ಬೆಂಗಳೂರು: ಗುರು ಸಿದ್ದರಾಮೇಶ್ವರರು ಕಾಯಕದ ಮೂಲಕ ಪವಾಡ ಸೃಷ್ಟಿಸಿದವರು. ಕಾಯಕ ಮಾಡುವವರಿಗೆ ಯಾವತ್ತೂ ಬಡತನ ಬರುವುದಿಲ್ಲ ಎಂದು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಅರಮನೆ ಮೈದಾನದಲ್ಲಿ ‘ನೊಳಂಬ ಲಿಂಗಾಯತ ಸಂಘ’ ಏರ್ಪಡಿಸಿದ್ದ ಗುರು ಸಿದ್ದರಾಮೇಶ್ವರರ 852ನೇ ಜಯಂತಿ ಕಾರ್ಯಕ್ರಮದಲ್ಲಿ ಸಾಹಿತ್ಯಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
12ನೇ ಶತಮಾನದಲ್ಲಿ ಹಲವಾರು ಶರಣರನ್ನು ಸೃಷ್ಟಿಸಿದ ಸಿದ್ದರಾಮೇಶ್ವರರು, ಬಸವಣ್ಣನ ಕಾಯಕ ತತ್ಬವನ್ನು ಪಾಲಿಸಿದ್ದರು ಎಂದು ಹೇಳಿದರು.
ಕಾಯಕ ಎಂದರೆ ಹೊಟ್ಟೆಪಾಡಿಗಾಗಿ ಅಲ್ಲ. ಕಾಯಕ ಅಂದರೆ ಪರಿಪೂರ್ಣತೆ. ಆ ಸಂದರ್ಭದಲ್ಲಿ ರೈತರಿಗೆ ನೀರು, ನೀರಾವರಿ ಮಹತ್ವ ಹೇಳಿಕೊಟ್ಟವರು ಅವರು. ಮಣ್ಣಿನ ಮಹತ್ವವೇ ಬದುಕಿನ ಜೀವಾಳ ಎನ್ನುವುದನ್ನು ಸಿದ್ದರಾಮೇಶ್ವರರು ತೋರಿಸಿದರು. ನೊಳಂಬ ಸಮಾಜದಲ್ಲಿ ಕಾಯಕ ಎನ್ನುವುದು ರಕ್ತಗತವಾಗಿ ಬಂದಿದೆ. ಕಾಯಕ ಸಮಾಜಕ್ಕೆ ಎಂದೂ ಬಡತನ, ದುಃಖ ಬರುವುದಿಲ್ಲ. ಕಷ್ಟಗಳನ್ನು ಮೆಟ್ಟಿ ನಿಲ್ಲುವ ಶಕ್ತಿ ನೊಳಂಬ ಸಮುದಾಯಕ್ಕೆ ಇದೆ ಎಂದು ಹೇಳಿದರು.
ಕೇಂದ್ರದ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ‘ಸಮಾಜದಲ್ಲಿ ಮಾನವೀಯ ಮೌಲ್ಯಗಳು ನಶಿಸುತ್ತಿದ್ದು, ಸಂತರು ಮತ್ತು ಶರಣರ ಮಾರ್ಗದರ್ಶನದಲ್ಲಿ ಪುನರುದ್ಧಾರ ಆಗಬೇಕಿದೆ. ಪ್ರತಿದಿನವೂ ಕೆಟ್ಟ ಸುದ್ದಿಗಳು, ಅಪರಾಧಗಳು ವಿಜೃಂಭಿಸುತ್ತಿವೆ. ಅವೆಲ್ಲವನ್ನೂ ಮಾಧ್ಯಮಗಳಲ್ಲಿ ಕಂಡರೆ ಕಳವಳವಾಗುತ್ತಿದೆ. ಸಮಾಜದ ಸ್ವಾಸ್ಥ್ಯ ಕಾಪಾಡಲು ಸಂತರು, ಶರಣರೇ ದಾರಿ ತೋರಬೇಕು’ ಎಂದರು.
