ADVERTISEMENT

ಕೊನೆಗೊಂಡ ಕೃಷ್ಣ ಪರ್ವ: ವಿಶೇಷ ಲೇಖನ

ವಿಧಾನ ಪರಿಷತ್, ವಿಧಾನಸಭೆ, ರಾಜ್ಯಸಭೆ, ಲೋಕಸಭೆ ಹೀಗೆ ನಾಲ್ಕೂ ಮನೆಗಳನ್ನು ಪ್ರತಿನಿಧಿಸಿದ ಕರ್ನಾಟಕದ ಕೆಲವೇ ರಾಜಕಾರಣಿಗಳಲ್ಲಿ ಒಬ್ಬರು

ವೈ.ಗ.ಜಗದೀಶ್‌
Published 11 ಡಿಸೆಂಬರ್ 2024, 0:26 IST
Last Updated 11 ಡಿಸೆಂಬರ್ 2024, 0:26 IST
ಎಸ್.ಎಂ ಕೃಷ್ಣ
ಎಸ್.ಎಂ ಕೃಷ್ಣ   

ಬೆಳೆಯುವ ಮಕ್ಕಳಿಂದ ಹೊಳೆಯುವ ಬೆಂಗಳೂರಿನ ವರೆಗೆ, ಮಹಿಳೆಯರ ಭವಿಷ್ಯದಿಂದ ಉದ್ಯಮಿಗಳ ಹಿತದವರೆಗೆ, ಆಡಳಿತ ಸುಧಾರಣೆಯ ಜತೆಗೆ ಹಿಂದುಳಿದ ಪ್ರದೇಶಗಳ ಉದ್ಧಾರದವರೆಗಿನ ಸುವಿಶಾಲ ಕನಸನ್ನು ಸಾಕಾರಗೊಳಿಸಿ ‘ಕರ್ನಾಟಕ ಮಾದರಿ’ ರೂಪಿಸಿದ ದ್ರಷ್ಟಾರ ಎಸ್.ಎಂ. ಕೃಷ್ಣ ‘ಯುಗ’ದ ಪರದೆ ಸರಿದಿದೆ.

ಆಕರ್ಷಕ ವ್ಯಕ್ತಿತ್ವ, ಅದಕ್ಕೆ ತಕ್ಕಂತೆ ದಿರಿಸು, ಅಳೆದು ತೂಗಿದ ಪದಗಳಷ್ಟನ್ನೇ ಹರಿಯಬಿಡುವ ಮಾತಿನ ನಯ, ಕಡು ವಿರೋಧಿಗಳ ಬಗ್ಗೆಯೂ ಕಿಡಿಯಾಡದ ಸಂಭಾವಿತ ಮುತ್ಸದ್ದಿ ಕೃಷ್ಣ. ಹುಟ್ಟು ಶ್ರೀಮಂತಿಕೆ–ವಿದೇಶದಲ್ಲಿ ವ್ಯಾಸಂಗ ಮಾಡಿ, ಮೈಗೂಡಿಸಿಕೊಂಡಿದ್ದ ನಾಜೂಕುತನ ದಿಂದಾಗಿ ಈ ನೆಲದ ಸೊಗಡಿನ ರಾಜಕೀಯ ಶೈಲಿಗೆ ಒಗ್ಗಿಕೊಳ್ಳಲಾಗದೇ ‘ವೈಟ್‌ ಕಾಲರ್‌’ ಆಗಿಯೇ ಉಳಿದು, ಬೆಳೆದವರು.

