
ಕೊಪ್ಪಳ: ’ರಾಜ್ಯದಲ್ಲಿ ಮುಖ್ಯಮಂತ್ರಿ ಹಾಗೂ ಪಕ್ಷದ ಅಧ್ಯಕ್ಷ ಸ್ಥಾನದ ಹುದ್ದೆಗಳು ಖಾಲಿಯಿಲ್ಲ. 2028ರ ತನಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುತ್ತಾರೆ. ಬಳಿಕ ಡಿ.ಕೆ. ಶಿವಕುಮಾರ್ ಸಿ.ಎಂ. ಆಗಬೇಕು ಎನ್ನುವ ಆಸೆ ನನ್ನದು’ ಎಂದು ವಕ್ಪ್ ಮತ್ತು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಮುಖ್ಯಮಂತ್ರಿ ಆಗಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಶಿವಕುಮಾರ್ ಅವರ ಅಭಿಮಾನಿಗಳು ಕೂಡ ಆಸೆ ಇಟ್ಟುಕೊಂಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ಎಲ್ಲ ಶಾಸಕರ ಬೆಂಬಲವಿದ್ದು, ಪೂರ್ಣ ಅವಧಿಗೆ ಅವರೇ ಸಿ.ಎಂ. ಆಗಿರುತ್ತಾರೆ’ ಎಂದರು. ಬಳಿಕ ಈ ಕುರಿತು ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ ಎಂದು ಹೇಳಿದರು.
‘ಶಿವಕುಮಾರ್ ಅಪಾರ ದೈವಭಕ್ತರಾಗಿದ್ದು ಮೊದಲಿನಿಂದಲೂ ದೇವಸ್ಥಾನಗಳಿಗೆ ಹೋಗುವುದು ಸಾಮಾನ್ಯ. ಅವರು ದೇವಸ್ಥಾನಕ್ಕೆ ಹೋಗುವುದಕ್ಕೂ ಮುಖ್ಯಮಂತ್ರಿ ಸ್ಥಾನದ ಪೈಪೋಟಿಯೂ ಸಂಬಂಧವಿಲ್ಲ. ನವೆಂಬರ್‌ನಲ್ಲಿ ಯಾವ ಕ್ರಾಂತಿಯೂ ಇಲ್ಲ. ಇದೆಲ್ಲವೂ ಬಿಜೆಪಿ ಸೃಷ್ಟಿ’ ಎಂದು ಹೇಳಿದರು.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕೇಳಲಾದ ಪ್ರಶ್ನೆಗೆ ‘ವಿಸ್ತರಣೆ ಆಗಬಹುದು. ಪಕ್ಷ ಸೂಚಿಸಿದರೆ ಸಚಿವ ಸ್ಥಾನ ತ್ಯಾಗಕ್ಕೂ ಸಿದ್ಧನಿದ್ದೇನೆ. ಶಿಸ್ತಿನ ಸಿಪಾಯಿಯಾಗಿ ಪಕ್ಷದ ಕೆಲಸ ಮಾಡುತ್ತೇನೆ. ಬಿಜೆಪಿಯಲ್ಲಿ ಮೊದಲು ಎರಡು ಗುಂಪುಗಳಷ್ಟೇ ಇದ್ದವು. ಈಗ ಬಿ.ವೈ. ವಿಜಯೇಂದ್ರ, ಆರ್. ಅಶೋಕ, ಬಸನಗೌಡ ಪಾಟೀಲ ಯತ್ನಾಳ, ಕೆ.ಎಸ್. ಈಶ್ವರಪ್ಪ ಹೀಗೆ ಎಲ್ಲರವೂ ಪ್ರತ್ಯೇಕ ಗುಂಪುಗಳಾಗಿವೆ. ಅವರು ಮೊದಲು ಈ ಭಿನ್ನಾಭಿಪ್ರಾಯ ಪರಿಹರಿಸಿಕೊಂಡು ನಮ್ಮ ಬಗ್ಗೆ ಮಾತನಾಡಲಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.