ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಶುಕ್ರವಾರ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಿದ ನಂತರ ತೆರೆದ ವಾಹನದಲ್ಲಿ ಗೌರವ ವಂದನೆ ಸ್ವೀಕರಿಸಿದರು
ಪ್ರಜಾವಾಣಿ ಚಿತ್ರ. ಪ್ರಶಾಂತ್ ಎಚ್.ಜಿ.
ಬೆಂಗಳೂರು: ‘ಐ.ಟಿ, ಇ.ಡಿ, ಸಿಬಿಐ ಮತ್ತು ಕೆಲವು ಸಾಂವಿಧಾನಿಕ ಸಂಸ್ಥೆಗಳು ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ನೈಜ ಮೌಲ್ಯಗಳ ಉಳಿವಿಗಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆಕ್ರೋಶವು ವಿವಿಧ ವೇದಿಕೆಗಳಿಂದ ವ್ಯಕ್ತವಾಗುತ್ತಿದೆ. ಪ್ರಜಾಪ್ರಭುತ್ವ, ಸಂವಿಧಾನದ ನೈಜ ಮೌಲ್ಯಗಳ ಉಳಿವಿಗೆ ಜವಾಬ್ದಾರಿಯುತ ನಾಗರಿಕರು ಧ್ವನಿ ಎತ್ತಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.
ಇಲ್ಲಿನ ಮಾಣೆಕ್ ಷಾ ಮೈದಾನದಲ್ಲಿ ಶುಕ್ರವಾರ ನಡೆದ 79ನೇ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹರಣ ನೆರವೇರಿಸಿ ಅವರು ಮಾತನಾಡಿದರು.
‘ತೆರಿಗೆ ಮುಂತಾದ ಸಂಪನ್ಮೂಲಗಳನ್ನು ಹಂಚುವಾಗ ಕೇಂದ್ರ ಸರ್ಕಾರವು ನಿಷ್ಪಕ್ಷಪಾತ ಧೋರಣೆ ಅನುಸರಿಸುತ್ತಿಲ್ಲ ಎನ್ನುವ ಅಭಿಪ್ರಾಯ ಕರ್ನಾಟಕ ಮಾತ್ರವಲ್ಲದೇ ಇತರೆ ರಾಜ್ಯಗಳಿಂದಲೂ ವ್ಯಕ್ತವಾಗುತ್ತಿದೆ’ ಎಂದೂ ಅವರು ಹೇಳಿದರು.
‘ಕರ್ನಾಟಕದಲ್ಲಿ ಕೃಷಿ ವಲಯಕ್ಕೆ 2025-26ರ ಬಜೆಟ್‌ನಲ್ಲಿ ₹51,339 ಕೋಟಿ ಒದಗಿಸಿದ್ದೇವೆ. ಕೃಷಿ ವಲಯಕ್ಕೆ ನಾವು ಹೆಚ್ಚಿನ ಒತ್ತು ಕೊಟ್ಟರೂ, ನಮಗೆ ಬೇಕಾಗಿರುವಷ್ಟು ಗೊಬ್ಬರವನ್ನು ಕೇಂದ್ರ ಸರ್ಕಾರ ಪೂರೈಸುತ್ತಿಲ್ಲ. ಇದರಿಂದ ಕರ್ನಾಟಕದಲ್ಲಿ ಸಮಸ್ಯೆಗಳಾಗಿವೆ, ಇದನ್ನು ಬೇಗನೇ ಪರಿಹರಿಸಬೇಕು’ ಎಂದು ಆಗ್ರಹಿಸಿದರು.
‘ದೇಶದ ಪ್ರಮುಖ ಸಂಸ್ಥೆಗಳು ನಡೆಸಿರುವ ಸಮೀಕ್ಷೆಗಳ ಪ್ರಕಾರ, ಶೇ 10ರಷ್ಟಿರುವ ಶ್ರೀಮಂತರ ಬಳಿ ಶೇ 80ರಷ್ಟು ಸಂಪತ್ತು ಶೇಖರಣೆಯಾಗಿದೆ. ಅವರಲ್ಲಿ ಶೇ 3ರಷ್ಟು ಜನರು ಮಾತ್ರ ಜಿಎಸ್‌ಟಿ ಪಾವತಿಸುತ್ತಿದ್ದಾರೆ. ಉಳಿದ ಶೇ 90ರಷ್ಟು ಜನ ಹೊಟ್ಟೆ-ಬಟ್ಟೆಗೆ ದುಡಿಯುವವರಾದರೂ ಶೇ 97ರಷ್ಟು ಜಿಎಸ್‌ಟಿ ಪಾವತಿಸುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಯಾವ ಆರ್ಥಿಕತೆ ಮುಂದುವರೆಯಲು ಸಾಧ್ಯ’ ಎಂದೂ ಅವರು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.