ADVERTISEMENT

ಹಸಿದವರನ್ನು ರಾಜಕೀಯ ಕಣ್ಣಿನಿಂದ ನೋಡದಿರಿ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2020, 20:15 IST
Last Updated 22 ಏಪ್ರಿಲ್ 2020, 20:15 IST
ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಸಿದ್ದರಾಮಯ್ಯ (ಸಂಗ್ರಹ ಚಿತ್ರ)   

ಬೆಂಗಳೂರು: ‘ಹಸಿವಿಗೆ ಜಾತಿ, ಧರ್ಮ, ಪಕ್ಷ ಮತ್ತು ಪಂಗಡ ಎಂಬುದು ಇರುವುದಿಲ್ಲ. ಹೀಗಾಗಿ ಹಸಿದವರನ್ನು ರಾಜಕೀಯದ ಕಣ್ಣುಗಳಿಂದ ನೋಡಬೇಡಿ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಬಿಟಿಎಂ ಲೇಔಟ್‌ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಆರಂಭಿಸಿರುವ ಅನ್ನ ದಾಸೋಹ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿದ ಅವರು ಸುದ್ದಿಗಾರರ ಜತೆ ಮಾತನಾಡಿದರು.

‘ಕೊರೊನಾದಿಂದ ಸಂಕಷ್ಟಕ್ಕೆ ಗುರಿಯಾಗಿರುವ ಕೂಲಿಕಾರ್ಮಿಕರು, ವಲಸಿಗ ಕಾರ್ಮಿಕರು ಹಾಗೂ ಬಡವರಿಗೆ ಆಹಾರ ನೀಡುವ ವಿಚಾರದಲ್ಲಿ ತಾರತಮ್ಯ ಮಾಡಬೇಡಿ’ ಎಂದರು.

ADVERTISEMENT

‘ಸರ್ಕಾರ ಹಸಿದವರಿಗೆ ಆಹಾರದ ಪ್ಯಾಕೇಟ್ ನೀಡುವುದಾಗಿ ಹೇಳಿದೆ. ಆದರೆ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿ ಸಮರ್ಪಕವಾಗಿ ವಿತರಣೆಯಾಗುತ್ತಿಲ್ಲ. ರಾಮಲಿಂಗಾರೆಡ್ಡಿಯವರು ಒತ್ತಡ ಹೇರಿದ ಕಾರಣಕ್ಕೆ ಅವರ ಕ್ಷೇತ್ರಕ್ಕಾಗಿ ಸರ್ಕಾರದ ಕಡೆಯಿಂದ ಕೇವಲ ಐದು ಸಾವಿರ ಪ್ಯಾಕೆಟ್‌ ಬರುತ್ತಿದೆ. ಆದರೆ ಇಲ್ಲಿ ಶಾಸಕರು ಸ್ವಂತ ಖರ್ಚಿನಲ್ಲಿ ಹಲವು ಸಂಘ ಸಂಸ್ಥೆಗಳ ನೆರವಿನೊಂದಿಗೆ ಊಟ, ತಿಂಡಿ, ದಿನಸಿ, ತರಕಾರಿ ವಿತರಣೆ ಮಾಡುತ್ತಿದ್ದಾರೆ’ ಎಂದರು.

‘ಆಹಾರದ ಪ್ಯಾಕೆಟ್‌ ವಿತರಣೆಯಲ್ಲಿ ಪಕ್ಷಪಾತ ನಡೆಯುತ್ತಿದೆ. ಅನೇಕ ಕಡೆಗಳಲ್ಲಿ ಬಿಜೆಪಿ ಕಾರ್ಪೊರೇಟರ್‌ಗಳು ಅವರಿಗೆ ಬೇಕಾದವರಿಗೆ ಮಾತ್ರ ಆಹಾರ ನೀಡುತ್ತಿದ್ದಾರೆ ಎಂಬ ದೂರುಗಳಿವೆ. ಜೊತೆಗೆ ರಾಜ್ಯದ ನಾನಾ ಕಡೆಗಳಲ್ಲಿಯೂ ಇಂತಹ ವರ್ತನೆ ಕಂಡುಬರುತ್ತಿದೆ. ಹಸಿದ ಎಲ್ಲರಿಗೂ ಅನ್ನ ನೀಡುವುದು ಸರ್ಕಾರದ ಕರ್ತವ್ಯ’ ಎಂದು ಹೇಳಿದರು.

‘ಪಾದರಾಯನಪುರ ಘಟನೆ ಸಮರ್ಥನೀಯವಲ್ಲ. ತಪ್ಪು ಯಾರು ಮಾಡಿದ್ದರೂ ತಪ್ಪೇ. ಅದನ್ನು ಸಮರ್ಥನೆ ಮಾಡಿಕೊಳ್ಳುವುದಿಲ್ಲ. ಆದರೆ ಘಟನೆಗೆ ಜಾತಿ, ಧರ್ಮದ ಬಣ್ಣ ಕಟ್ಟಬಾರದು. ತಪ್ಪು ಮಾಡಿದವರಿಗೆ, ಕಾನೂನು ಕೈಗೆ ತೆಗೆದುಕೊಳ್ಳುವವರಿಗೆ ಶಿಕ್ಷೆ ಆಗಲೇಬೇಕು’ ಎಂದು ಸಿದ್ದರಾಮಯ್ಯ ಹೇಳಿದರು.

‘ಕೊರೊನಾ ಸೋಂಕು ನಿಯಂತ್ರಣಕ್ಕೆ ಹೋರಾಟ ಮಾಡುತ್ತಿರುವ ವೈದ್ಯರು, ನರ್ಸ್‍ಗಳು, ಆಶಾ ಕಾರ್ಯಕರ್ತರೇ ನಿಜವಾದ ಯೋಧರು. ಅವರಿಗೆ ಗೌರವ ನೀಡಬೇಕಾದುದು ನಮ್ಮ ಕರ್ತವ್ಯ’ ಎಂದರು.

‘ಅಕ್ಕಿಯಿಂದ ಸ್ಯಾನಿಟೈಸರ್ ಬೇಡ’

‘ಬಡವರಿಗೆ ವಿತರಿಸಲು ದಾಸ್ತಾನಾಗಿರುವ ಅಕ್ಕಿಯಿಂದ ಸ್ಯಾನಿಟೈಸರ್ ತಯಾರು ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿರುವುದು ಸರಿಯಲ್ಲ. ಸ್ಯಾನಿಟೈಸರ್ ತಯಾರು ಮಾಡಲು ಬೇರೆ ವಸ್ತುಗಳಿವೆ. ಅಕ್ಕಿ ಹೆಚ್ಚಾಗಿದ್ದರೆ ಹಸಿದವರಿಗೆ ವಿತರಿಸಲಿ. ಬೇರೆ ದಾರಿಯೇ ಇಲ್ಲ ಎಂದಾಗ ಮಾತ್ರ ಅಕ್ಕಿ ಬಳಸಲಿ’ ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.