ADVERTISEMENT

ಕೆರೆ ಒತ್ತುವರಿ ತನಿಖೆ ನಡೆಸುವ ಬೊಮ್ಮಾಯಿ ನಿರ್ಧಾರ ಸ್ವಾಗತಿಸಿದ ಸಿದ್ದರಾಮಯ್ಯ 

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2022, 14:25 IST
Last Updated 19 ಸೆಪ್ಟೆಂಬರ್ 2022, 14:25 IST
ಸಿದ್ದರಾಮಯ್ಯ
ಸಿದ್ದರಾಮಯ್ಯ    

ಬೆಂಗಳೂರು: ಬೆಂಗಳೂರಿನಲ್ಲಿ ನಡೆದಿರುವ ಕೆರೆಗಳ ಒತ್ತುವರಿ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿರ್ಧಾರವನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ವಾಗತಿಸಿದ್ದಾರೆ.

ಅತಿವೃಷ್ಟಿ ಮತ್ತು ಪ್ರವಾಹದ ಕುರಿತು ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಕಂದಾಯ ಸಚಿವ ಆರ್‌. ಅಶೋಕ ಅವರು ಸೋಮವಾರ ಉತ್ತರ ನೀಡುವಾಗ ಮಧ್ಯ ಪ್ರವೇಶಿಸಿ ಮಾತನಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಬೆಂಗಳೂರಿನಲ್ಲಿ ಯಾವ ಕೆರೆಯನ್ನು? ಯಾವ ಕಾಲದಲ್ಲಿ ಮುಚ್ಚಲಾಗಿದೆ? ಎಂಬುದನ್ನು ತನಿಖೆ ನಡೆಸುತ್ತೇವೆ. ಒತ್ತುವರಿಗೆ ಕಾರಣವಾದವರು ಯಾರು? ಕೆರೆಗಳನ್ನು ಮುಚ್ಚಿ ನಿರ್ಮಿಸಿದ ಆಸ್ತಿಗಳ ಬೇನಾಮಿ ಮಾಲೀಕರು ಯಾರು? ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುವುದು’ ಎಂದು ಘೋಷಿಸಿದರು.

ADVERTISEMENT

ಈ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ, ’ಕೆರೆಗಳ ಅಕ್ರಮ ಒತ್ತುವರಿ ಮತ್ತು ದುರ್ಬಳಕೆ ಕುರಿತು ತನಿಖೆ ನಡೆಸುವ ಮುಖ್ಯಮಂತ್ರಿಯವರ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಯಾವೆಲ್ಲಾ ಕಾಲದಲ್ಲಿ ಕೆರೆಗಳ ಒತ್ತುವರಿ ಆಗಿದೆ? ಅದರ ಉದ್ದೇಶ ಏನಿತ್ತು? ಆಗ ಕೆರೆಗಳ ಸ್ಥಿತಿಗತಿ ಏನಾಗಿತ್ತು? ಈಗ ಏನಾಗಿದೆ? ಈ ಎಲ್ಲವನ್ನು ಒಳಗೊಂಡ ಒಂದು ವಿಸ್ತೃತ ತನಿಖೆ ನಡೆದು, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.