ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರು 6 ಜನ ನಕ್ಸಲರು ಶರಣಾಗತಿ

​ಪ್ರಜಾವಾಣಿ ವಾರ್ತೆ
Published 8 ಜನವರಿ 2025, 23:18 IST
Last Updated 8 ಜನವರಿ 2025, 23:18 IST
ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಆರು ನಕ್ಸಲರು ಬುಧವಾರ ಶರಣಾದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಆರು ನಕ್ಸಲರು ಬುಧವಾರ ಶರಣಾದರು.   

ಬೆಂಗಳೂರು: ಭೂಗತರಾಗಿದ್ದ ಆರು ನಕ್ಸಲರು ಶಸ್ತ್ರಾಸ್ತ್ರ ತೊರೆದು ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ ಎದುರು ಬೆಂಗಳೂರಿನಲ್ಲಿ ಬುಧವಾರ ಶರಣಾದರು.

ಬಿಗಿ ಭದ್ರತೆಯ ನಡುವೆ ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರೆಪ್ಪ ಅರೋಲಿ, ಕೆ. ವಸಂತ, ಟಿ.ಎನ್. ಜಿಷಾ ಅವರನ್ನು ಚಿಕ್ಕಮಗಳೂರಿನಿಂದ ಜೀರೊ ಟ್ರಾಫಿಕ್‌ನಲ್ಲಿ ಬೆಂಗಳೂರಿಗೆ ಕರೆ ತರಲಾಯಿತು. ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಸಂಜೆ ಶರಣಾಗತಿ ಪ್ರಕ್ರಿಯೆಗಳು ನಡೆದವು. 

ನಕ್ಸಲ್‌ ಚಳವಳಿ ತೊರೆದ ಎಲ್ಲರಿಗೂ ಸಂವಿಧಾನದ ಪ್ರತಿ ನೀಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಶಸ್ತ್ರ ಹೋರಾಟ ತೊರೆದ ಎಲ್ಲ ನಕ್ಸಲರ ಮೇಲಿನ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗುವುದು. ಪ್ರಕರಣಗಳ ತ್ವರಿತ ಇತ್ಯರ್ಥದ ನಂತರ ಅವರು ಸಮಾಜದ ಮುಖ್ಯವಾಹಿನಿ ಸೇರಲಿದ್ದಾರೆ ಎಂದು ಹೇಳಿದರು.

ADVERTISEMENT

ನಕ್ಸಲರ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಲಾಗುವುದು. ಈ ಕುರಿತು ತಮಿಳುನಾಡು ಹಾಗೂ ಕೇರಳ ಮುಖ್ಯಮಂತ್ರಿಗಳ ಜತೆಗೂ ಚರ್ಚಿಸಲಾಗುವುದು. ವಿಕ್ರಂಗೌಡ ಎನ್‌ಕೌಂಟರ್‌ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು. 

ಕಾಡಿನಿಂದ ಬಂದ ಅವರನ್ನು ಜೈಲಿಗೆ ಕಳುಹಿಸಲಾಗುತ್ತದೆ. ಪ್ರಕರಣ ವಿಚಾರಣೆ ಪೂರ್ಣಗೊಂಡ ನಂತರ ಮತ್ತೆ ನಾಡಿಗೆ ಬರಲಿದ್ದಾರೆ. ನಂತರ ಸಂವಿಧಾನದ ಚೌಕಟ್ಟಿನಲ್ಲಿ ಬದುಕು ನಡೆಸಲಿದ್ದಾರೆ ಎಂದರು.

ನಾವೆಲ್ಲ ಮುಖ್ಯವಾಹಿನಿಗೆ ಬರಲು ಸರ್ಕಾರ ಒಪ್ಪಿಗೆ ನೀಡಿತ್ತು. ಹೋರಾಟ ಕೈಬಿಟ್ಟು ಶರಣಾಗಿದ್ದೇವೆ. ನಮ್ಮ ಬೇಡಿಕೆಗಳನ್ನು ಕಾಲಮಿತಿಯ ಒಳಗೆ ಬೇಡಿಕೆ ಈಡೇರಿಸುವ ಭರವಸೆ ಸಿಕ್ಕಿದೆ
ಮುಂಡಗಾರು ಲತಾ ಶರಣಾಗತರಾದ ನಕ್ಸಲ್‌
ನಕ್ಸಲರ ಎಲ್ಲ ಪ್ರಕರಣಗಳನ್ನೂ ತ್ವರಿತವಾಗಿ ಇತ್ಯರ್ಥ ಮಾಡಬೇಕು. ಈಗ ಶರಣಾದವರೂ ಸೇರಿದಂತೆ ಹಿಂದೆ ಶರಣಾದ ನಕ್ಸಲರಿಗೂ ಘೋಷಿತ ನೆರವು ಕಲ್ಪಿಸಬೇಕು 
ಬಂಜಗೆರೆ ಜಯಪ್ರಕಾಶ್‌ ಸದಸ್ಯ ನಕ್ಸಲ್‌ ಶರಣಾಗತಿ ಸಮಿತಿ
ನಕ್ಸಲ್‌ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಎಲ್ಲರೂ ಶರಣಾಗಿದ್ದಾರೆ. ಕೋಟೆಹೊಂಡ ರವಿ ಅಲಿಯಾಸ್‌ ರವೀಂದ್ರ ಅವರು ಇನ್ನೊಂದು ವಾರದಲ್ಲಿ ಶರಣಾಗಲಿದ್ದಾರೆ
ಕೆ.ಪಿ. ಶ್ರೀಪಾಲ್‌ ಸದಸ್ಯ ನಕ್ಸಲ್‌ ಶರಣಾಗತಿ ಸಮಿತಿ