‘ನಾವೆಲ್ಲ ನಡೆ–ನುಡಿಗಳಲ್ಲಿ ಎಷ್ಟು ಪರಿಶುದ್ಧವಾಗಿದ್ದೇವೆ ಎನ್ನುವ ಬಗ್ಗೆ ಆಲೋಚನೆ ಮಾಡಬೇಕು. ಶರಣರ ನುಡಿಯಲ್ಲಿ ಸ್ವಲ್ಪವಾದರೂ ಅಳವಡಿಸಿಕೊಂಡರೆ ಶರಣರಿಗೆ ಗೌರವ ಕೊಟ್ಟಂತಾಗುತ್ತದೆ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತುಮಕೂರಿನ ಸಿದ್ದಗಂಗಾ ಮಠದ ಪೀಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ಸಾಣೇಹಳ್ಳಿಯ ತರಳಬಾಳು ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕೆರಗೋಡು-ರಂಗಾಪುರ ಕ್ಷೇತ್ರದ ಗುರುಪರದೇಶಿಕೇಂದ್ರ ಸ್ವಾಮೀಜಿ, ಕುಪ್ಪೂರು - ತಮ್ಮಡಿಹಳ್ಳಿಯ ವಿರಕ್ತಮಠದ ಅಧ್ಯಕ್ಷ ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮೀಜಿ, ಅರಸೀಕರೆಯ ಜ್ಞಾನಪ್ರಭು ಸ್ವಾಮೀಜಿ, ಶಿವಶಂಕರ ಶಿವಯೋಗಿ ಸ್ವಾಮೀಜಿ, ಮಾಜಿ ಸಚಿವರಾದ ಜೆ.ಸಿ. ಮಾಧುಸ್ವಾಮಿ, ಡಾ. ಸಿ.ಎನ್. ಅಶ್ವತ್ಥ್ ನಾರಾಯಣ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ವೀರಶೈವ–ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಂಕರ ಬಿದರಿ ಹಾಜರಿದ್ದರು.
ರಾಜಕೀಯ ಬದಿಗಿಟ್ಟು ನಾಡಿಗೆ ಒಂದಾಗಿ: ವಿಜಯೇಂದ್ರ
‘ನಮ್ಮ ಸಮುದಾಯ ಕವಲುದಾರಿಯಲ್ಲಿ ಇರುವ ಸಂದರ್ಭದಲ್ಲಿ ಸಮುದಾಯಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಆಗುತ್ತಿದೆ. ತಮ್ಮ ರಾಜಕೀಯ ಬೇಳೆ ಬೇಯಿಸೋ ಕೆಲಸ ಸಮುದಾಯದಲ್ಲಿ ನಡೆಯುತ್ತಿದೆ. ನಾವು ತಕ್ಷಣವೇ ಎಚ್ಚೆತ್ತುಕೊಳ್ಳಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಗುರು ಸಿದ್ಧರಾಮೇಶ್ವರರ 852ನೇ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು ವೀರಶೈವ ಲಿಂಗಾಯತ ಸಮುದಾಯಗಳು ಸಮಸ್ಯೆಗಳನ್ನು ಬದಿಗಿಟ್ಟು ರಾಜಕೀಯ ಕಾರಣಕ್ಕೆ ಮಾತ್ರವಲ್ಲ ನಾಡಿನ ಹಿತಕ್ಕಾಗಿ ಒಗ್ಗಟ್ಟಾಗಬೇಕು. ಏನೇ ಅಡೆತಡೆ ಬಂದರೂ ತಂದೆ ಬಿ.ಎಸ್.ಯಡಿಯೂರಪ್ಪ ಎಲ್ಲವನ್ನು ಮೆಟ್ಟಿ ನಿಂತು ರಾಜಕೀಯ ಮಾಡಿದ್ದರು. ನಾನು ಸಹ ಏನೇ ಸಮಸ್ಯೆ ಬಂದರು ಎಲ್ಲವನ್ನು ಮೆಟ್ಟಿ ನಿಂತು ಸಮಾಜಕ್ಕೆ ಧ್ವನಿಯಾಗಿ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತೇನೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.