ADVERTISEMENT

ಶಿರಾ | ಅಂಚೆ ಮತಕ್ಕಾಗಿ ಮುಗಿಬಿದ್ದ ಪಕ್ಷಗಳು: 1 ಮತಕ್ಕೆ ಸಾವಿರದಿಂದ ₹ 3 ಸಾವಿರ

ಹಳ್ಳಿಗಳಲ್ಲಿ ಕೆಲವರಿಂದ ತೀವ್ರ ವಿರೋಧ

ಡಿ.ಎಂ.ಕುರ್ಕೆ ಪ್ರಶಾಂತ
Published 26 ಅಕ್ಟೋಬರ್ 2020, 19:35 IST
Last Updated 26 ಅಕ್ಟೋಬರ್ 2020, 19:35 IST
ಸಾಂಕೇತಿಕ ಚಿತ್ರ (ಎಎಫ್‌ಪಿ ಚಿತ್ರ)
ಸಾಂಕೇತಿಕ ಚಿತ್ರ (ಎಎಫ್‌ಪಿ ಚಿತ್ರ)   

ತುಮಕೂರು: ಶಿರಾ ಉಪಚುನಾವಣೆಯಲ್ಲಿ ಕೆಲವು ಮತದಾರರಿಗೆ ಈಗಲೇ ಅಂಚೆ ಮತ ಚಲಾಯಿಸಲು ಅವಕಾಶ ನೀಡಲಾಗಿದೆ. ಈ ಅವಕಾಶವನ್ನು ರಾಜಕೀಯ ಪಕ್ಷಗಳು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎನ್ನುವ ದೂರು ವ್ಯಾಪಕವಾಗಿದೆ.

ಕೊರೊನಾ ಕಾರಣದಿಂದ 80 ವರ್ಷ ದಾಟಿದವರು, ಕೊರೊನಾ ಸೋಂಕಿತರು, ಶಂಕಿತರು ಮತ್ತು ಅಂಗವಿಕಲರಿಗೆ ಅವರು ಇದ್ದ ಸ್ಥಳದಿಂದಲೇ ಅಂಚೆ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ನೀಡಿದೆ.

‘ನಮೂನೆ–12ಡಿ’ ಮೂಲಕ ಸಹಾಯಕ ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ್‌ಗೆ ‌ಮತಪತ್ರಕ್ಕಾಗಿ ಅರ್ಜಿ ಸಲ್ಲಿಸಬೇಕಿತ್ತು. ಬಿಎಲ್‌ಒಗಳು ಮನೆಗೆ ಭೇಟಿ ನೀಡಿ ಅರ್ಜಿ ವಿತರಿಸಿ ಭರ್ತಿ ಮಾಡಿದ ಅರ್ಜಿಗಳನ್ನು ವಾಪಸ್ ಪಡೆದಿದ್ದಾರೆ.

ADVERTISEMENT

330 ಮತಗಟ್ಟೆ ವ್ಯಾಪ್ತಿಯಲ್ಲಿ 2,790 ಮಂದಿ 80 ವರ್ಷ ಮೇಲ್ಪಟ್ಟವರು, 2,093 ಅಂಗವಿಕಲರು ಹಾಗೂ 136 ಮಂದಿ ಕೊರೊನಾ ಸೋಂಕಿತರು ಸೇರಿದಂತೆ ಒಟ್ಟು 5,019 ಮಂದಿ ಮತದಾನಕ್ಕೆ ಅರ್ಹರಾಗಿದ್ದಾರೆ.

ಮೊದಲ ಸುತ್ತಿನ ಮತದಾನ ಅ. 25ರಿಂದ ಆರಂಭವಾಗಿದ್ದು 27ರ ವರೆಗೆ ನಡೆಯಲಿದೆ. ಎರಡನೇ ಸುತ್ತಿನ ಮತದಾನ ಅ. 29ರಿಂದ 31ರ ವರೆಗೆ ನಡೆಯಲಿದೆ. ಇಂತಹ ದಿನ ಗ್ರಾಮಕ್ಕೆ ಬರುತ್ತೇವೆ ಎಂದು ಅಧಿಕಾರಿಗಳು ಮೊದಲೇ ಮಾಹಿತಿ ನೀಡಿರುತ್ತಾರೆ. ಅಧಿಕಾರಿಗಳು ಮನೆಗಳಿಗೆ ತೆರಳಿ ನಿಯಮಗಳ ಅನುಸಾರ ದಾಖಲೆಗಳನ್ನು ಪರಿಶೀಲಿಸಿ, ಘೋಷಣಾ ಪತ್ರಕ್ಕೆ ಸಹಿ ಪಡೆದು ಮತದಾನ ಮಾಡಿಸಿಕೊಳ್ಳುತ್ತಿದ್ದಾರೆ. ಪ್ರತಿ ಮತದಾರರಿಗೆ 10-12 ನಿಮಿಷ ಸಮಯ ನೀಡಿ ಪ್ರಕ್ರಿಯೆಗಳನ್ನು ವಿಡಿಯೊ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದಾರೆ.

