ADVERTISEMENT

ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಸಲಹೆ ನೀಡಿದ ಸಿದ್ದರಾಮಯ್ಯ

‘ರಾಜ್ಯಕ್ಕೆ ನ್ಯಾಯ ಒದಗಿಸುವ ಕೆಲಸ ನಿಮ್ಮ ಆದ್ಯತೆಯಾಗಲಿ’

​ಪ್ರಜಾವಾಣಿ ವಾರ್ತೆ
Published 28 ಜುಲೈ 2021, 10:51 IST
Last Updated 28 ಜುಲೈ 2021, 10:51 IST
ಸಿದ್ದರಾಮಯ್ಯ ಮತ್ತು ಬಸವರಾಜ ಬೊಮ್ಮಾಯಿ
ಸಿದ್ದರಾಮಯ್ಯ ಮತ್ತು ಬಸವರಾಜ ಬೊಮ್ಮಾಯಿ    

ಬೆಂಗಳೂರು: ‘ಬರ ಪರಿಹಾರ, ಜಿಎಸ್‌ಟಿ ರಾಜ್ಯದ ಪಾಲು, ತೆರಿಗೆ ಹಂಚಿಕೆ, ಕೋವಿಡ್‌ ನಿಯಂತ್ರಣಕ್ಕೆ ನೆರವು ಹೀಗೆ ಎಲ್ಲ ವಿಚಾರಗಳಲ್ಲಿ ಕೇಂದ್ರ ಸರ್ಕಾರ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ತೋರಿಸುತ್ತಿದೆ. ನೂತನ ಮುಖ್ಯಮಂತ್ರಿಯಾಗಿರುವ ನೀವು ಈ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಬಂಧಿಸಿದ ಸಚಿವರ ಗಮನಕ್ಕೆ ತಂದು ರಾಜ್ಯಕ್ಕೆ ನ್ಯಾಯ ಒದಗಿಸುವ ಕೆಲಸಕ್ಕೆ ಆದ್ಯತೆ ನೀಡಬೇಕು’ ಎಂದು ಬಸವರಾಜ ಬೊಮ್ಮಾಯಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

‘ರಾಜ್ಯಕ್ಕೆ ಎರಡು ವರ್ಷಗಳಿಂದ ಅನ್ಯಾಯ ಎಸಗಿರುವುದು ಕೇಂದ್ರದಲ್ಲಿರುವ ನಿಮ್ಮದೇ ಪಕ್ಷದ ಸರ್ಕಾರ. ಅಧಿಕಾರದ ಆಸೆಯೊ, ತಿಳುವಳಿಕೆ ಕೊರತೆಯೊ, ಅವ್ಯಕ್ತ ಭೀತಿಯೊ, ಹಿಂದಿನ ಮುಖ್ಯಮಂತ್ರಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ದ ಸೊಲ್ಲೆತ್ತಲಿಲ್ಲ. ಆ ಧೈರ್ಯವನ್ನು ನೀವು ತೋರಿಸುತ್ತೀರಿ ಎಂದೂ ನಂಬಿದ್ದೇನೆ’ ಎಂದು ಹೇಳಿದ್ದಾರೆ.

‘ರಾಜ್ಯಕ್ಕೆ ಅನ್ಯಾಯವಾದ ಸಂದರ್ಭಗಳಲ್ಲಿ ಸರ್ವಪಕ್ಷಗಳ ಸಭೆ ಮತ್ತು ನಿಯೋಗದ ಮೂಲಕ ನ್ಯಾಯ ಪಡೆಯುವ ಪ್ರಯತ್ನದ ಪರಂಪರೆಯೊಂದು ನಮ್ಮಲ್ಲಿದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸಂಸದೀಯ ಪ್ರಜಾಪ್ರಭುತ್ವದ ಬುನಾದಿಯಾದ ಈ ರೀತಿಯ ಮುಕ್ತ ಚರ್ಚೆ-ಸಂವಾದಗಳೇ ನಿಂತು ಬಿಟ್ಟಿವೆ. ನೀವು ಇದಕ್ಕೆ ಮರುಚಾಲನೆ ನೀಡುವಿರೆಂಬ ನಿರೀಕ್ಷೆ ನನ್ನದು’ ಎಂದಿದ್ದಾರೆ.

ADVERTISEMENT

‘ಪ್ರಧಾನಿ ಇಲ್ಲವೇ ಮುಖ್ಯಮಂತ್ರಿ ಸ್ಥಾನ ಪಕ್ಷಕ್ಕೆ ಸೀಮಿತವಾದುದಲ್ಲ. ಅದು ಇಡೀ ದೇಶ ಮತ್ತು ರಾಜ್ಯಕ್ಕೆ ಸಂಬಂಧಿಸಿದ್ದು. ವಿರೋಧ ಪಕ್ಷವಾಗಿ ನಮ್ಮ ನಡುವಿನ ಸೈದ್ಧಾಂತಿಕ ಸಂಘರ್ಷ ಜಾರಿಯಲ್ಲಿದ್ದರೂ ರಾಜ್ಯದ ಅಭಿವೃದ್ಧಿಯ ವಿಚಾರದಲ್ಲಿ ನಾವೆಲ್ಲ ಒಂದು ತಂಡವಾಗಿ ಕೆಲಸ ಮಾಡಬೇಕೆಂದು ನಿಮಗಿಂತ ವಯಸ್ಸು ಮತ್ತು ಅನುಭವದಲ್ಲಿ ಹಿರಿಯನಾದ ನನ್ನ ಸಲಹೆ’ ಎಂದೂ ತಿಳಿಸಿದ್ದಾರೆ

‘ಸಾರ್ವಜನಿಕ ವಿಷಯಕ್ಕೆ ಸಂಬಂಧಿಸಿ, ಹಿಂದಿನ ಮುಖ್ಯಮಂತ್ರಿಗೆ ಹಲವು ಪತ್ರಗಳನ್ನು ಬರೆದರೂ ಅದಕ್ಕೆ ಪ್ರತಿಕ್ರಿಯಿಸುವ ಕನಿಷ್ಠ ಸೌಜನ್ಯವನ್ನೂ ಅವರು ತೋರಿಸಿಲ್ಲ. ಪಾರದರ್ಶಕತೆ ಪ್ರಜಾಪ್ರಭುತ್ವದ ಆತ್ಮವಾಗಿದೆ. ನಿಮ್ಮ ಅವಧಿಯಲ್ಲಿಯಾದರೂ ಮಾಹಿತಿಯ ವಿನಿಮಯ ಸುಗಮವಾಗಿ ನಡೆಯುವಂತೆ ಮಾಡುವಿರೆಂದು ನಂಬಿದ್ದೇನೆ. ಜವಾಬ್ದಾರಿಯುತ ವಿರೋಧ ಪಕ್ಷವಾಗಿ ನಿಮಗೆ ರಚನಾತ್ಮಕ ಸಹಕಾರದ ಭರವಸೆ ನೀಡುತ್ತೇನೆ. ಇದೇ ರೀತಿಯ ಸಹಕಾರ ನಿಮ್ಮ ಪಕ್ಷದಿಂದಲೂ ನಿಮಗೆ ಸಿಗಲಿ ಎಂದು ಹಾರೈಸುತ್ತೇನೆ’ ಎಂದೂ ಸಿದ್ದರಾಮಯ್ಯ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.