
ಬೆಂಗಳೂರು: ಠೇವಣಿದಾರರ ₹65 ಕೋಟಿಯನ್ನು ವಂಚಿಸಿದ ಪ್ರಕರಣದಲ್ಲಿ ಸಿರಿವೈಭವ ಸೌಹಾರ್ದ ಪತ್ತಿನ ಸಹಕಾರ ಸೊಸೈಟಿಯ ಅಧ್ಯಕ್ಷೆ ಬಿ.ಎಸ್. ನಾಗವಲ್ಲಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ.ಆರ್. ರಾಜೇಶ್ ದಂಪತಿಗೆ ಸೇರಿದ ₹17 ಕೋಟಿ ಮೊತ್ತದ ಸ್ವತ್ತುಗಳನ್ನು ಜಾರಿ ನಿರ್ದೇಶನಾಲಯವು (ಇ.ಡಿ) ಮುಟ್ಟುಗೋಲು ಹಾಕಿಕೊಂಡಿದೆ.
ನಾಗವಲ್ಲಿ ಮತ್ತು ರಾಜೇಶ್ ಅವರು ಹಲವು ಕಂಪನಿಗಳನ್ನು ಹೊಂದಿದ್ದು, ಯಾವುದೇ ಭದ್ರತೆ ಪಡೆಯದೆ ಸೊಸೈಟಿಯಿಂದ ಆ ಕಂಪನಿಗಳಿಗೆ ಸಾಲ ಮಂಜೂರು ಮಾಡಿದ್ದರು. ಸಾಲ ಮರುಪಾವತಿ ಮಾಡಿರಲಿಲ್ಲ. ಭದ್ರತೆ ಇಲ್ಲದ ಕಾರಣ, ಅಸಲು ಮತ್ತು ಬಡ್ಡಿ ಸೇರಿ ಸೊಸೈಟಿಗೆ ₹65 ಕೋಟಿ ನಷ್ಟವಾಗಿತ್ತು.
ಈ ಬಗ್ಗೆ ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರ ನಿಗಮದ ವ್ಯವಸ್ಥಾಪಕ ನಿರ್ದೇಶಕರು ನೀಡಿದ್ದ ದೂರಿನ ಆಧಾರದಲ್ಲಿ ಸುಬ್ರಹ್ಮಣ್ಯಪುರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಅದರ ಆಧಾರದಲ್ಲಿ ಇ.ಡಿ ತನಿಖೆ ಆರಂಭಿಸಿತ್ತು.
ನಾಗವಲ್ಲಿ ಮತ್ತು ರಾಜೇಶ್ ಅವರು ಉದ್ದೇಶಪೂರ್ವಕವಾಗಿ ಭದ್ರತೆ ಒದಗಿಸದೆ ತಮ್ಮದೇ ಕಂಪನಿಗಳಿಗೆ ಸಾಲ ಮಂಜೂರು ಮಾಡಿದ್ದರು ಎಂಬುದು ತನಿಖೆ ವೇಳೆ ಗೊತ್ತಾಯಿತು. ಈ ಅಕ್ರಮ ಗಳಿಕೆಯಿಂದ ಅವರು ಖರೀದಿಸಿದ್ದ 11 ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದೇವೆ. ಬೆಂಗಳೂರು, ರಾಮನಗರ ಮತ್ತು ಮೈಸೂರಿನಲ್ಲಿನ ನಿವೇಶನ, ಕಟ್ಟಡ ಮತ್ತು ಕೃಷಿ ಜಮೀನು ಇದರಲ್ಲಿ ಸೇರಿವೆ ಎಂದು ಇ.ಡಿ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.