ವಿಜಯೇಂದ್ರ, ಸಿದ್ದರಾಮಯ್ಯ
ಬೆಂಗಳೂರು: ‘ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಕ್ಕೆ, ಮುಖ್ಯಮಂತ್ರಿ ಸಿದ್ದರಾಮಯ್ಯ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ‘ನಮ್ಮ ಪಕ್ಷದ ಪ್ರಧಾನಿ ಅಭ್ಯರ್ಥಿ ಯಾರಾಗುತ್ತಾರೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯ ಬಿಜೆಪಿಯವರಿಗೆ ಇಲ್ಲ’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಜಯೇಂದ್ರ, ‘ದಲಿತರನ್ನು ವಂಚಿಸಿದ್ದು ಯಾರು’ ಎಂದು ಪ್ರಶ್ನಿಸಿದ್ದಾರೆ.
‘ಸಿ.ಎಂ ಅಭ್ಯರ್ಥಿ ಕಾರಜೋಳ ಎಂದು ಘೋಷಿಸಲಿ: ಸಿದ್ದರಾಮಯ್ಯ
ವಿಜಯೇಂದ್ರ ಅವರೇ ದಲಿತ ಮತ್ತು ಹಿಂದುಳಿದ ಜಾತಿಗಳ ಬಗ್ಗೆ ನಿಮಗೆ ಅಷ್ಟೊಂದು ಅಕ್ಕರೆ ಕಾಳಜಿಗಳಿದ್ದರೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನವನ್ನು ಒಬ್ಬ ದಲಿತ ನಾಯಕನಿಗೆ ಬಿಟ್ಟುಕೊಡಿ. ದಲಿತ ನಾಯಕ ಗೋವಿಂದ ಕಾರಜೋಳ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಅವರನ್ನೇ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿಬಿಡಿ. ಎಪ್ಪತ್ತೈದು ವರ್ಷ ತುಂಬಿರುವ ನರೇಂದ್ರ ಮೋದಿ ಅವರ ಪದಚ್ಯುತಿಯ ಸೂಚನೆಯನ್ನು ಆರ್‌ಎಸ್‌ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ನೀಡಿದ್ದಾರೆ. ದಲಿತ ಪ್ರಧಾನಿಯನ್ನು ಮಾಡಲು ಬಿಜೆಪಿಗೆ ಇದೊಂದು ಸದಾವಕಾಶ. ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಸ್ಥಾನಕ್ಕೆ ಒಬ್ಬ ದಲಿತ ನಾಯಕನನ್ನು ನೀವೇ ಸೂಚಿಸಿ. ಆ ಹೆಸರುಗಳು ಗೋವಿಂದ ಕಾರಜೋಳ ಅಥವಾ ಛಲವಾದಿ ನಾರಾಯಾಣಸ್ವಾಮಿ ಅವರದ್ದಾಗಿದ್ದರೆ ಅವರನ್ನು ಅಭಿನಂದಿಸುವರಲ್ಲಿ ನಾನು ಮೊದಲಿಗನಾಗುತ್ತೇನೆ.
ಹಿಂದುಳಿದ ನಾಯಕರನ್ನು ಬಿಜೆಪಿ ಹೇಗೆ ನಡೆಸಿಕೊಳ್ಳುತ್ತಾ ಬಂದಿದೆ ಎನ್ನುವುದಕ್ಕೆ ರಾಜ್ಯದ ಹಿಂದುಳಿದ ಜಾತಿಗಳ ನಾಯಕ ಎಸ್.ಬಂಗಾರಪ್ಪನವರೇ ಸಾಕ್ಷಿ. ಬಂಗಾರಪ್ಪನವರನ್ನು ನಿಮ್ಮ ತಂದೆ ಬಿ.ಎಸ್. ಯಡಿಯೂರಪ್ಪನವರು ಮುಗಿಸಿದರೆ ಅವರ ಮಗ ಕುಮಾರ್ ಬಂಗಾರಪ್ಪನವರ ರಾಜಕೀಯವನ್ನು ನೀವು ಮುಗಿಸಲು ಹೊರಟಿದ್ದೀರಿ. ಮಾತೆತ್ತಿದರೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹೆಸರನ್ನು ಮೆರೆಸುವ ಬಿಜೆಪಿಯು ಅವರನ್ನೇ ಪ್ರಧಾನಮಂತ್ರಿ ಯಾಕೆ ಮಾಡಿಲ್ಲ? ಛಲವಾದಿ ನಾರಾಯಣಸ್ವಾಮಿ ಅವರ ತಲೆ ಮೇಲೆ ಚಡ್ಡಿ ತುಂಬಿದ ಬುಟ್ಟಿ ಹೊರಿಸಿ ಕಳಿಸುವ ಬದಲಿಗೆ ನೀವು ಮತ್ತು ನಿಮ್ಮ ತಂದೆಯವರು ಯಾಕೆ ಅದನ್ನು ಹೊತ್ತುಕೊಂಡು ಹೋಗಿಲ್ಲ? ಇದಕ್ಕೆ ನಿಮ್ಮಲ್ಲಿ ಉತ್ತರ ಇದೆಯಾ?