ನಕ್ಸಲ್‌ ನಿಗ್ರಹ ಪಡೆ ವಿಸರ್ಜನೆ?

ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಸಕ್ರಿಯರಾಗಿದ್ದ ಬಹುತೇಕ ಎಲ್ಲ ನಕ್ಸಲರೂ ಶರಣಾಗತ ರಾಗಿದ್ದು, ನಕ್ಸಲ್‌ ಹೋರಾಟ ನಿಯಂತ್ರಿಸಲು ಸ್ಥಾಪಿಸಲಾಗಿದ್ದ ನಕ್ಸಲ್‌ ನಿಗ್ರಹ ಪಡೆಯನ್ನು (ಎಎನ್‌ಎಫ್‌) ವಿಸರ್ಜಿಸುವ ಕುರಿತು ಸಂಪುಟದಲ್ಲಿ ಚರ್ಚಿಸಿದ ನಂತರ ನಿರ್ಧಾರ ಪ್ರಕಟಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

‘ಕಾಡಿನಲ್ಲಿದ್ದುಕೊಂಡು ಶಸ್ತ್ರಾಸ್ತ್ರ ಮೂಲಕ ಹೋರಾಟ ನಡೆಸುತ್ತಿದ್ದ ನಕ್ಸಲರ ಮನವೊಲಿಸಿ ಅವರನ್ನು ನಾಡಿಗೆ ಕರೆದು ತರುವ ಪ್ರಯತ್ನವನ್ನು ನಾನು ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯಲ್ಲಿಯೇ  ಪ್ರಾರಂಭಿಸಲಾಗಿತ್ತು. ಕಳೆದ ಅವಧಿಯಲ್ಲಿ ಹನ್ನೆರಡು ನಕ್ಸಲರು ಶರಣಾಗಿ ಬಂದು ಮುಖ್ಯವಾಹಿನಿ ಸೇರಿಕೊಂಡಿದ್ದರು. ಇದೀಗ ಆರು ಮಂದಿ ನಕ್ಸಲರು ಬಂದಿದ್ದಾರೆ. ಆ ಮೂಲಕ ಕರ್ನಾಟಕ ನಕ್ಸಲ್‌ಮುಕ್ತ ರಾಜ್ಯವಾಗುವತ್ತ ಹೆಜ್ಜೆ ಇಟ್ಟಿದೆ’ ಎಂದರು.

ಶರಣಾಗತಿಯ ನಂತರ ಬಂಧನ
ಶರಣಾಗತರಾದ ಆರೂ ನಕ್ಸಲರನ್ನು ಮುಖ್ಯಮಂತ್ರಿ ಗೃಹ ಕಚೇರಿಯಿಂದ ಹೊರಬರುತ್ತಿದ್ದಂತೆ ಚಿಕ್ಕಮಗಳೂರು ಪೊಲೀಸರು ವಶಕ್ಕೆ ಪಡೆದರು. ಬಿಗಿ ಬಂದೋಬಸ್ತ್‌ನಲ್ಲಿ ಅವರನ್ನು ಮತ್ತೆ ಚಿಕ್ಕಮಗಳೂರಿಗೆ ಕರೆದುಕೊಂಡು ಹೋದರು. ಗುರುವಾರ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತದೆ. ನಂತರ ಕಾನೂನು ಪ್ರಕ್ರಿಯೆಗಳು ಆರಂಭವಾಗಲಿವೆ ಎಂದು ಪೊಲೀಸರು ಮಾಹಿತಿ ನೀಡಿದರು.

ಅಮಿತ್‌ ಶಾ ಆನಂದಬಾಷ್ಪ ಗೊತ್ತಿಲ್ಲವೇ?

