
ಚಿಕ್ಕಬಳ್ಳಾಪುರ: ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಸ್ವರೂಪ ಬದಲಿಸುವ ಮೂಲಕ ಕೇಂದ್ರ ಸರ್ಕಾರ ಆದಿವಾಸಿಗಳು, ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದವರು ಸೇರಿದಂತೆ ಅಶಕ್ತರ ಬದುಕುವ ಮತ್ತು ಉದ್ಯೋಗದ ಹಕ್ಕು ಕಿತ್ತುಕೊಂಡಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
‘ಮನರೇಗಾ’ ಮರುಸ್ಥಾಪಿಸಬೇಕು, ‘ವಿಬಿ–ಜಿ ರಾಮ್ ಜಿ’ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಮನರೇಗಾ ಬಚಾವ್ ಸಂಗ್ರಾಮ’ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.
ದೇಶದಾದ್ಯಂತ ಮನರೇಗಾ ಉಳಿಸಿ ಅಭಿಯಾನ ಆರಂಭವಾಗಿದೆ. ಕಾಂಗ್ರೆಸ್‌ನ ಹೋರಾಟದ ಉದ್ದೇಶವನ್ನು ತಿಳಿದು ಜನರು ಕೈಜೋಡಿಸಬೇಕು. ಮನರೇಗಾ ಅಡಿ 12.16 ಕೋಟಿ ಜನರಿಗೆ ಉದ್ಯೋಗ ದೊರಕಿತ್ತು. ಗ್ರಾಮೀಣಾಭಿವೃದ್ಧಿಯ ಕನಸು ಕಂಡಿದ್ದ ಮಹಾತ್ಮ ಗಾಂಧೀಜಿ ಅವರ ಹೆಸರಿನಲ್ಲಿ ಯೋಜನೆಯನ್ನು ಮನನೋಹನ್ ಸಿಂಗ್ ಅವರ ಸರ್ಕಾರ ಜಾರಿಗೊಳಿಸಿತ್ತು. ಗ್ರಾಮ ಸ್ವರಾಜ್ಯದ ಕಲ್ಪನೆಗೆ ಮನರೇಗಾ ಶಕ್ತಿ ತುಂಬಿತ್ತು ಎಂದರು.
ಕೇಂದ್ರ ಸರ್ಕಾರ ಮನರೇಗಾ ಯೋಜನೆಯ ಹೆಸರು ಮತ್ತು ಸ್ವರೂಪ ಬದಲಿಸುವ ಮೂಲಕ ಆದಿವಾಸಿಗಳು, ಮಹಿಳೆಯರು, ಕೂಲಿಕಾರ್ಮಿಕರ ಬದುಕನ್ನು ಕಷ್ಟಕ್ಕೆ ದೂಡಿದೆ ಎಂದರು.
ವಿಕಸಿತ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಆಜೀವಿಕ ಮಿಷನ್’ (ವಿಬಿ ಜಿ ರಾಮ್ ಜಿ) ರದ್ದುಗೊಳಿಸಬೇಕು. ಮನರೇಗಾ ಮರುಸ್ಥಾಪಿಸಬೇಕು.ಈ ಬೇಡಿಕೆಗಳು ಈಡೇರುವವರೆಗೆ ನಮ್ಮ ಆಂದೋಲನ ನಿಲ್ಲುವುದಿಲ್ಲ ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಎಲ್ಲ ವರ್ಗದ ಜನರಿಗೆ ಕಾರ್ಯಕ್ರಮಗಳನ್ನು ನೀಡಿದೆ. ಜನರ ಬದುಕಿನಲ್ಲಿ ಬದಲಾವಣೆ ತಂದಿದೆ ಎಂದರು.
ಬಡವರ ಕೈಗೆ ಉದ್ಯೋಗ ನೀಡುವುದು, ಅವರ ಬದುಕಿನಲ್ಲಿ ಬದಲಾವಣೆ ತರುವುದು ಮನರೇಗಾ ಪ್ರಮುಖ ಉದ್ದೇಶ. ಪಂಚಾಯಿತಿಗಳೇ ಯೋಜನೆಯ ಕಾರ್ಯಕ್ರಮ ರೂಪಿಸುವ ಬಗ್ಗೆ ತೀರ್ಮಾನಿಸುತ್ತಿದ್ದವು. ಆದರೆ ಕೇಂದ್ರ ಸರ್ಕಾರ ಈ ಎಲ್ಲವನ್ನೂ ನಾಶಗೊಳಿಸಿದೆ ಎಂದು ಕಿಡಿಕಾರಿದರು.
