ADVERTISEMENT

ನೀರಾವರಿ, ಬಿಡಿಎ ಬಾಕಿ ಪ್ರಕರಣಗಳ ತನಿಖೆಗೆ ಎಸ್‌ಐಟಿ: ಡಿ.ಕೆ.ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 16:20 IST
Last Updated 22 ನವೆಂಬರ್ 2025, 16:20 IST
   

ಬೆಂಗಳೂರು: ವಿವಿಧ ನೀರಾವರಿ ನಿಗಮಗಳಲ್ಲಿ 61,843 ಪ್ರಕರಣಗಳು ಕೋರ್ಟ್‌ನಲ್ಲಿ ಇತ್ಯರ್ಥವಾಗದೇ ಬಾಕಿ ಉಳಿದಿದ್ದು, ಅದಕ್ಕೆ ಕಾರಣವಾದ ಅಂಶಗಳು, ಅಧಿಕಾರಿಗಳು ಹಾಗೂ ವಕೀಲರ ಕರ್ತವ್ಯ ಲೋಪ ಪತ್ತೆ ಮಾಡಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ವಿಧಾನಸೌಧದಲ್ಲಿ ಶನಿವಾರ ನಡೆದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಾಗೂ ಜಲ ಸಂಪನ್ಮೂಲ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. 

‘ವಿವಿಧ ನಿರಾವರಿ ನಿಗಮ ಹಾಗೂ ಬಿಡಿಎ ಭೂಸ್ವಾಧೀನ ಪ್ರಕರಣಗಳನ್ನು ಹಿಂದಿನಿಂದಲೂ ಸರಿಯಾಗಿ ನಿರ್ವಹಣೆ ಮಾಡಿಲ್ಲ. ಇದರಿಂದ ಕೋರ್ಟ್‌ನಲ್ಲಿರುವ ಬಾಕಿ ಪ್ರಕರಣಗಳು ಹೆಚ್ಚುತ್ತಲೇ ಹೋಗಿವೆ. ಈ ಕುರಿತು ಸಮಗ್ರ ತನಿಖೆಗಾಗಿ ನ್ಯಾಯಮೂರ್ತಿಯವರ ನೇತೃತ್ವದಲ್ಲಿ ಕಾನೂನು ತಜ್ಞರು, ಪರಿಣತ ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿ ರಚಿಸಲಾಗುತ್ತಿದೆ’ ಎಂದು ಹೇಳಿದರು. 

ADVERTISEMENT

ಬಾಕಿ ಪ್ರಕರಣಗಳ ಹೆಚ್ಚಳದಿಂದ ಸರ್ಕಾರದ ಮೇಲೆ ಆರ್ಥಿಕ ಹೊರೆ ಹೆಚ್ಚುತ್ತಾ ಹೋಗಿದೆ. ಭೂಸ್ವಾಧೀನ ಅಧಿಕಾರಿಗಳು, ನಿಗಮ, ಪ್ರಾಧಿಕಾರದ ಅಧಿಕಾರಿಗಳು ಲೋಪ ಎಸಗಿದ್ದಾರೆ. ಪ್ರಕರಣಗಳನ್ನು ನಿಭಾಯಿಸಲು ನೇಮಕ ಮಾಡಿದ ವಕೀಲರೂ ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿಲ್ಲ. ಸಮಯಕ್ಕೆ ಸರಿಯಾಗಿ ಕೋರ್ಟ್‌ಗಳಿಗೆ ಆಕ್ಷೇಪಣೆ ಸಲ್ಲಿಸಿಲ್ಲ. ವಿಚಾರಣೆಗೆ ಹಾಜರಾಗಿಲ್ಲ. ಅಧಿಕಾರಿಗಳು, ವಕೀಲರು ತಂಡ ಮಾಡಿಕೊಂಡು ವಂಚಿಸಿದ್ದಾರೆ. ಅವಕಾಶವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಎಲ್ಲ ಲೋಪಗಳ ಕುರಿತು ಎಸ್‌ಐಟಿ ತನಿಖೆ ನಡೆಸಲಿದೆ. ವರದಿಯ ನಂತರ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು. ಒಟ್ಟು 219 ವಕೀಲರು ವಿವಿಧ ಪ್ರಕರಣಗಳನ್ನು ನೋಡಿಕೊಳ್ಳುತ್ತಿದ್ದಾರೆ. ಈ ಪೈಕಿ, ಲೋಪ ಎಸಗಿದ ವಕೀಲರನ್ನು ವಜಾ ಮಾಡಲಾಗುವುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.