ಪ್ರಜಾ ಸೋಷಿಯಲಿಸ್ಟ್ ಪಕ್ಷದಿಂದ ಮೊದಲ ಬಾರಿಗೆ ಗೆದ್ದು ಶಾಸನಸಭೆ ಪ್ರವೇಶಿಸಿದರು. ತರುವಾಯ, ಕಾಂಗ್ರೆಸಿಗರಾಗಿ ಇಂದಿರಾ ಗಾಂಧಿ, ದೇವರಾಜ ಅರಸು, ರಾಜೀವ್ ಗಾಂಧಿ, ಸೋನಿಯಾ ಗಾಂಧಿಯವರ ಹತ್ತಿರದ ಒಡನಾಟದ ಫಲವಾಗಿ, ಪ್ರಧಾನಿ ಮತ್ತು ರಾಷ್ಟ್ರಪತಿಯಂತಹ ಸ್ಥಾನಗಳನ್ನು ಬಿಟ್ಟು ರಾಜಕಾರಣ
ದಲ್ಲಿ ಉತ್ತುಂಗ ಎನ್ನಬಹುದಾದ ಎಲ್ಲ ಪಟ್ಟಗಳನ್ನೂ ನಿರ್ವಹಿಸಿದ ಕೀರ್ತಿಯನ್ನು ಮುಡಿಗೆ ಏರಿಸಿಕೊಂಡವರು.

ADVERTISEMENT

ವಿಧಾನ ಪರಿಷತ್, ವಿಧಾನಸಭೆ, ರಾಜ್ಯಸಭೆ, ಲೋಕಸಭೆ ಹೀಗೆ ನಾಲ್ಕೂ ಮನೆಗಳನ್ನು ಪ್ರತಿನಿಧಿಸಿದ ಕರ್ನಾಟಕದ ಕೆಲವೇ ರಾಜಕಾರಣಿಗಳಲ್ಲಿ ಒಬ್ಬರಾದ ಅವರು, ವಿಧಾನಸಭಾಧ್ಯಕ್ಷ, ಮುಖ್ಯಮಂತ್ರಿಯಾಗಿ ರಾಜ್ಯವನ್ನು ಮುನ್ನಡೆಸಿದವರು. ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಮನಮೋಹನ ಸಿಂಗ್ ಸರ್ಕಾರಗಳಲ್ಲಿ ಸಚಿವರಾಗಿಯಷ್ಟೇ ಅಲ್ಲದೆ, ಮಹಾರಾ‌ಷ್ಟ್ರದ ರಾಜ್ಯಪಾಲರಾಗಿಯೂ ಕರ್ತವ್ಯವನ್ನು ನಿರ್ವಹಿಸಿದವರು. ವಿರೋಧ ಪಕ್ಷದ ನಾಯಕರಾಗಿಲ್ಲವೆಂಬುದನ್ನು ಬಿಟ್ಟರೆ ಉಳಿದೆಲ್ಲವೂ ಅವರಿಗೆ ದಕ್ಕಿದೆ.

ಕರ್ನಾಟಕ ರಾಜಕಾರಣಕ್ಕೆ ಹೊಸತನವನ್ನು ತಂದ ದೇವರಾಜ ಅರಸು ಅವರು, ಜಾತಿಯನ್ನು ಲೆಕ್ಕಿಸದೇ ಅನೇಕ ಪ್ರತಿಭಾವಂತವನ್ನು ಎಳೆ ತಂದು, ರಾಜಕೀಯ ಪಡಸಾಲೆಗೆ ನವಚೈತನ್ಯ ತುಂಬಿದರು. ಅರಸರು ಮುಖ್ಯಮಂತ್ರಿಯಾಗುತ್ತಿದ್ದಂತೆ, ಪ್ರಧಾನಿ ಇಂದಿರಾ ಗಾಂಧಿಯವರಿಗೆ ಹೇಳಿ ಆಗ ಲೋಕಸಭಾ ಸದಸ್ಯರಾಗಿದ್ದ ಎಸ್.ಎಂ. ಕೃಷ್ಣರವರನ್ನು ನಾಡಿಗೆ ಕರೆಯಿಸಿಕೊಂಡರು. ಹೀಗೆ, ಅರಸು ಗರಡಿಯಲ್ಲಿ ಪಳಗಿದ ಕೃಷ್ಣ, ಕರ್ನಾಟಕದ ಭವಿಷ್ಯವನ್ನು ತಮ್ಮ ನೇತಾರನಂತೆಯೇ ಮಗದೊಂದು ಎತ್ತರಕ್ಕೆ ಕೊಂಡೊಯ್ದರು. ತಮಗಿಂತ ಕಿರಿಯರಾದವರೆಲ್ಲ ಮುಖ್ಯಮಂತ್ರಿಯಾದರೂ, ಸಂಯಮ–ತಾಳ್ಮೆಯಿಂದ ಕಾದರು. ಮುಖ್ಯಮಂತ್ರಿಯಾಗುವ ಅವಕಾಶವನ್ನು ಅವರೇ ಸೃಷ್ಟಿಸಿಕೊಂಡರು.