ರಾಜ್ಯದಲ್ಲಿ ಆರು ಮಂದಿ ನಕ್ಸಲೀಯರು ಶರಣಾಗುತ್ತಿರುವಾಗ ಬೆಚ್ಚಿಬಿದ್ದಿರುವ ಬಿಜೆಪಿ ಕಳೆದ ತಿಂಗಳು ಛತ್ತೀಸಗಢದಲ್ಲಿ ಶರಣಾದ 30 ನಕ್ಸಲರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಖುದ್ದಾಗಿ ಬರಮಾಡಿಕೊಂಡು ಆನಂದಬಾಷ್ಪ ಸುರಿಸಿದಾಗ ಯಾಕೆ ಬೆಚ್ಚಿ ಬೀಳಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಅಮಿತ್ ಶಾ ಅವರಿಗೆ ಈ ವಿಷಯ ಕೇಳುವ ದಮ್ಮು ಬಿಜೆಪಿ ಶಾಸಕ ಸುನೀಲ್‌ ಕುಮಾರ್ ಅವರಿಗೆ ಇದೆಯೇ? ಕಳೆದ ವರ್ಷ ಮಹಾರಾಷ್ಟ್ರದಲ್ಲಿ ಶರಣಾದ ನಕ್ಸಲ್‌ ದಂಪತಿಗೆ ಅಲ್ಲಿನ ಬಿಜೆಪಿ ಸರ್ಕಾರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರು ₹41 ಲಕ್ಷ ರೂಪಾಯಿ ನೆರವು ನೀಡಿರುವುದು ರಾಜ್ಯ ಬಿಜೆಪಿ ನಾಯಕರಿಗೆ ಗೊತ್ತಿರಲಿಲ್ಲವೇ ಎಂದಿದ್ದಾರೆ.

‘ಶರಣಾಗಿರುವ ನಕ್ಸಲರು ಅನುಸರಿಸಿದ ಹಿಂಸಾ ಮಾರ್ಗದ ಬಗ್ಗೆ ವಿರೋಧವಿದೆ. ಆದರೆ ಅವರಲ್ಲಿ ಯಾರೂ ಜನರ ತೆರಿಗೆ ಹಣವನ್ನು ನುಂಗಿದ ಭ್ರಷ್ಟರಲ್ಲ ರಾಮ-ಪರಶುರಾಮನ ಮೂರ್ತಿ ನಿರ್ಮಾಣದಲ್ಲಿಯೂ ಮೋಸ ಮಾಡಿ ಜೇಬು ತುಂಬಿಕೊಂಡವರೂ ಅಲ್ಲ. ಲಾಠಿ- ದೊಣ್ಣೆ ಕತ್ತಿ-ತ್ರಿಶೂಲಗಳನ್ನು ನೀಡಿ ಅಮಾಯಕರನ್ನು ಹಿಂಸಾಮಾರ್ಗಕ್ಕೆ ಇಳಿಸಿ ರಾಜಕೀಯ ಲಾಭ ಗಳಿಸುವ ಕುತಂತ್ರದ ರಾಜಕಾರಣವೂ ನಮ್ಮದಲ್ಲ’ ಎಂದು ಟೀಕಿಸಿದ್ದಾರೆ.

ಮುಖ್ಯವಾಹಿನಿ‌ ಸೇರಿದವರಿಗೆ ಪ್ಯಾಕೇಜ್‌-₹3 ಲಕ್ಷ ಪ್ರೋತ್ಸಾಹಧನ

ಚಿಕ್ಕಮಗಳೂರು/ಬೆಂಗಳೂರು: ಮುಖ್ಯವಾಹಿನಿಗೆ ಬಂದ ನಕ್ಸಲರಿಗೆ ತಲಾ ₹3 ಲಕ್ಷ ಪ್ರೋತ್ಸಾಹಧನ (ಮೊದಲ ಕಂತು) ಮಂಜೂರು ಮಾಡಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.

ಎಡಪಂಥೀಯ ತೀವ್ರಗಾಮಿಗಳ ಶರಣಾಗತಿ ಸಮಿತಿ ಮತ್ತು ಪುನರ್ವಸತಿ ಜಿಲ್ಲಾ ಸಮಿತಿ ಸಭೆ ನಡೆಸಲಾಗಿದೆ. ಶರಣಾದವರಿಗೆ ಮೊದಲ ಹಂತದಲ್ಲಿ ₹3 ಲಕ್ಷ ಮಂಜೂರು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರೆಪ್ಪ ಆರೋಲಿ ಅವರು ‘ಎ’ ವರ್ಗದಲ್ಲಿದ್ದು, ಅವರಿಗೆ ಒಟ್ಟು ತಲಾ ₹7.50 ಲಕ್ಷ, ಹೊರ ರಾಜ್ಯದವರಾದ ಕೆ.ವಸಂತ ಮತ್ತು ಜಿಷಾ ಅವರಿಗೆ ತಲಾ ₹4 ಲಕ್ಷ ‍ಪ್ರೋತ್ಸಾಹಧನ ಸಿಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.