ADVERTISEMENT

‘ಸಮಸ್ಯೆಗಳಿಗೆ ಹಿಂದುತ್ವ ಕಾರಣವಲ್ಲ’

ಸಾಂಸ್ಕೃತಿಕವಾಗಿ ನಾವೆಲ್ಲರೂ ಒಂದೇ

​ಪ್ರಜಾವಾಣಿ ವಾರ್ತೆ
Published 19 ಜನವರಿ 2019, 20:00 IST
Last Updated 19 ಜನವರಿ 2019, 20:00 IST
ಲೇಖಕಿ ಶೆಫಾಲಿ ವೈದ್ಯ ಅವರು ಎಸ್‌.ಎಲ್‌.ಭೈರಪ್ಪ ಅವರ ಸಂದರ್ಶನ ನಡೆಸಿದರು
ಲೇಖಕಿ ಶೆಫಾಲಿ ವೈದ್ಯ ಅವರು ಎಸ್‌.ಎಲ್‌.ಭೈರಪ್ಪ ಅವರ ಸಂದರ್ಶನ ನಡೆಸಿದರು   

ಮೈಸೂರು: ಸಾಂಸ್ಕೃತಿಕವಾಗಿ ಇಡೀ ಭಾರತ ಒಂದು. ಹಿಮಾಲಯವನ್ನು ಅರ್ಥಮಾಡಿಕೊಳ್ಳದೆ, ಅದರ ಅನುಭವ ಪಡೆಯದೆ ಮಹಾಭಾರತ ಮತ್ತು ರಾಮಾಯಣವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಸಾಹಿತಿ ಎಸ್‌.ಎಲ್‌.ಭೈರಪ್ಪ ಅಭಿಪ್ರಾಯಪಟ್ಟರು.

ಇಲ್ಲಿ ನಡೆಯುತ್ತಿರುವ ‘ಎಸ್.ಎಲ್‌.ಭೈರಪ್ಪ ಸಾಹಿತ್ಯೋತ್ಸವ’ ಕಾರ್ಯಕ್ರಮದಲ್ಲಿ ಮರಾಠಿ ಲೇಖಕಿ ಶೆಫಾಲಿ ವೈದ್ಯ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದರು.

ಸಾಂಸ್ಕೃತಿಕ ಮತ್ತು ತಾತ್ವಿಕವಾಗಿ ಇಡೀ ದೇಶ ಒಂದೇ ಆಗಿದೆ. ಹೆಚ್ಚಿನ ಅಧ್ಯಯನ ಮತ್ತು ಪ್ರವಾಸದಿಂದ ಈ ಸತ್ಯ ತಿಳಿದುಕೊಳ್ಳಬಹುದು ಎಂದರು.

ADVERTISEMENT

‘ನಾನು ಯಾವಾಗಲೂ ಸತ್ಯದ ಪರವಾಗಿ ನಿಲ್ಲುತ್ತೇನೆ. ಕೆಲವರು ಟಿಪ್ಪು ಸುಲ್ತಾನ್‌ನನ್ನು ಸಾಹಿತ್ಯದಲ್ಲಿ ವೈಭವೀಕರಿಸುತ್ತಾರೆ. ಹಾಗೇಕೆ ಮಾಡುವಿರಿ ಎಂದು ಅವರನ್ನು ಕೇಳಿದಾಗ, ವೈಭವೀಕರಣವನ್ನು ಒಂದು ನಾಟಕದ ದೃಷ್ಟಿಯಿಂದ ಮಾತ್ರ ನೋಡಬೇಕು ಎನ್ನುತ್ತಾರೆ. ನನ್ನಿಂದ ಅಂತಹ ಕೆಲಸ ಮಾಡಲು ಸಾಧ್ಯವಿ‌ಲ್ಲ’ ಎಂದು ಸ್ಪಷ್ಟವಾಗಿ ಹೇಳಿದರು.

