ಸಾಹಿತಿ ಎಸ್.ಎಲ್. ಭೈರಪ್ಪ (94) ಅವರ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ಪದ್ಮಭೂಷಣ ಎಸ್.ಎಲ್ ಭೈರಪ್ಪನವರು ಅವರ ನಿಧನದಿಂದ ಸಾರಸ್ವತ ಲೋಕ ಬಹಳ ಬಡವಾಗಿದೆ. ಭೈರಪ್ಪನವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲು ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪದ್ಮಭೂಷಣ ಹಿರಿಯ ಸಾಹಿತಿ ದಿವಂಗತ ಎಸ್.ಎಲ್.ಭೈರಪ್ಪನವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಎಸ್.ಎಲ್ ಭೈರಪ್ಪನವರು ಅವರ ನಿಧನದಿಂದ ಸಾರಸ್ವತ ಲೋಕ ಬಹಳ ಬಡವಾಗಿದೆ. ಅವರು ಸುಮಾರು 25 ಕಾದಂಬರಿಗಳನ್ನು ಬರೆದಿದ್ದು, ಮೈಸೂರಿನಲ್ಲಿಯೇ ವಿದ್ಯಾಭ್ಯಾಸ ನಡೆಸಿದ ಭೈರಪ್ಪನವರಿಗೆ ಮೈಸೂರು ಕರ್ಮಸ್ಥಳ. ಅವರ ಕಾದಂಬರಿಗಳು 40 ಭಾಷೆಗಳಿಗೆ ತರ್ಜುಮೆಯಾಗಿದ್ದು, ಇಷ್ಟು ಸಂಖ್ಯೆಯಲ್ಲಿ ಸಾಹಿತಿಯೊಬ್ಬರ ಕೃತಿಗಳು ತರ್ಜುಮೆಯಾಗಿರುವುದು ಅಪರೂಪ. ವಿವಿಧ ಭಾಷೆಗಳ ಓದುಗರನ್ನು ಸಂಪಾದಿಸಿದ್ದರು. ಸಣ್ಣ ಗ್ರಾಮವೊಂದರಲ್ಲಿ ಜನಿಸಿದ ಭೈರಪ್ಪನವರು , ಫಿಲಾಸಫಿಯನ್ನು ಓದಿದ್ದರೂ, ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡವರು ಎಂದರು.
ಬೋಧನಾ ವೃತ್ತಿಯಲ್ಲಿದ್ದುಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನೂ ತೊಡಗಿಸಿಕೊಂಡಿದ್ದರು. ಕಾದಂಬರಿಗಳನ್ನು ಆತ್ಮತೃಪ್ತಿಗಾಗಿ ಬರೆಯುತ್ತಿದ್ದ ಅವರ ಕೃತಿಗಳು ಜಗತ್ಪ್ರಸಿದ್ಧವಾಗಿದ್ದವು. ನಾನು ಅವರ ಕೆಲವೊಂದು ಕಾದಂಬರಿಗಳನ್ನು ಓದಿದ್ದೇನೆ. ಬದುಕಿನ ಅನುಭವಗಳನ್ನಾಧರಿಸಿ ಬರೆಯುವ ಸಾಹಿತಿ. ಅವರ ಆತ್ಮಕ್ಕೆ ಶಾಂತಿ ಕೋರುತ್ತಾ, ಅವರ ಕುಟುಂಬದವರು, ಸಾಹಿತ್ಯಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ಭರಿಸಲು ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.
ಭೈರಪ್ಪನವರೊಂದಿಗೆ ಮುಖ್ಯಮಂತ್ರಿಗಳ ಒಡನಾಟದ ಬಗ್ಗೆ ಪ್ರತಿಕ್ರಿಯೆ ನೀಡಿ, ಸಾಹಿತ್ಯ ಹಾಗೂ ಸ್ನೇಹ ಬೇರೆಯಾಗಿದ್ದು, ನಮ್ಮ ದೃಷ್ಟಿಕೋನಗಳು ಬೇರೆಯಾಗಿದ್ದರೂ, ಉತ್ತಮ ಬಾಂಧವ್ಯವಿತ್ತು ಎಂದರು. ಭೈರಪ್ಪನವರ ಅಂತ್ಯಕ್ರಿಯೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಭಾಗವಹಿಸಲಿದ್ದಾರೆ. ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿರುವ ಭೈರಪ್ಪನವರು ನಾಡು ಕಂಡ ಶ್ರೇಷ್ಠ ಸಾಹಿತಿಗಳಾಗಿದ್ದರು. ಯಾವುದೇ ಪ್ರಶಸ್ತಿಗೂ ಹಂಬಲಿಸದ ಭೈರಪ್ಪನವರಿಗೆ ಅವರ ಸಾಹಿತ್ಯದ ಕೊಡುಗೆಯನ್ನು ಪರಿಗಣಿಸಿ ಜ್ಞಾನಪೀಠ ಪ್ರಶಸ್ತಿಯನ್ನು ನೀಡಿದ್ದರೆ ಉತ್ತಮವಾಗಿತ್ತು ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೂ ಭೈರಪ್ಪ ಅವರಿಗೆ ಅಂತಿಮ ನಮನ ಸಲ್ಲಿಸಿದರು.
'ಭೈರಪ್ಪ ಅವರು ಕನ್ನಡದ ಅದ್ವಿತೀಯ ಸಾಹಿತಿ. ಸಾಹಿತ್ಯ, ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ್ದಾರೆ. ಭಾರತ ಮಾತ್ರವಲ್ಲದೇ ಹೊರ ದೇಶದಲ್ಲೂ ಅವರು ಜನಪ್ರಿಯರು' ಎಂದು ಯಡಿಯೂರಪ್ಪ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.