ನೋಂದಾಯಿಸಿಕೊಂಡವರ ಮನೆಗಳಿಗೆ ತೆರಳುತ್ತಿರುವ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರು ಪೈಪೋಟಿಗೆ ಬಿದ್ದು ಅಂಚೆ ಮತ ಖರೀದಿಗೆ ಮುಂದಾಗಿದ್ದಾರೆ. ಬಿಜೆಪಿ ಒಂದು ಮತಕ್ಕೆ ₹ 2ರಿಂದ 3 ಸಾವಿರ, ಕಾಂಗ್ರೆಸ್ ಮತ್ತು ಜೆಡಿಎಸ್ ₹1ರಿಂದ 2 ಸಾವಿರ ಹಣದ ಆಮಿಷ ಒಡ್ಡುತ್ತಿವೆ ಎನ್ನಲಾಗುತ್ತಿದೆ. ಅಂಚೆ ಮತದಾರರ ಪಟ್ಟಿ ಸಿದ್ಧವಾದ ತಕ್ಷಣವೇ ಅಧಿಕಾರಿಗಳಿಂದ ಮಾಹಿತಿ ಪಡೆದು ಮೂರು ಪಕ್ಷಗಳ ಮುಖಂಡರು ಮತದಾರರನ್ನು
ಸಂಪರ್ಕಿಸುತ್ತಿದ್ದಾರೆ.

ಕಳ್ಳಂಬೆಳ್ಳ ಹೋಬಳಿಯ ಚಿನ್ನಪ್ಪನಹಳ್ಳಿಯಲ್ಲಿ ಅಧಿಕಾರಿಗಳು ಮತ ಸಂಗ್ರಹಿಸುತ್ತಿದ್ದರು. ‘ಇದು ಅಕ್ರಮ ನಡೆಸಲು ಅವಕಾಶ ನೀಡುತ್ತದೆ’ ಎಂದುಕರ್ನಾಟಕ ರಾಷ್ಟ್ರ ಸಮಿತಿ ಮುಖಂಡರು ಆರೋಪಿಸಿದ್ದಾರೆ. ದ್ವಾರಾಳು ಗ್ರಾಮ
ದಲ್ಲಿ ಸೋಮವಾರ ಸಂಜೆ 83 ವರ್ಷದ ನರಸಿಂಹಯ್ಯ ಎಂಬುವವರಿಗೆ ಬಿಜೆಪಿ ಕಾರ್ಯಕರ್ತರು ಎಂದು ಹೇಳಿಕೊಂಡು ಹಣ ನೀಡಲು ಮುಂದಾಗಿದ್ದಾರೆ.

‘ನಮ್ಮ ತಂದೆಗೆ 83 ವರ್ಷ, ತಾಯಿ ಅಂಗವಿಕಲರು. ಶನಿವಾರ ಅಧಿಕಾರಿಗಳು ನಮ್ಮ ಮನೆ ಸೇರಿದಂತೆ ಊರಿನಲ್ಲಿ ಅಂಚೆ ಮತದಾನಕ್ಕೆ ಅರ್ಹರ ಹೆಸರು ನೋಂದಾಯಿಸಿಕೊಂಡು ಹೋಗಿದ್ದರು. ಸೋಮವಾರ ರಾತ್ರಿ ಮಂಡ್ಯದಿಂದ ಬಂದಿದ್ದೇವೆ, ನಾವು ಬಿಜೆಪಿ ಕಾರ್ಯ
ಕರ್ತರು ಎಂದು ಕೆಲವರು ಮನೆ ಬಳಿ ಬಂದಿದ್ದರು. ಹಣ ತೆಗೆದು ನಮ್ಮ ತಂದೆ ಅವರ ಬಳಿ ಬಂದರು. ‌ನಮ್ಮ ತಂದೆ ಯಾವತ್ತೂ ಮತ ಮಾರಿಕೊಂಡವರಲ್ಲ. ಸ್ವಾಭಿಮಾನಿ. ಅವರನ್ನು ಸಿಟ್ಟಿಗೆ ಎಬ್ಬಿಸಿತು. ತರಾಟೆಗೆ ತೆಗೆದುಕೊಂಡರು. ಆಗ ಬಂದವರು ವಾಪಸ್ ಹೋದರು’ ಎಂದು ಘಟನೆಯ ಬಗ್ಗೆ ನರಸಿಂಹಯ್ಯ ಅವರ ಪುತ್ರ ಮಂಜುನಾಥ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಚುನಾವಣಾ ಆಯೋಗಕ್ಕೆ ದೂರು

‘ಈ ಅಂಚೆ ಮತದಾನ ಗೋಪ್ಯವಾಗಿ ಮಾಡಬೇಕಿತ್ತು. ಆದರೆ ಮುಕ್ತವಾಗಿಯೇ ಮತಹಾಕಿಸಿಕೊಳ್ಳಲಾಗುತ್ತಿದೆ. ಅದನ್ನು ಬೂತ್‌ಗೂ ಹಾಕುತ್ತಿಲ್ಲ. ಪ್ಲಾಸ್ಟಿಕ್ ಕವರ್‌ನಲ್ಲಿ ತೆಗೆದುಕೊಂಡು ಹೋಗುತ್ತಿದ್ದಾರೆ. ಇದು ಅಕ್ರಮಕ್ಕೂ ಅವಕಾಶ ಆಗುತ್ತದೆ. ಚುನಾವಣಾಧಿಕಾರಿಗೆ ದೂರು ನೀಡಿದರೂ ಕ್ರಮಕೈಗೊಂಡಿಲ್ಲ. ಅಧಿಕಾರಿಗಳನ್ನು ಕೇಳಿದರೆ ನಮಗೆ ಸೂಚನೆ ಇದ್ದಂತೆ ಕೆಲಸ ಮಾಡುತ್ತಿದ್ದೇವೆ ಎನ್ನುತ್ತಾರೆ. ನಾವು ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ’ ಎಂದು ಕರ್ನಾಟಕ ರಾಷ್ಟ್ರ ಸಮಿತಿ ರಾಜ್ಯ ಕಾರ್ಯದರ್ಶಿ ದೀಪಕ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.