-ಸಿದ್ದರಾಮಯ್ಯ, ಮುಖ್ಯಮಂತ್ರಿ
‘ದಲಿತರ ವಂಚಿಸಿದ್ದು ಯಾರು’:
ಸಿದ್ದರಾಮಯ್ಯನವರೇ ಸಾಮಾಜಿಕ ನ್ಯಾಯ ಮೀಸಲಾತಿ ಸಂವಿಧಾನದ ಬಗ್ಗೆ ನೀವು ಮತ್ತು ನಿಮ್ಮ ಕಾಂಗ್ರೆಸ್ಸಿನ ಅಸಲಿ ಮುಖವಾಡ ಏನೆಂಬುದು ರಾಜ್ಯದ ಹಾಗೂ ದೇಶದ ಜನತೆಗೆ ತಿಳಿಯಲಿ ಎಂಬ ಕಾರಣದಿಂದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಸ್ಥಾನದ ಅಭ್ಯರ್ಥಿ ಎಂದು ಘೋಷಿಸಿ ಎಂಬ ಸಲಹೆ ನೀಡಿದ್ದೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಕಾಶವಿದ್ದರೂ ಅವರ ಹಿರಿತನವನ್ನು ಬದಿಗೆ ಸರಿಸಿ ಮುಖ್ಯಮಂತ್ರಿ ಸ್ಥಾನ ನೀಡದೇ ವಂಚಿಸಿದ್ದು ಕಾಂಗ್ರೆಸ್ ಅಲ್ಲವೇ? ಕರ್ನಾಟಕದಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಅರ್ಹ ನಾಯಕರು ಮುಖ್ಯಮಂತ್ರಿ ಆಗುವ ಅವಕಾಶ ತಪ್ಪಿಸಿದವರು ಯಾರು? ಗೋವಿಂದ ಕಾರಜೋಳ ಅವರು ನಮ್ಮ ಹಿರಿಯ ನಾಯಕರು ಮತ್ತು ಉಪ ಮುಖ್ಯಮಂತ್ರಿ ಆಗಿದ್ದರು.
ಈಗ ಅವರು ಸಂಸದರಾಗಿದ್ದಾರೆ. ಭವಿಷ್ಯತ್ತಿನಲ್ಲಿ ಅವರು ಅತ್ಯುನ್ನತ ಸ್ಥಾನಕ್ಕೇರುವ ಎಲ್ಲಾ ಅವಕಾಶಗಳ ಬಾಗಿಲು ಅವರಿಗಾಗಿ ತೆರೆದೇ ಇದೆ. ನಿಮ್ಮ ಕಾಂಗ್ರೆಸ್ ಪಕ್ಷದಲ್ಲಿ ಅಸಡ್ಡೆಗೊಳಗಾಗಿದ್ದ ಛಲವಾದಿ ನಾರಾಯಣಸ್ವಾಮಿ ಅವರಿಗೆ ಬಿಜೆಪಿಯಲ್ಲಿ ಪಕ್ಷ ಸಂಘಟನೆಯ ಮಹತ್ವದ ಹುದ್ದೆ ನೀಡಿದ್ದೇವೆ. ವಿಧಾನ ಪರಿಷತ್ತಿಗೆ ಕಳುಹಿಸಿ ಸಾಂವಿಧಾನಿಕ ಹುದ್ದೆಯಾದ ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿ ಕುಳ್ಳಿರಿಸಿ ಅವರ ಅರ್ಹತೆ ಹಾಗೂ ಸಾಮರ್ಥ್ಯಕ್ಕೆ ತಕ್ಕಂತೆ ಗೌರವಿಸಿದ್ದೇವೆ.
-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
‘ಚಡ್ಡಿ ಹೊರಿಸಿದ್ದು ನೀವು’
ಸಿದ್ದರಾಮಯ್ಯ ಅವರೇ ನಾನು ಚಡ್ಡಿ ಹೊರುವಂತೆ ಮಾಡಿದ್ದು ನೀವೇ. ನಿಮ್ಮ ಹಿಂಬಾಲಕರು ಚಡ್ಡಿ ಸುಟ್ಟಾಗ ಬಿಜೆಪಿ ಸರ್ಕಾರವನ್ನು ಟೀಕಿಸುವ ಭರದಲ್ಲಿ ‘ನಾನು ಚಡ್ಡಿ ಸುಡುತ್ತೇನೆ ಎಂದಿದ್ದಿರಿ’. ನಿಮಗೆ ತಿರುಗೇಟು ನೀಡಲು ನಮ್ಮ ಚಡ್ಡಿ ತಂದು ನಿಮಗೆ ಒಪ್ಪಿಸಿದ್ದೆ. ಚಡ್ಡಿ ಸುಡಲು ಸಹಾಯ ಮಾಡಿದ್ದೆ. ಅದನ್ನು ಮರೆಯಬೇಡಿ.
-ಛಲವಾದಿ ನಾರಾಯಣಸ್ವಾಮಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.