ಹುಟ್ಟಿನಿಂದ ಒಕ್ಕಲಿಗರಾಗಿದ್ದರೂ ಎಂದಿಗೂ ಜಾತಿಯ ಬಣ್ಣವನ್ನು ಮೈಗೆ ಮೆತ್ತಿಕೊಂಡವರಲ್ಲ. ಬಹುತ್ವ ಭಾರತದ ಜಾತ್ಯತೀತ ಗುಣವನ್ನೇ ಆದರ್ಶವಾಗಿ ಪಾಲಿಸಿದ್ದ ಕೃಷ್ಣ ಅವರು, ಸಿಗಬಹುದಾಗಿದ್ದ ಅಧಿಕಾರದಿಂದ ವಂಚಿತರಾದಾಗ ಜಾತಿಯ ಹತಾರವನ್ನು ಬಳಸಲಿಲ್ಲ. ಸಂವಿಧಾನ ಪ್ರತಿಪಾದಿಸುವ ಜಾತ್ಯತೀತ ಪರಂಪರೆಯನ್ನು ತಮ್ಮ ಆಡಳಿತ ಅವಧಿಯಲ್ಲಿ ಮುಂದುವರಿಸಿದ ಹೆಗ್ಗಳಿಕೆಯೂ ಅವರದ್ದು.

ಬಹುತ್ವ ಭಾರತದ ಆಶಯವನ್ನು ಮನಗಂಡು, ಸುದೀರ್ಘ ರಾಜಕೀಯ ಪಯಣದಲ್ಲಿ ಅದನ್ನೇ ಪಾಲಿಸಿದ್ದ ಕೃಷ್ಣ, ತಮ್ಮ ಇಳಿಗಾಲದಲ್ಲಿ ಕುಟುಂಬದ ಒತ್ತಡದ ಕಾರಣಕ್ಕೆ ಬಿಜೆಪಿ ಸೇರಿದರು ಎಂಬ ಮಾತುಗಳೂ ಇವೆ. ಹಾಗೆ ಮಾಡಿದರೂ ತಮ್ಮ ಅಳಿಯ ಸಿದ್ಧಾರ್ಥ ಅವರನ್ನು ಉಳಿಸಿಕೊಳ್ಳಲು ಆಗಲೇ ಇಲ್ಲ ಎಂಬ ನೋವು ಅವರನ್ನು ಕೊನೆ ಗಳಿಗೆಯವರೆಗೂ ಕಾಡಿದ್ದಿರಬಹುದು.

ಮಾತು ಆಡಲೇಬೇಕಾದಾಗ ಮೌನಕ್ಕೆ ಶರಣಾಗಿ, ಕ್ರಿಯೆಯ ಮೂಲಕವೇ ಉತ್ತರ ನೀಡುವ ಛಾತಿ; ಎಂದಿಗೂ ವಾಚಾಳಿಯಾಗದೇ, ಅತ್ಯುತ್ತಮ ಸಂಸದೀಯ ಪಟು ಹೇಗಿರಬೇಕೆಂದು ತೋರಿದವರು ಕೃಷ್ಣ. 

