ADVERTISEMENT

ಪ್ರಧಾನಿ ಮೋದಿ ವಿರುದ್ದ ಸರಣಿ ಟ್ವೀಟ್‌: ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2020, 13:19 IST
Last Updated 2 ಜನವರಿ 2020, 13:19 IST
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ   

ಬೆಂಗಳೂರು:ರೈತ ಸಮಾವೇಶದ ಪ್ರಯುಕ್ತ ಗುರುವಾರ ತುಮಕೂರಿಗೆ ಭೇಟಿ ನೀಡಿದ್ದಪ್ರಧಾನಿ ಮೋದಿ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಸರಣಿ ಟ್ವಿಟ್‌ ಮಾಡುವ ಮೂಲಕ ಆರ್ಥಿಕ ಹಿನ್ನಡೆ, ನೆರೆ ಪರಿಹಾರ, ಮಹದಾಯಿ ವಿವಾದ, ಕಾವೇರಿ ನೀರು ಹಂಚಿಕೆ, ಜಿಎಸ್‌ಟಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.

ಕಳೆದ ವರ್ಷ ಉತ್ತರ ಕರ್ನಾಟಕದಲ್ಲಿ ಉಂಟಾದ ನೆರೆ ಹಾವಳಿ ಬಗ್ಗೆಪ್ರಸ್ತಾಪಿಸಿರುವ ಸಿದ್ದರಾಮಯ್ಯ, ‘ರಾಜ್ಯದ ಜನ ನೆರೆ ನೀರಲ್ಲಿ ಮುಳುಗಿದ್ದಾಗ ಕನಿಷ್ಠ ಸಾಂತ್ವನ ನೀಡಲು ನೀವು ಬರಲಿಲ್ಲ, ಅನುಕಂಪಕ್ಕಾದರೂ ನಿಮ್ಮಿಂದ ನಾಲ್ಕಕ್ಷರ ಸಮಾಧಾನದ ಮಾತು ಹೊರಡಲಿಲ್ಲ. ಈಗ ರೈತರ ಕಲ್ಯಾಣದ ಡೋಂಗಿ ಕಾರ್ಯಕ್ರಮಗಳ ಪ್ರಚಾರಕ್ಕೆ ನಮ್ಮ ಅಮಾಯಕ ಜನ ನೆನಪಾಗುತ್ತಿದ್ದಾರಾ?‘ ಎಂದು ಪ್ರಶ್ನಿಸಿದ್ದಾರೆ.

ADVERTISEMENT

ಆಪರೇಷನ್‌ ಕಮಲದ ವಿಚಾರದ ಬಗ್ಗೆ ಟ್ವಿಟ್‌ ಮಾಡಿರುವ ಅವರು, ’ಆಪರೇಷನ್ ಕಮಲ ಮಾಡಿ ಹಿಂದಿನ ಬಾಗಿಲಿನಿಂದ ಸರ್ಕಾರ ರಚಿಸುತ್ತೀರಿ, ನೈತಿಕ ರಾಜಕಾರಣದ ಬಗ್ಗೆ ಭಾಷಣ ಮಾಡ್ತೀರಿ. ರಾಜಕೀಯ ವಿರೋಧಿಗಳ ಮೇಲೆ ಐಟಿ,ಇಡಿ,ಸಿಬಿಐ ಛೂ ಬಿಡ್ತೀರಿ. ಗಣಿಕಳ್ಳರು, ಭೂಕಳ್ಳರನ್ನು ನಿಮ್ಮ ಪಕ್ಷಕ್ಕೆ ಕರೆದು ಮುದ್ದಾಡ್ತೀರಿ. ಇದೇನಾ ನಿಮ್ಮ ‘ಸ್ವಚ್ಚ ಭಾರತ್?’ ಎಂದು ಪ್ರಶ್ನಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತುಮಕೂರು ಸಿದ್ದಗಂಗಾ ಮಠದಲ್ಲಿ ಪ್ರಧಾನಿ ಮೋದಿ ಮಾಡಿರುವ ಭಾಷಣಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ‘ತುಮಕೂರಿನ‌‌ ಸಿದ್ದಗಂಗಾ ಮಠಕ್ಕೆ ಜಾತ್ಯತೀತ ಮತ್ತು ಪಕ್ಷಾತೀತವಾದ ಗೌರವದ ಸ್ಥಾನ ಇದೆ. ಈ ಕಾರಣಕ್ಕಾಗಿಯೇ ಅದು ಸರ್ವರೂ ಭಕ್ತಿಯಿಂದ ನಮಿಸುವ ಕ್ಷೇತ್ರ. ಇಂತಹ ಕ್ಷೇತ್ರದಲ್ಲಿ ಎಳೆಯ ಮಕ್ಕಳನ್ನು ಕೂರಿಸಿಕೊಂಡು ಕೊಳಕು ರಾಜಕೀಯದ ಭಾಷಣ ಮಾಡಿದ ನರೇಂದ್ರ ಮೋದಿ ಅವರೇ, ನಿಮ್ಮನ್ನು ಆ ಪವಿತ್ರ ನೆಲ‌ ಕ್ಷಮಿಸದು’ ಎಂದು ಹರಿಹಾಯ್ದಿದ್ದಾರೆ.

ಇನ್ನುಳಿದಂತೆ ಜಿಎಸ್‌ಟಿ ಪರಿಹಾರ, ಸ್ವಚ್ಚಭಾರತ್, ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆ (NRDWP) ಮತ್ತು ನರೇಗಾ ಯೋಜನೆಗಳಿಗೆ ಕೇಂದ್ರದಿಂದ ರಾಜ್ಯಕ್ಕೆ ಸಿಗಬೇಕಾದ ಹಣ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.