ದೇಶದಲ್ಲಿ ಮಹಾತ್ಮ ಗಾಂಧಿ ಅವರ ಹೆಸರು ಅಳಿಸಲು ಸಾಧ್ಯವಿಲ್ಲ. ನರೇಗಾ ಯೋಜನೆಯನ್ನು ನಾಶ ಮಾಡುವ ಪ್ರಯತ್ನಕ್ಕೆ ಕಾಂಗ್ರೆಸ್ ತಡೆಯಾಗಲಿದೆ ಎಂದು ಹೇಳಿದರು.
ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮಾತನಾಡಿ, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಸೇರಿ ಕುತಂತ್ರ ಮಾಡಿ ಶ್ರಮಿಕರ ರೈತರ ಹೊಟ್ಟೆಯ ಮೇಲೆ ಹೊಡೆಯುತ್ತಿವೆ. ನರೇಗಾ ಸ್ವರೂಪ ಬದಲಾವಣೆ ಕಾಂಗ್ರೆಸ್ ಮೇಲಿನ ಹಲ್ಲೆಯಲ್ಲ ಬಡವರ ಬದುಕಿನ ಮೇಲಿನ ಹಲ್ಲೆ ಎಂದರು.
ಕೋಟ್ಯಂತರ ಜನರಿಗೆ ಕೂಲಿ ದೊರೆಯುತ್ತಿರಲಿಲ್ಲ. ಅವರ ಬದುಕು ಕಷ್ಟದಲ್ಲಿ ಇತ್ತು. ಇದನ್ನು ಮನಗಂಡು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಈ ಯೋಜನೆ ಜಾರಿಗೊಳಿಸಿದರು. ಈಗ ಬಿಜೆಪಿ ಕಾನೂನು ಗಾಳಿಗೆ ತೂರುತ್ತಿದೆ. ಬಡವರಿಗೆ ಉದ್ಯೋಗ ದೊರೆಯಬಾರದು ಎನ್ನುವ ಮನಸ್ಥಿತಿಯಿಂದ ಯೋಜನೆಯ ಸ್ವರೂಪ ಬದಲಿಸಿದೆ ಎಂದು ಆರೋಪಿಸಿದರು.
ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದವರು, ಅಲ್ಪಸಂಖ್ಯಾತರು, ಎಲ್ಲ ಜಾತಿಯ ಬಡವರು ಒಗ್ಗೂಡಿ ಕೇಂದ್ರ ಸರ್ಕಾರದ ವಿರುದ್ಧ ಕೂಗು ಹಾಕಬೇಕು ಎಂದರು.
ಸಚಿವರಾದ ಡಾ.ಎಂ.ಸಿ.ಸುಧಾಕರ್, ಕೆ.ಎಚ್.ಮುನಿಯಪ್ಪ, ಬೈರತಿ ಸುರೇಶ್, ಕೃಷ್ಣಬೈರೇಗೌಡ, ಬೋಸರಾಜು, ಶಾಸಕರಾದ ಪ್ರದೀಪ್ ಈಶ್ವರ್, ಕೆ.ಎಚ್.ಪುಟ್ಟಸ್ವಾಮಿಗೌಡ, ಎನ್.ಎಸ್.ನಾರಾಯಣ ಸ್ವಾಮಿ, ಕೊತ್ತೂರು ಮಂಜುನಾಥ್, ಕೆ.ವೈ ನಂಜೇಗೌಡ, ರೂಪಕಲಾ, ತನ್ವೀರ್ ಸೇಠ್, ಮಾಜಿ ಸಚಿವರಾದ ಎನ್.ಎಚ್.ಶಿವಶಂಕರ ರೆಡ್ಡಿ, ರಮಾನಾಥ ರೈ, ಎಚ್.ಆಂಜನೇಯ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ ಚಂದ್ರಶೇಖರ್, ಮುಖಂಡರಾದ ರಕ್ಷಾರಾಮಯ್ಯ ಕೆ.ಪಿ.ಬಚ್ಚೇಗೌಡ, ರಮಾನಾಥ ರೈ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.