ರಾಜಕೀಯದ ಮೆಟ್ಟಿಲು

ಇಂದಿರಾ ಗಾಂಧಿ ಕುಟುಂಬದ ನಿಕಟ ನಂಟಿದ್ದರೂ ದಶಕಗಳ ಕಾಲ ಅವರಿಗೆ ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆಗೇರಲು ಸಾಧ್ಯವಾಗಲಿಲ್ಲ. 1989ರಲ್ಲಿ ಭಾರಿ ಬಹುಮತದಿಂದ ಕಾಂಗ್ರೆಸ್ ಗೆದ್ದರೂ, ಲಿಂಗಾಯತ ಹಾಗೂ ಹಿಂದುಳಿದ ಜಾತಿ ಸಮೀಕರಣದ ಕಾರಣಕ್ಕೆ ಸಭಾಧ್ಯಕ್ಷ ಸ್ಥಾನಕ್ಕೆ ಸೀಮಿತಾಗಬೇಕಾಯಿತು. ಆ ವಿಧಾನಸಭೆ ಅವಧಿಯ ಕೊನೆಯಲ್ಲಿ ವೀರಪ್ಪ ಮೊಯಿಲಿ ನೇತೃತ್ವದ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನವನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಯಿತು.

1994ರಲ್ಲಿ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಜನತಾದಳ ಭರ್ಜರಿ ವಿಜಯ ಸಾಧಿಸಿತು. ತಮ್ಮ ರಾಜಕೀಯ ಕಡು ವೈರಿ ಗೌಡರು ಮುಖ್ಯಮಂತ್ರಿಯಾದ ಬಳಿಕ, ಕರ್ನಾಟಕದಲ್ಲಿದ್ದು ಏನು ಮಾಡುವುದು ಎಂಬ ಚಿಂತೆ ಕೃಷ್ಣ ಅವರನ್ನು ಕಾಡಿತು. ಮತ್ತೆ ರಾಷ್ಟ್ರ ರಾಜಕಾರಣಕ್ಕೆ ಹೋಗುವ ಮನಸ್ಸು ಮಾಡಿದ ಅವರು, ರಾಜ್ಯಸಭೆಯತ್ತ ಮುಖ ಮಾಡಿದರು. ಆದರೆ, ಕಾಂಗ್ರೆಸ್‌ ಪಕ್ಷದಲ್ಲಿ ಅಷ್ಟು ಸದಸ್ಯ ಬಲ ಇರಲಿಲ್ಲ. ದೇವೇಗೌಡರಿಗೂ ಅದು ಬೇಕಿತ್ತು. ಹೀಗಾಗಿ, ಜನತಾದಳದ ಅಡ್ಡ ಮತ ಪಡೆದೇ ಅವರು ರಾಜ್ಯಸಭೆ ಪ್ರವೇಶಿಸಿದರು.

ಆ ಖುಷಿಯೂ ಬಹುಕಾಲ ಉಳಿಯಲಿಲ್ಲ. 1996ರಲ್ಲಿ ನಡೆದ ಲೋಕಸಭೆ ಚುನಾವಣೆ ಬಳಿಕ ಸೃಷ್ಟಿಯಾದ ರಾಜಕೀಯ ವಿದ್ಯಮಾನದಲ್ಲಿ ದೇವೇಗೌಡರೇ ಪ್ರಧಾನಿಯಾದರು. ತಮ್ಮ ಎದುರಾಳಿಯನ್ನೇ ಮತ್ತೆ ಮುಖಾಮುಖಿಯಾಗುವುದನ್ನು ನಿರೀಕ್ಷಿಸದ ಕೃಷ್ಣ, ಅಲ್ಲಿಯೂ ಚಡಪಡಿಸಿದರು. ‘ಸೆಂಟ್ರಲ್ ಹಾಲ್‌ನಲ್ಲಿ  ಬ್ರೆಡ್ ಟೋಸ್ಟ್ ತಿನ್ನುತ್ತಾ –ಟೀ ಕುಡಿಯುತ್ತಾ ಎಷ್ಟು ದಿನ ಹೀಗೆ ಕಾಲ ಕಳೆಯಲಿ’ ಎಂದು ತಮ್ಮ ಆಪ್ತರ ಬಳಿ ಅವರು ಹೇಳಿಕೊಂಡಿದ್ದುಂಟು. ‘ನೀವು ಬಿಟ್ಟು ಬಂದ ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್‌ಗೆ ಹುಲುಸು ಬೆಳೆ ತೆಗೆಯುವ ನೆಲ ಹದವಾಗಿದೆ. ನೀವೇ ಬೆಳೆಸಿದವರೊಬ್ಬರು ಅಣಿಯಾಗಿದ್ದಾರೆ. ಮತ್ತೆ ಏಕೆ ವಾಪಸ್ ಆಗಬಾರದು ಎಂದು ಹಿತೈಷಿಗಳು ನೀಡಿದ ಸಲಹೆಯನ್ನು ಕೃಷ್ಣ ತಳ್ಳಿ ಹಾಕಿದರು. ಕೆಲವು ತಿಂಗಳ ಬಳಿಕ, ಮತ್ತೆ ಅದಕ್ಕೆ ಅಣಿಯಾದರು. ರಾಜ್ಯಕ್ಕೆ ಮರಳಿ ‘ಪಾಂಚಜನ್ಯ ಯಾತ್ರೆ’ ಕೈಗೊಂಡ ಕೃಷ್ಣ, ಅಧಿಕಾರದ ಗದ್ದುಗೆ ಏರಿಯೇ ಬಿಟ್ಟರು. 

