ADVERTISEMENT

‘ಮೈಸೂರು ಕೇಳಿದರು, ತುಮಕೂರು ಕೊಟ್ಟೆವು’

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2019, 19:47 IST
Last Updated 26 ಮಾರ್ಚ್ 2019, 19:47 IST
   

ಬೆಂಗಳೂರು: ‘ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಒಟ್ಟು 150 ಸೀಟುಗಳನ್ನು ಗೆಲ್ಲಲಿದ್ದು, ರಾಜ್ಯದಲ್ಲಿ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲಿದೆ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಮಂಗಳವಾರ ‘ಟ್ವಿಟರ್ ಸಂವಾದ’ ನಡೆಸಿದ ಅವರು, ‘ಕೋಮುವಾದಿ ಪಕ್ಷವನ್ನು ದೂರ ಇಡಬೇಕೆಂದೇ‌ ‘ಮೈತ್ರಿ’ ಮಾಡಿಕೊಂಡಿದ್ದೇವೆ. ಹಲವು ದಿನಗಳಿಂದ ಸಿದ್ಧತೆ ಮಾಡಿಕೊಂಡು, ಆತ್ಮವಿಶ್ವಾಸದಿಂದ ಚುನಾವಣೆಗೆ ಧುಮುಕುತ್ತಿದ್ದೇವೆ. ನಮ್ಮ ಮೈತ್ರಿಕೂಟದಲ್ಲಿರುವ ಉಳಿದ ಪಕ್ಷಗಳು 150ಕ್ಕೂ ಹೆಚ್ಚು ಕಡೆ ವಿಜಯ ಪತಾಕೆ ಹಾರಿಸಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಸಮಾಧಾನವಿದೆ: ‘ಸೀಟು ಹಂಚಿಕೆ ವಿಚಾರದಲ್ಲಿ ಒಂದೆರಡು ಕಡೆ ಅಸಮಾಧಾನ ಇರುವುದು ನಿಜ. ‘ಮೈತ್ರಿ’ ಮಾಡಿಕೊಂಡಾಗ ಇದೆಲ್ಲ ಸಹಜ ಕೂಡ. ಮಂಡ್ಯದಲ್ಲಿ ಹಾಲಿ ಜೆಡಿಎಸ್ ಸಂಸದರಿದ್ದ ಕಾರಣ ಆ ಕ್ಷೇತ್ರವನ್ನು ಅವರಿಗೇ ಬಿಟ್ಟುಕೊಟ್ಟೆವು. ಅವರು ಮೈಸೂರನ್ನೂ ಕೇಳಿದರು. ಆದರೆ, ಅಲ್ಲಿ ಗೆಲ್ಲುವ ಅವಕಾಶ ಹೆಚ್ಚಿರುವುದು ಕಾಂಗ್ರೆಸ್‌ಗೆ. ಈ ಕಾರಣದಿಂದ ಮೈಸೂರಿನ ಬದಲಾಗಿ ತುಮಕೂರನ್ನು ಅನಿವಾರ್ಯವಾಗಿ ಬಿಟ್ಟುಕೊಟ್ಟಿದ್ದೇವೆ’ ಎಂದೂ ಹೇಳಿದರು.

ADVERTISEMENT

‘ಮೂಲದಲ್ಲಿ ನಾವು ಜನರನ್ನು ಪ್ರೀತಿಸಬೇಕು. ಆಗ ಮಾತ್ರ ಇಡೀ ದೇಶವನ್ನು ಪ್ರೀತಿಸಲು ಸಾಧ್ಯವಾಗುತ್ತದೆ. ದಲಿತರ ಹಾಗೂ ಅಲ್ಪಸಂಖ್ಯಾತರ ಮೇಲೆ ಹಲ್ಲೆ ಮಾಡಿ, ನಾವು ದೇಶಪ್ರೇಮಿಗಳು ಎಂದರೆ ಅದು ಹಾಸ್ಯಾಸ್ಪದ ಎನಿಸುತ್ತದೆ. ಮೋದಿ ಪ್ರಜಾಪ್ರಭುತ್ವ ವಿರೋಧಿ. ಕೇಂದ್ರೀಕೃತ ಆಡಳಿತ ಬಯಸುವವರು. ಹೀಗಾಗಿ, ನಾನು ಅವರನ್ನು ಸದಾ ಟೀಕೆ ಮಾಡುತ್ತೇನೆ’ ಎಂದು ಹರಿಹಾಯ್ದರು.

‘ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆ ಆಗಿದ್ದರಿಂದ ಸ್ವಲ್ಪ ಬೇಸರವಾಯಿತು. ಕೊಟ್ಟ ಎಲ್ಲ ಭರವಸೆಗಳನ್ನೂ ಈಡೇರಿಸಿದ್ದರೂ, ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ನನ್ನ ಬಗ್ಗೆ ಅಪಪ್ರಚಾರ ಮಾಡಲಾಯಿತು. ನನ್ನನ್ನು ಹಿಂದೂ ವಿರೋಧಿ ಎಂದು ಬಿಂಬಿಸಲಾಯಿತು. ಆ ಸೋಲನ್ನು ಮತ್ತಷ್ಟು ಸವಾಲಾಗಿ ತೆಗೆದುಕೊಂಡಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.