ಹಿಂದುತ್ವ ಕಾರಣ ಅಲ್ಲ: ‘ದೇಶದ ಎಲ್ಲ ಸಮಸ್ಯೆಗಳಿಗೆ ಹಿಂದುತ್ವವೇ ಕಾರಣ ಎಂಬುದು ಸುಳ್ಳು. ಇಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ, ಅಲ್ಲಿ ರಾಮಮಂದಿರ ನಿರ್ಮಿಸಲು ಹೋರಾಟ ನಡೆಯುತ್ತಿದೆ ಎಂದು ಕೆಲವರು ಬೊಬ್ಬೆ ಹಾಕುತ್ತಾರೆ. ರಾಮ ಮಂದಿರ ನಿರ್ಮಾಣ ವಿಷಯವನ್ನು ಸ್ಥಳೀಯ ಸಮಸ್ಯೆಗಳ ಜತೆ ತಳಕು ಹಾಕುವುದು ಏಕೆ ಎಂದು ಪ್ರಶ್ನಿಸಿದರು.

ಮಹಿಳಾ ವಿರೋಧಿ ಅಲ್ಲ: ಪ್ರಶ್ನೆಯೊಂದಕ್ಕೆ ಉತ್ತರಿಸಿ, ‘ನಾನು ಮಹಿಳಾ ವಿರೋಧಿ ಅಲ್ಲ. ನನ್ನ ಕಾದಂಬರಿಗಳಲ್ಲಿ ಬರುವ ಎಲ್ಲ ಮಹಿಳಾ ಪಾತ್ರಗಳಿಗೂ ಸೂಕ್ತ ನ್ಯಾಯ ಒದಗಿಸಿದ್ದೇನೆ’ ಎಂದು ಸಮರ್ಥಿಸಿಕೊಂಡರು.

ಇಡೀ ದೇಶ ಮತ್ತು ವಿಶ್ವದ ಹಲವು ಕಡೆ ಸುತ್ತಾಡಿದರೂ ಪ್ರವಾಸ ಕಥನ ಏಕೆ ಬರೆದಿಲ್ಲ ಎಂದು ಕೇಳಿದಾಗ, ‘ಪ್ರವಾಸ ಕಥನದಲ್ಲಿ ಕಲ್ಪನೆಗಳಿಗೆ ಅವಕಾಶವಿಲ್ಲ. ಕಲ್ಪನೆಗಳ ಲೋಕದಲ್ಲಿ ವಿಹರಿಸುವ ವ್ಯಕ್ತಿ ನಾನು. ವಿದೇಶ ಪ್ರವಾಸಗಳು ನನಗೆ ಸಾಕಷ್ಟು ಒಳನೋಟಗಳನ್ನು ನೀಡಿದವು’ ಎಂದು ಪ್ರತಿಕ್ರಿಯಿಸಿದರು.

ವಿರೋಧಿಗಳನ್ನು ಕಡೆಗಣಿಸಿದ್ದೇನೆ

ನೀವು ಹಲವರ ವಿರೋಧ ಕಟ್ಟಿಕೊಂಡಿದ್ದು, ಅವರಿಗೆ ಹೇಗೆ ತಿರುಗೇಟು ನೀಡಿದ್ದೀರಿ ಎಂಬ ಪ್ರಶ್ನೆಗೆ, ‘ಎಲ್ಲ ವಿರೋಧಿಗಳನ್ನೂ ಕಡೆಗಣಿಸಿದ್ದೇನೆ’ ಎಂದು ಉತ್ತರಿಸಿದಾಗ ಸಭಿಕರಿಂದ ಜೋರು ಚಪ್ಪಾಳೆ ಕೇಳಿಬಂತು.

ಒಬ್ಬ ಸೃಜನಾತ್ಮಕ ಬರಹಗಾರ ವಾದ–ವಿವಾದದಲ್ಲಿ ತೊಡಗಿದರೆ, ಆತನ ಸೃಜನಾತ್ಮಕತೆ ನಾಶವಾಗುತ್ತದೆ. ಆತನಿಗೇ ಹಿನ್ನಡೆಯಾಗುತ್ತದೆ ಎಂದರು.

*ನಮ್ಮ ಶಿಕ್ಷಣದ ಗುಣಮಟ್ಟ ಕುಸಿಯಲು ಸರ್ಕಾರದ ಗೊತ್ತುಗುರಿಯಿಲ್ಲದ ನೀತಿಗಳೇ ಕಾರಣ

-ಎಸ್‌.ಎಲ್‌.ಭೈರಪ್ಪ, ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.