ಆಡಳಿತದ ಬಗೆಗಿನ ಜನರ ನಾಡಿಮಿಡಿತಗಳನ್ನು ಅರಿಯದೇ, ಮಾಧ್ಯಮಗಳನ್ನು ಬಳಸಿ ಸೃಷ್ಟಿಸಿದ್ದು ಎನ್ನಲಾದ ‘ಜನಪ್ರಿಯತೆ’ಯ ಗುಂಗಿನಲ್ಲಿ ಕೃಷ್ಣ ಇದ್ದರು. ಹೀಗಾಗಿ, ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕೆಂಬ ತವಕದಲ್ಲಿ ಅವಧಿಪೂರ್ವ ಚುನಾವಣೆಗೆ ಹೋದರು. ಅದು ಫಲ ನೀಡಲಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್–ಜೆಡಿಎಸ್ ಮೈತ್ರಿ ಸರ್ಕಾರ ಬಂದಾಗ, ಇಲ್ಲಿರಬಾರದು ಎಂಬ ಕಾರಣಕ್ಕೆ ಕೃಷ್ಣ ಅವರನ್ನು ಮಹಾರಾಷ್ಟ್ರದ ರಾಜ್ಯಪಾಲರನ್ನಾಗಿ ಮಾಡಲಾಯಿತು. ‘ಗಾಜಿನಮನೆ’ಯ ಸುಖಭೋಗ ಅವರಿಗೆ ಸಮಾಧಾನ ತರಲಿಲ್ಲ. 2007ರಲ್ಲಿ ಜೆಡಿಎಸ್‌–ಬಿಜೆಪಿ ಮೈತ್ರಿ ಸರ್ಕಾರದ ಪತನಗೊಂಡು, ರಾಜಕೀಯ ವಿಪ್ಲವ ರಾಜ್ಯದಲ್ಲಿ ತಲೆ ಎತ್ತಿತ್ತು. ಆ ಹೊತ್ತಿಗೆ ರಾಜ್ಯಪಾಲರ ಸ್ಥಾನ ತೊರೆದು, ಕರ್ನಾಟಕಕ್ಕೆ ಬರಲು ತಯಾರಿ ನಡೆಸಿದ್ದರು. ಗಡಿಭಾಗದಿಂದಲೇ ಯಾತ್ರೆ ಆರಂಭಿಸಿ, ಮತ್ತೆ ಮುಖ್ಯಮಂತ್ರಿಯಾಗಬಹುದೆಂಬ ಆಕಾಂಕ್ಷೆಯೂ ಇತ್ತು. ಅಷ್ಟರಲ್ಲಿ ರಾಜಕೀಯ ವಾತಾವರಣ ಬದಲಾಗಿತ್ತು. ಯಾತ್ರೆಗೆ ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ಸೂಚಿಸಲಿಲ್ಲ. ಅದೇ, ಅವರ ರಾಜಕೀಯ ಮಹತ್ವಾಕಾಂಕ್ಷೆಯ ಕೊನೆಯಾಯಿತು. ಆದರೆ, ರಾಜ್ಯಪಾಲ ಹುದ್ದೆ ತೊರೆದ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿಸಿಕೊಂಡ ಕಾಂಗ್ರೆಸ್ ವರಿಷ್ಠರು, ಮನಮೋಹನ ಸಿಂಗ್‌ ಸಂಪುಟದಲ್ಲಿ ವಿದೇಶಾಂಗ ಸಚಿವ ಸ್ಥಾನ ನೀಡಿದರು. ನಾನಾ ಕಾರಣಗಳಿಂದ 2012ರಲ್ಲಿ ಅವರು ಸ್ಥಾನಕ್ಕೆ ರಾಜೀನಾಮೆ ಕೊಟ್ಟರು.  

