ಆರ್. ಆಶೋಕ, ಸಿದ್ದರಾಮಯ್ಯ
ಪ್ರಜಾವಾಣಿ ಚಿತ್ರ
ಬೆಂಗಳೂರು: ಕೆಎಎಸ್ ಪೂರ್ವಭಾವಿ ಮರುಪರೀಕ್ಷೆಯಲ್ಲಿ ಮತ್ತೆ ಎಡವಟ್ಟು ಮಾಡಿದ್ದು, ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ಭವಿಷ್ಯ ಡೋಲಾಯಮಾನವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಕೀಯ ಹಸ್ತಕ್ಷೇಪವೇ ಇದಕ್ಕೆ ಕಾರಣ ಎಂದು ವಿರೋಧಪಕ್ಷದ ನಾಯಕ ಆರ್.ಅಶೋಕ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮರುಪರೀಕ್ಷೆ ನಡೆಸುವಲ್ಲೂ ಕಾಂಗ್ರೆಸ್ ಸರ್ಕಾರ ಮುಗ್ಗರಿಸಿದೆ ಎಂದು ಹೇಳಿದ್ದಾರೆ.
ಆಗಸ್ಟ್‌ನಲ್ಲಿ ನಡೆದ 2023–24 ನೇ ಸಾಲಿನ ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೇಷನರ್ ಪೂರ್ವಭಾವಿ ಪರೀಕ್ಷೆಯಲ್ಲಿ ಭಾರಿ ಎಡವಟ್ಟುಗಳು ಕಂಡು ಬಂದಿತ್ತು. ಅಭ್ಯರ್ಥಿಗಳ ಆಕ್ರೋಶಕ್ಕೆ ಮಣಿದ ಸರ್ಕಾರ ಮರು ಪರೀಕ್ಷೆ ನಡೆಸಿತ್ತು. ಅದರಲ್ಲೂ ಎಡವಟ್ಟುಗಳ ಮೇಲೆ ಎಡವಟ್ಟು ಮಾಡಿದೆ. ಭಾಷಾಂತರದಲ್ಲಿ ಲೋಪ, ಒಎಂಆರ್ ಶೀಟ್ ಮತ್ತು ನೋಂದಣಿ ಸಂಖ್ಯೆ ಅದಲು ಬದಲು, ಕೆಲವೆಡೆ 45 ನಿಮಿಷ ತಡವಾಗಿ ಪರೀಕ್ಷೆ ಆರಂಭ, ಹೀಗೆ ಸಾಲು ಸಾಲು ಲೋಪಗಳಿಂದ ಕೂಡಿದ್ದ ಭಾನುವಾರದ ಮರು ಪರೀಕ್ಷೆ ಮತ್ತೊಮ್ಮೆ ಅಭ್ಯರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
ಮರಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದ 2.10 ಲಕ್ಷ ಅಭ್ಯರ್ಥಿಗಳ ಪೈಕಿ ಕೇವಲ 1 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಆಗಸ್ಟ್‌ನಲ್ಲಿ ನಡೆದ ಪರೀಕ್ಷೆಯಲ್ಲಿ ಶೇ 62.52 ರಷ್ಟಿದ್ದ ಹಾಜರಾತಿ, ಮರು ಪರೀಕ್ಷೆಯಲ್ಲಿ ಶೇ 47. 7 ಕ್ಕೆ ಕುಸಿದಿದೆ. ಅಂದರೆ, ಅಭ್ಯರ್ಥಿಗಳು ಕಾಂಗ್ರೆಸ್ ಸರ್ಕಾರ ಹಾಗೂ ಕೆಪಿಎಸ್‌ಸಿ ಮೇಲೆ ಸಂಪೂರ್ಣ ನಂಬಿಕೆ ಕಳೆದುಕೊಂಡಿದ್ದಾರೆ ಎಂದು ಅಶೋಕ ಹೇಳಿದ್ದಾರೆ.
ಅಗಸ್ಟ್‌ನಲ್ಲಿ ನಡೆದ ಪೂರ್ವಭಾವಿ ಪರೀಕ್ಷೆಗೆ ₹13.40 ಕೋಟಿ ವೆಚ್ಚವಾಗಿತ್ತು. ಮರು ಪರೀಕ್ಷೆಗೂ ಅಷ್ಟೇ ಮೊತ್ತ ಅಥವಾ ಅದಕ್ಕಿಂತಲೂ ಹೆಚ್ಚು ಖರ್ಚಾಗಿರುತ್ತದೆ. ಪರೀಕ್ಷಾ ಗೋಪ್ಯತೆ ಕಾಪಾಡುವುದಕ್ಕೆ ಸುಮಾರು ₹5.3 ಕೋಟಿ ವೆಚ್ಚ ಮಾಡಲಾಗಿದೆ. ಇಷ್ಟಾದರೂ ಈ ಪರಿ ಎಡವಟ್ಟುಗಳು ಮರುಕಳಿಸಿದೆ ಎಂದರೆ ಇದಕ್ಕೆ ಯಾರು ಹೊಣೆ? ಸಾರ್ವಜನಿಕರ ತೆರಿಗೆ ಹಣವನ್ನು ಹೀಗೆ ಪೋಲು ಮಾಡುವುದು ಯಾವ ನ್ಯಾಯ? ಒಂದಲ್ಲ ಹತ್ತು ಬಾರಿ ಮರುಪರೀಕ್ಷೆ ನಡೆಸಿದರೂ ಈ ಸರ್ಕಾರಕ್ಕೆ ಪರೀಕ್ಷೆ ನಡೆಸುವ ಯೋಗ್ಯತೆ ಇಲ್ಲ ಎಂದಿದ್ದಾರೆ.
ಆಗಸ್ಟ್‌ನಲ್ಲಿ ನಡೆದ ಪೂರ್ವಭಾವಿ ಪರೀಕ್ಷೆಯ ಎಡವಟ್ಟುಗಳಿಗೆ, ಲೋಪದೋಷಗಳಿಗೆ ಕಾರಣರಾದ ಪರೀಕ್ಷಾ ನಿಯಂತ್ರಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಅದೇ ಹುದ್ದೆಯಲ್ಲಿ ಮುಂದುವರಿಸಲಾಗಿದೆ. ಕಾರ್ಯದರ್ಶಿಗಳನ್ನು ಮಾತ್ರ ಎತ್ತಂಗಡಿ ಮಾಡಲಾಗಿದೆ ಎಂದು ಅಶೋಕ ಹೇಳಿದ್ದಾರೆ.
16 ಸದಸ್ಯರಿರುವ ಕೆಪಿಎಸ್‌ಸಿ ದೇಶದಲ್ಲೇ ದೊಡ್ಡ ಪರೀಕ್ಷಾ ಆಯೋಗ. ಅವರ ಸಂಬಳ, ಸಾರಿಗೆಗೆಂದು ಸರ್ಕಾರ ಕೋಟ್ಯಂತರ ರೂಪಾಯಿ ತೆರಿಗೆದಾರರ ಹಣ ವ್ಯಯ ಮಾಡುತ್ತಿದೆ. ಇಷ್ಟಾದರೂ ಗೊಂದಲ ಮುಕ್ತ ಪೂರ್ವಭಾವಿ ಪರೀಕ್ಷೆ ನಡೆಸಲು ವಿಫಲವಾಗುತ್ತಿದೆ ಎಂದರೆ, ಇದನ್ನು ಸರ್ಕಾರ ಗಂಭೀರವಾಗಿಯೇ ಪರಿಗಣಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.