ADVERTISEMENT

Sigandur Bridge| ಸೇತುವೆ ಉದ್ಘಾಟನೆ ಕಾರ್ಯಕ್ರಮ ಮುಂದೂಡಿ: ಗಡ್ಕರಿಗೆ ಸಿಎಂ ಪತ್ರ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 15:47 IST
Last Updated 13 ಜುಲೈ 2025, 15:47 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ಲಿಂಗನಮಕ್ಕಿ ಹಿನ್ನೀರಿನಲ್ಲಿ ನಿರ್ಮಿಸಿರುವ ಸೇತುವೆ ಉದ್ಘಾಟನೆಯ ಕಾರ್ಯಕ್ರಮದ ಕರಡು ಆಹ್ವಾನ ಪತ್ರಿಕೆಯ, ಆಹ್ವಾನಿತರ ಪಟ್ಟಿಯಲ್ಲಿ ನನ್ನ ಹೆಸರನ್ನು ಮುದ್ರಿಸಲಾಗಿದೆ. ಆದರೆ ಈ ಬಗ್ಗೆ ನಿಮ್ಮ ಸಚಿವಾಲಯದಿಂದ ನನಗೆ ಮಾಹಿತಿಯನ್ನೇ ನೀಡಿಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರಿಗೆ ಪತ್ರ ಬರೆದಿದ್ದಾರೆ.

ಶಿವಮೊಗ್ಗದ ಸಾಗರ ತಾಲ್ಲೂಕಿನಲ್ಲಿ ಸೋಮವಾರ (ಜುಲೈ 14) ಸೇತುವೆ ಉದ್ಘಾಟನೆ ಕಾರ್ಯಕ್ರಮವನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ನಿತಿನ್‌ ಗಡ್ಕರಿ ಅವರು ಭಾಗಿಯಾಗಲಿದ್ದಾರೆ. 

ಇದೇ 11ರಂದು ಪತ್ರ ಬರೆದಿರುವ ಅವರು, ‘ಸಾಧ್ಯವಾದರೆ ಕಾರ್ಯಕ್ರಮ ಮುಂದೂಡಿ. ನಿಮ್ಮ ಅನುಕೂಲದ ದಿನಾಂಕಗಳನ್ನು ತಿಳಿಸಿದರೆ ನಾನೂ ಜತೆಯಾಗುತ್ತೇನೆ’ ಎಂದಿದ್ದಾರೆ.

ADVERTISEMENT

‘ಇನ್ನು ಮುಂದೆ, ರಾಜ್ಯ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸುವ ಮುನ್ನ ರಾಜ್ಯ ಸರ್ಕಾರದ ಜತೆಗೆ ನಿಮ್ಮ ಸಚಿವಾಲಯವು ಸಮಾಲೋಚನೆ ನಡೆಸುವುದು ಸಮಂಜಸ. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದಕ್ಕೂ ಮುನ್ನ ರಾಜ್ಯ ಸರ್ಕಾರದ ಜತೆಗೆ ವ್ಯವಹರಿಸಿ ಎಂದು ನಿಮ್ಮ ಸಚಿವಾಲಯಕ್ಕೆ ನಿರ್ದೇಶನ ನೀಡಿ’ ಎಂದು ಕೋರಿದ್ದಾರೆ.

‘ಅದೇ ದಿನ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವ ಕಾರ್ಯಕ್ರಮ ಇದೆ. ಅಲ್ಲಿ ಪಾಲ್ಗೊಳ್ಳುವುದು ಪೂರ್ವ ನಿಗದಿಯಾಗಿರುವುದರಿಂದ, ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗುತ್ತಿಲ್ಲ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.