ಎದೆಮಟ್ಟ ಸವಾಲು–ಎದುರಿಸಿದ ಜಾಣ್ಮೆ

ಮುಖ್ಯಮಂತ್ರಿಯಾದ ಬಳಿಕ ಕೃಷ್ಣ ಅವರದ್ದು ಹೂವಿನ ಪಲ್ಲಂಗವಾಗಿರಲಿಲ್ಲ. ಅಡಿಗಡಿಗೂ ಸವಾಲುಗಳು ಸಮುದ್ರದ ಅಲೆಗಳಂತೆ ಬಂದು ಬಡಿಯುತ್ತಲೇ ಇದ್ದವು. 

ಪ್ರಬಲ ರಾಜಕೀಯ ಎದುರಾಳಿಗಳಾಗಿದ್ದ ದೇವೇಗೌಡರು ಸಕ್ರಿಯರಾಗಿದ್ದರೆ, ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರ ರೈತ ಸಂಘ ಬಲಾಢ್ಯವಾಗಿತ್ತು. ಈ ಎರಡೂ ‘ಶಕ್ತಿ’ಗಳು ಒಡ್ಡಿದ ಸವಾಲನ್ನು ತಮ್ಮ ರಾಜಕೀಯ ಜಾಣ್ಮೆಯಿಂದ ನಿಭಾಯಿಸಿದರು.

ಕಾವೇರಿ ನೀರಿನ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಆದೇಶ ನೀಡಿದ್ದು ಮಂಡ್ಯ ಜಿಲ್ಲೆಯನ್ನೇ ಉದ್ವಿಗ್ನತೆಗೆ ದೂಡಿತ್ತು. ಸುಪ್ರೀಂ ಕೋರ್ಟ್‌ ಆದೇಶವನ್ನೇ ಪ್ರಶ್ನಿಸಿ, ಮಂಡ್ಯದವರೆಗೆ ಪಾದಯಾತ್ರೆ ಹೊರಟ ಕೃಷ್ಣ, ಅದನ್ನು ರಾಜಕೀಯ ಅಸ್ತ್ರವಾಗಿಸಲು ಯತ್ನಿಸಿದರು. ದೇಶದಲ್ಲೇ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದವರೊಬ್ಬರು ನಾಡಿನ ಹಿತದ ವಿಷಯದಲ್ಲಿ ನ್ಯಾಯಾಂಗ ನಿಂದನೆಯ ಪ್ರಕರಣವನ್ನು ಎದುರಿಸಬೇಕಾಯಿತು.

ವರನಟ ಡಾ.ರಾಜ್‌ಕುಮಾರ್ ಅಪಹರಣ ಪ್ರಕರಣವಂತೂ ನಾಡನ್ನು ತಲ್ಲಣಕ್ಕೆ ದೂಡಿತು. ಅದನ್ನು ನಿರ್ವಹಿಸುವಲ್ಲಿ ಕೃಷ್ಣ ಹೈರಾಣಾಗಿದ್ದರು. ಆದರೂ ಅವರು ಛಲ ಬಿಡಲಿಲ್ಲ; ತಾಳ್ಮೆ ಕಳೆದುಕೊಳ್ಳಲಿಲ್ಲ. ಎಲ್ಲವನ್ನೂ ಸಮದೂಗಿಸಿದರು. 

