ADVERTISEMENT

ಸಿಗಂದೂರು: ಅರಣ್ಯ ಅತಿಕ್ರಮಣ

ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 18:39 IST
Last Updated 23 ನವೆಂಬರ್ 2020, 18:39 IST
   

ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಸಿಗಂದೂರಿನಲ್ಲಿ ಚೌಡೇಶ್ವರಿ ದೇವಾಲಯದ ಹೆಸರಿನಲ್ಲಿ ಅರಣ್ಯ ಜಮೀನು ಅತಿಕ್ರಮಣ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸ್ಥಳೀಯ ತಹಶೀಲ್ದಾರ್‌ ಮೂಲಕ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಚೌಡೇಶ್ವರಿ ದೇವಸ್ಥಾನದ ಹೆಸರಿನಲ್ಲಿ ಅರಣ್ಯ ಜಮೀನು ಒತ್ತುವರಿ ನಡೆದಿದೆ ಮತ್ತು ದೇವಸ್ಥಾನದ ಟ್ರಸ್ಟ್‌ನಲ್ಲಿ ಆರ್ಥಿಕ ಅವ್ಯವಹಾರಗಳು ನಡೆಯುತ್ತಿವೆ ಎಂದು ಆರೋಪಿಸಿ ಸಾಗರ ತಾಲ್ಲೂಕಿನ ತುಮರಿ ನಿವಾಸಿ ಕೆ.ಎಸ್‌. ಲಕ್ಷ್ಮೀನಾರಾಯಣ ಮತ್ತು ಇತರ ಇಬ್ಬರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ನೇತೃತ್ವದ ವಿಭಾಗೀಯ ಪೀಠದಲ್ಲಿ ಸೋಮವಾರ ನಡೆಯಿತು.

ದೇವಸ್ಥಾನದ ಹೆಸರಿನಲ್ಲಿ ಅರಣ್ಯ ಜಮೀನು ಅತಿಕ್ರಮಣ ನಡೆದಿದೆಯೇ ಎನ್ನುವ ಕುರಿತು ತಹಶೀಲ್ದಾರ್‌ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆಸ ಬೇಕು. ಒತ್ತುವರಿ ಆಗಿದ್ದಲ್ಲಿ ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿತು.

ADVERTISEMENT

ಕಂದಾಯ, ಮುಜರಾಯಿ ಮತ್ತು ಅರಣ್ಯ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು, ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು, ಶಿವಮೊಗ್ಗ ಜಿಲ್ಲಾಧಿಕಾರಿ, ಸಾಗರ ಉಪ ವಿಭಾಗಾಧಿಕಾರಿ, ತಹಶೀಲ್ದಾರ್‌, ಶಿವಮೊಗ್ಗ ಎಸ್‌ಪಿ ಮತ್ತು ದೇವಸ್ಥಾನದ ಧರ್ಮದರ್ಶಿ ರಾಮಪ್ಪ ಅವರಿಗೆ ನೋಟಿಸ್‌ ಜಾರಿಗೆ ಆದೇಶಿಸಿದ ಪೀಠ, ಮುಂದಿನ ವಿಚಾರಣೆ ವೇಳೆ ಆಕ್ಷೇ ಪಣೆ ಸಲ್ಲಿಸುವಂತೆ ಪ್ರತಿವಾದಿಗಳಿಗೆ ಸೂಚಿಸಿತು.

ಅರ್ಜಿದಾರರ ಪರ ವಾದ ಮಂಡಿ ಸಿದ ವಕೀಲ ಪಿ.ಪಿ. ಹೆಗ್ಡೆ, ‘ಸಾಗರ ತಾಲ್ಲೂಕಿನ ಕಳಸವಳ್ಳಿ ಗ್ರಾಮದ ಸರ್ವೆ ನಂ. 65ರಲ್ಲಿ ಸಿಗಂದೂರು ಚೌಡೇಶ್ವರಿ ದೇವಾಲಯವಿದೆ. ಅದು ಶರಾವತಿ ಕಣಿವೆ ವನ್ಯಜೀವಿ ಧಾಮದ ಪ್ರದೇಶ. ಅಲ್ಲಿ ದೇವಾಲಯದ ಹೆಸರಿನಲ್ಲಿ ಅರಣ್ಯ ಜಮೀನು ಒತ್ತುವರಿ ನಡೆದಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ 2020ರ ಅ.23ರಂದು ನೀಡಿರುವ ವರದಿಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಕ್ರಮ ಜರುಗಿಸಲು ಆದೇಶಿಸಬೇಕು’ ಎಂದು ಕೋರಿದರು.

ಸಿಗಂದೂರು ದೇವಾಲಯದ ಆಡಳಿತ ನಡೆಸುತ್ತಿರುವ ಟ್ರಸ್ಟ್‌ನಲ್ಲಿ ಆರ್ಥಿಕ ಅವ್ಯವಹಾರ ನಡೆಯುತ್ತಿದೆ. ದೇವಾಲಯದ ಆಡಳಿತವನ್ನು ಸರ್ಕಾರ ತನ್ನ ವಶಕ್ಕೆ ಪಡೆಯಬೇಕು. ದೇವಸ್ಥಾನದ ಆಸ್ತಿಗಳ ಪರಿಶೀಲನೆ ನಡೆಸಬೇಕು. ಅರಣ್ಯ ಜಮೀನು ಒತ್ತುವರಿ ಪತ್ತೆಯಾದಲ್ಲಿ ತೆರವಿಗೆ ಆದೇಶ ಹೊರಡಿಸಬೇಕು ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.