಂತ ಸಂವಿಧಾನ'ದಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಉಲ್ಲೇಖಿಸಿದ್ದಾರೆ.
ಶಿವಗಿರಿ ತೀರ್ಥಯಾತ್ರೆಯು ಭಾರತದ ಮೂಲ 'ಕೋಮು-ವಿರೋಧಿ' ಯೋಜನೆಯಾಗಿದೆ. ಸಮಾಜವು ಕೃತಕವಾಗಿ ಸೃಷ್ಟಿಸಲ್ಪಟ್ಟ ದ್ವೇಷದಿಂದ ಧ್ರುವೀಕರಣಗೊಳ್ಳುತ್ತಿರುವಾಗ, ಶಿವಗಿರಿಯು ಪ್ರಾಬಲ್ಯಕ್ಕಿಂತ 'ಸಂವಾದ'ವನ್ನು, ಶ್ರೇಣೀಕೃತ ವ್ಯವಸ್ಥೆಗಿಂತ 'ಸಮಾನತೆ'ಯನ್ನು ಮತ್ತು ಸಾಂಕೇತಿಕತೆಗಿಂತ 'ನೈತಿಕತೆ'ಯನ್ನು ಎತ್ತಿ ಹಿಡಿಯುತ್ತದೆ ಎಂದಿದ್ದಾರೆ
ಆಧುನಿಕ ರಾಷ್ಟ್ರ ನಿರ್ಮಾಣದಲ್ಲಿ ಶಿವಗಿರಿ ತೀರ್ಥಯಾತ್ರೆಯ ಪಾತ್ರ" ಎನ್ನುವುದು ಕೇವಲ ಸಾಂಕೇತಿಕವಲ್ಲ. ಇದು ಇಂದಿನ ತುರ್ತು ಅಗತ್ಯ ಮತ್ತು ನಮ್ಮ ಕಾಲದ ಬಿಕ್ಕಟ್ಟುಗಳಿಗೆ ನೇರ ಉತ್ತರ. ಇದರ ಹಿಂದಿರುವ ಶಕ್ತಿ ಶ್ರೀ ನಾರಾಯಣ ಗುರುಗಳು. ಅವರು ಕೇವಲ ಒಬ್ಬ ಸಂತನಲ್ಲ, ಬದಲಾಗಿ ಭಾರತದ ಶ್ರೇಷ್ಠ ಸಾಮಾಜಿಕ ದಾರ್ಶನಿಕರಲ್ಲಿ ಒಬ್ಬರು ಎಂದು ತಿಳಿಸಿದ್ದಾರೆ
ಬಸವಣ್ಣನವರ 'ಕಾಯಕ' ತತ್ವವು ನಾರಾಯಣ ಗುರುಗಳ ಆರ್ಥಿಕ ಸ್ವಾವಲಂಬನೆಯ ಚಿಂತನೆಯಲ್ಲಿ ಪ್ರತಿಧ್ವನಿಸುತ್ತದೆ. ಬಸವಣ್ಣನವರು ವಚನಗಳ ಮೂಲಕ ಭಕ್ತಿಯನ್ನು ಜನಸಾಮಾನ್ಯರ ಕೈಗೆ ನಿಲುಕುವಂತೆ ಮಾಡಿದರೆ, ನಾರಾಯಣ ಗುರುಗಳು ದೈವತ್ವವನ್ನೇ ಎಲ್ಲರಿಗೂ ಹಂಚುವ ಮೂಲಕ ಮನುಷ್ಯರು ಹುಟ್ಟಿನಿಂದ ಮೇಲುಕೀಳಲ್ಲ, ಅಸ್ತಿತ್ವದಿಂದ ಸಮಾನರು ಎಂದು ಸಾರಿದರು. ಅವರಿಬ್ಬರೂ ಧರ್ಮವನ್ನು ಬಹಿಷ್ಕಾರದ ಸಾಧನದಿಂದ ಸಾಮಾಜಿಕ ನ್ಯಾಯದ ಭಾಷೆಯನ್ನಾಗಿ ಪರಿವರ್ತಿಸಿದರು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.