ಗುಜರಾತ್‌ನಲ್ಲಿ ಉಂಟಾದ ಭೂಕಂಪ ಭಾರಿ ಪ್ರಮಾಣದ ಹಾನಿ ಮಾಡಿತ್ತು. ಆಗ ಸಚಿವರಾಗಿದ್ದ ಟಿ.ಜಾನ್ ನೀಡಿದ ಹೇಳಿಕೆಯೊಂದು ರಾಷ್ಟ್ರ ಮಟ್ಟದಲ್ಲಿ ಖಂಡನೆಗೆ ಗುರಿಯಾಗಿತ್ತು. ಹಿರಿಯ ಸಚಿವರ ಸಭೆ ಕರೆದ ಕೃಷ್ಣ, ಜಾನ್‌ ಅವರನ್ನು ರಾಜೀನಾಮೆಗೆ ಒಪ್ಪಿಸಿದರು. ಸಚಿವರ ಸಮ್ಮುಖದಲ್ಲಿ ಸುದ್ದಿಗೋಷ್ಠಿ ನಡೆಸಿದ ಜಾನ್ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದರು. ಕೃಷ್ಣ ಅವರು ಒಂದು ಮಾತೂ ಆಡದೇ, ವಿವಾದಕ್ಕೆ ಆಸ್ಪದವೇ ಇಲ್ಲದಂತೆ ಚಾಣಾಕ್ಷತೆಯಿಂದ ವಿವಾದಕ್ಕೆ ಇತಿಶ್ರೀ ಹಾಡಿದರು. 

ಕುದುರೆಮುಖ ಗಣಿಗಾರಿಕೆಯಿಂದ ಪಶ್ಚಿಮಘಟ್ಟಕ್ಕೆ ಹಾಗೂ ನದಿ ನೀರಿಗೆ ಸಂಚಕಾರ ಬಂದಿರುವುದನ್ನು ವಿರೋಧಿಸಿದೊಡ್ಡ ಮಟ್ಟದ ಆಂದೋಲನ ನಡೆಯಿತು. ಮಾತುಕತೆ ನಡೆಸಿದ ಕೃಷ್ಣ, ಹೋರಾಟಗಾರರ ಬೇಡಿಕೆಗೆ ನಿರ್ಣಯದ ಸ್ವರೂಪ ನೀಡಿ, ಗಣಿಗಾರಿಕೆ ನಿಲ್ಲಿಸುವಲ್ಲಿ ಯಶಸ್ವಿಯೂ ಆದರು.

ಇದೇ ಆಸುಪಾಸಿನಲ್ಲಿ ಕೋಮು ಧ್ರುವೀಕರಣದ ಉದ್ದೇಶದಿಂದಾಗಿ ಚಿಕ್ಕಮಗಳೂರಿನ ಶ್ರೀ ಗುರು ಬಾಬಾಬುಡನ್ ದತ್ತಾತ್ರೇಯ ಸ್ವಾಮಿ ದರ್ಗಾದಲ್ಲಿ ಹಿಂದೂಗಳಿಗೆ ಪೂಜೆ ನಡೆಸಲು ಅವಕಾಶ ನೀಡಬೇಕೆಂದು ಬಿಜೆಪಿ ಮತ್ತು ಸಂಘಪರಿವಾರದ ಸಂಘಟನೆಗಳು ಹೋರಾಟ ಶುರು ಮಾಡಿದ್ದವು. ಆಗ ಕಾನೂನು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಿ.ಬಿ. ಚಂದ್ರೇಗೌಡರು, ಸಪತ್ನಿಕರಾಗಿ ಪೂಜೆ ಸಲ್ಲಿಸುವ ಮೂಲಕ ಧಾರ್ಮಿಕ ವಿಧಿ ನೇರವೇರಿಸಿದರು. ಇದು, ಸಂಘಪರಿವಾರದವರಿಗೆ ಅನುಕೂಲಕಾರಿ ದಾರಿ ಮಾಡಿಕೊಟ್ಟಿತು. ಮಲೆನಾಡು–ಕರಾವಳಿ ಜಿಲ್ಲೆಗಳಲ್ಲಿ ಬಿಜೆಪಿ ಭದ್ರನೆಲೆಯೂರಲು, ಕೃಷ್ಣ ಸರ್ಕಾರವೇ ಬಾಗಿಲು ತೆರೆದಿದ್ದು ಈಗ ಇತಿಹಾಸ.

ಅನನ್ಯ ಕಳಕಳಿ

ಬಡತನದ ಕಾರಣಕ್ಕೆ ಅನೇಕರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರಲಿಲ್ಲ. ಕಳುಹಿಸಿದರೂ ಮಕ್ಕಳು ಹಸಿವಿನಿಂದಲೇ ಇರಬೇಕಾದ ದುಸ್ಥಿತಿಯೂ ಇತ್ತು. ತಮಿಳುನಾಡಿನಲ್ಲಿ ಎಂ.ಜಿ. ರಾಮಚಂದ್ರನ್‌ ಆರಂಭಿಸಿದ್ದ ಮಾದರಿಯಲ್ಲೇ ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಆರಂಭಿಸಿದ ಅವರು, ಎಷ್ಟೇ ವಿರೋಧ ಬಂದರೂ ಅದನ್ನು ನಿಲ್ಲಿಸಲಿಲ್ಲ. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಶಾಲಾ ದತ್ತು ಯೋಜನೆ ಜಾರಿಗೊಳಿಸಿದ ಅವರು, ಶಾಲೆಗಳ ಸುಧಾರಣೆಗೂ ಒತ್ತುಕೊಟ್ಟರು.

ಈಗ ಕಂಪ್ಯೂಟರ್ ಎಂಬುದು ಎಲ್ಲಿಗೂ ಕರತಲಾಮಲಕ. ಅದರ ಪರಿಚಯವೇ ಅಷ್ಟಾಗಿ ಇರದ ಕಾಲದಲ್ಲಿ ಪ್ರೌಢಶಾಲೆ ಹಂತದಲ್ಲೇ ಕಂಪ್ಯೂಟರ್ ಕಲಿಸಿ, ಹೊಸ ತಲೆಮಾರನ್ನು ಸೃಜಿಸಬೇಕೆಂಬ ಸಂಕಲ್ಪದಲ್ಲಿ ಮಾಹಿತಿ ಸಿಂಧು ಯೋಜನೆ ಆರಂಭಿಸಿ, ಯಶಸ್ವಿಗೊಳಿಸಿದರು. 

ಮಹಿಳೆಯರ ಆರ್ಥಿಕ ಬಲವರ್ಧನೆಗೆ ಸ್ತ್ರೀಶಕ್ತಿ ಸ್ವಹಾಯ ಸಂಘಗಳ ರಚನೆ, ರೈತ ಕುಟುಂಬಗಳ ಆರೋಗ್ಯಕ್ಕೆ ನೆರವಾಗುವ ಯಶಸ್ವಿನಿ ಯೋಜನೆ ಇವರದ್ದೇ ಕೊಡುಗೆ. 

ಬೆಂಗಳೂರಿನ ಅಭಿವೃದ್ಧಿ ವಿಷಯದಲ್ಲಿ ಕೃಷ್ಣರ ದೂರದರ್ಶಿತ್ವಕ್ಕೆ ಮೇರೆ ಇಲ್ಲ. ಮೊಯಿಲಿ, ದೇವೇಗೌಡರ ಕಾಲದಲ್ಲಿ ಮಾಹಿತಿ ತಂತ್ರಜ್ಞಾನ ