ADVERTISEMENT

ಸಿ.ಡಿ. ಪ್ರಕರಣ: ಹನಿಟ್ರ್ಯಾಪ್ ಆಯಾಮದಲ್ಲಿ ಶೋಧ, ಬೆಳಗಾವಿಗೆ ಎಸ್‌ಐಟಿ ತಂಡ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 19:30 IST
Last Updated 6 ಏಪ್ರಿಲ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಕೊರೊನಾ ಸೋಂಕಿನ ಕಾರಣ ನೀಡಿ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ವಿಚಾರಣೆಗೆ ಗೈರಾದ ಬೆನ್ನಲ್ಲೇ, ಹನಿಟ್ರ್ಯಾಪ್ ಆಯಾಮದಲ್ಲಿ ಎಸ್‌ಐಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

‘ಯುವತಿಯನ್ನು ಮುಂದಿಟ್ಟು ವಿಡಿಯೊ ಚಿತ್ರೀಕರಣ ಮಾಡಿ ರಮೇಶ ಜಾರಕಿಹೊಳಿ ಅವರನ್ನು ಹನಿಟ್ರ್ಯಾಪ್‌ಗೆ ಬೀಳಿಸಿ ಬ್ಲ್ಯಾಕ್‌ಮೇಲ್ ಮಾಡಲಾಗಿದೆ’ ಎಂಬ ದೂರಿನಡಿ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ. ಹನಿಟ್ರ್ಯಾಪ್ ಮಾಡಿದ್ದಾರೆ ಎನ್ನಲಾದ ಕೆಲವರು ಸದ್ಯ ತಲೆಮರೆಸಿಕೊಂಡಿದ್ದಾರೆ. ಅವರಿಗಾಗಿ ಎಸ್‌ಐಟಿಯ ಐದು ವಿಶೇಷ ತಂಡಗಳು, ಹೊರ ರಾಜ್ಯದಲ್ಲಿ ಶೋಧ ನಡೆಸುತ್ತಿವೆ.

ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಎಸಿಪಿ ಎಂ.ಸಿ. ಕವಿತಾ, ಯುವತಿಯಿಂದ ಸ್ವ–ಇಚ್ಛಾ ಹೇಳಿಕೆ ಪಡೆದಿದ್ದಾರೆ. ವೈದ್ಯಕೀಯ ಸೇರಿದಂತೆ ಹಲವು ಪರೀಕ್ಷೆಗೆ ಒಳಪಡಿಸಿದ್ದಾರೆ. ಘಟನೆ ಬಗ್ಗೆ ವಿಸ್ತ್ರತ ಹೇಳಿಕೆ ಪಡೆದು, ಆರೋಪಿ ರಮೇಶ ವಿಚಾರಣೆಗಾಗಿ ಕಾಯುತ್ತಿದ್ದಾರೆ.

ADVERTISEMENT

ಬ್ಲ್ಯಾಕ್‌ಮೇಲ್‌ ಪ್ರಕರಣದ ತನಿಖೆ ಕೈಗೊಂಡಿರುವ ಎಸಿಪಿ ಧರ್ಮೇಂದ್ರ, ವಿಡಿಯೊ ಚಿತ್ರೀಕರಣ ಮಾಡಿದ್ದ ಹಾಗೂ ಅದನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿದ್ದ ವ್ಯಕ್ತಿಗಳ ಪತ್ತೆ ಯತ್ನದಲ್ಲಿದ್ದಾರೆ. ಹನಿಟ್ರ್ಯಾಪ್‌ ನಡೆದಿರುವುದು ಮೇಲ್ನೋ
ಟದ ತನಿಖೆಯಿಂದ ಗೊತ್ತಾಗಿದೆ.

‘ಎಂಜಿನಿಯರಿಂಗ್ ಪದವೀಧರೆಯಾದ ಯುವತಿಗೆ 2019ರ ಡಿಸೆಂಬರ್‌ನಿಂದಲೇ ರಮೇಶನ ಪರಿಚಯವಿತ್ತು. ಯುವತಿ ತನ್ನ ಸ್ನೇಹಿತರ ಮೂಲಕ ರಾಜ್ಯಮಟ್ಟದ ಸುದ್ದಿವಾಹಿನಿಗಳಲ್ಲಿ ಕೆಲಸ ಮಾಡುತ್ತಿದ್ದ ವರದಿಗಾರರನ್ನು ಪರಿಚಯಿಸಿಕೊಂಡಿದ್ದರು. ಅದಾದ ನಂತರ, ಎಲ್ಲರೂ ಸಂಚು ರೂಪಿಸಿ ರಮೇಶ ಅವರನ್ನು ಹನಿಟ್ರ್ಯಾಪ್‌ಗೆ ಬೀಳಿಸಿದ್ದರು ಎಂಬ ಮಾಹಿತಿ ನಮಗೆ ಸಿಕ್ಕಿದೆ’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

‘ಹನಿಟ್ರ್ಯಾಪ್‌ ಬಗ್ಗೆ ಪ್ರಶ್ನಿಸಿದಾಗ, ಯುವತಿ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಸುದ್ದಿವಾಹಿನಿಯ ಕೆಲಸ ಬಿಟ್ಟಿರುವ ವರದಿಗಾರಿಬ್ಬರು ಸದ್ಯಕ್ಕೆ ತಲೆಮರೆಸಿಕೊಂಡಿದ್ದಾರೆ. ದೆಹಲಿ, ಆಂಧ್ರಪ್ರದೇಶ, ಕೇರಳ, ತಮಿಳುನಾಡು, ಗೋವಾ... ಹೀಗೆ ನಾನಾ ರಾಜ್ಯಗಳಲ್ಲಿ ಸುತ್ತಾಡುತ್ತಿದ್ದಾರೆ. ಅವರಿಬ್ಬರು ಸಿಕ್ಕರೆ ಮಾತ್ರ ಪ್ರಕರಣಕ್ಕೆ ಸಂಬಂಧಿಸಿ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ. ಜೊತೆಗೆ, ಅವರ ಹೇಳಿಕೆ ಆಧರಿಸಿ ಯುವತಿಯನ್ನೂ ಮತ್ತೊಮ್ಮೆ ವಿಚಾರಣೆಗೆ ಒಳಪಡಿಸಲು ಅನುಕೂಲವಾಗಲಿದೆ’ ಎಂದೂ ತಿಳಿಸಿವೆ.

ಬೆಳಗಾವಿಗೆ ಹೋಗಿ ಬಂದ ಎಸ್‌ಐಟಿ: ಅತ್ಯಾಚಾರ ಪ್ರಕರಣದ ವಿಚಾರಣೆಗೆ ಗೈರಾಗಿದ್ದ ರಮೇಶ ಆರೋಗ್ಯದ ಬಗ್ಗೆ ಮಾಹಿತಿ ಪಡೆಯಲು ಎಸ್ಐಟಿ ತಂಡ ಮಂಗಳವಾರ ಗೋಕಾಕ್ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿಯ ವೈದ್ಯಾಧಿಕಾರಿಯಿಂದಲೂ ಮಾಹಿತಿ ಪಡೆದಿದೆ.

‘ರಮೇಶಗೆ ಕೊರೊನಾ ಸೋಂಕು ತಗುಲಿರುವುದಾಗಿ ಹಾಗೂ ಚಿಕಿತ್ಸೆಗೆ ಇನ್ನಷ್ಟು ದಿನ ಬೇಕಾಗಬಹುದೆಂದು ವೈದ್ಯರು ಹೇಳಿದ್ದಾರೆ’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

ಕಮಿಷನರ್ ವಿರುದ್ಧ ಖಾಸಗಿ ಮೊಕದ್ದಮೆ
ಸಿ.ಡಿ. ಪ್ರಕರಣ ಸಂಬಂಧ ರಮೇಶ ಜಾರಕಿಹೊಳಿ ವಿರುದ್ಧ ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ನೀಡಿದ್ದ ದೂರು ಆಧರಿಸಿ ಎಫ್‌ಐಆರ್ ದಾಖಲಿಸದ ಆರೋಪದಡಿ ಪೊಲೀಸ್ ಕಮಿಷನರ್ ಕಮಲ್ ಪಂತ್ ಸೇರಿ ಮೂವರು ಅಧಿಕಾರಿಗಳ ವಿರುದ್ಧ 8ನೇ ಎಸಿಎಂಎಂ ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ಹೂಡಲಾಗಿದೆ.

ಮೊಕದ್ದಮೆ ಅಂಗೀಕರಿಸಿರುವ ನ್ಯಾಯಾಲಯ, ಅದರ ಮುಂದಿನ ವಿಚಾರಣೆಯನ್ನು ಏಪ್ರಿಲ್ 16ಕ್ಕೆ ಮುಂದೂಡಿದೆ. ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಜನಾಧಿಕಾರ ಸಂಘರ್ಷ ಪರಿಷತ್, ‘ಯುವತಿ ಮೇಲಾದ ಲೈಂಗಿಕ ದೌರ್ಜನ್ಯ ಹಾಗೂ ಜೀವ ಬೆದರಿಕೆ ಬಗ್ಗೆ ದಿನೇಶ್ ಕಲ್ಲಹಳ್ಳಿ ಮಾರ್ಚ್ 2ರಂದು ದೂರು ನೀಡಿದ್ದರು. ಕಮಿಷನರ್ ಕಮಲ್ ಪಂತ್, ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್. ಅನುಚೇತ್ ಹಾಗೂ ಕಬ್ಬನ್‌ ಪಾರ್ಕ್ ಠಾಣೆ ಇನ್‌ಸ್ಪೆಕ್ಟರ್ ಬಿ. ಮಾರುತಿ ಎಫ್‌ಐಆರ್ ದಾಖಲಿಸಿಕೊಂಡಿರಲಿಲ್ಲ. ಬದಲಿಗೆ ದೂರುದಾರರನ್ನೇ ವಿಚಾರಣೆಗೆ ಒಳಪಡಿಸಿದ್ದರು’ ಎಂದು ದೂರಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.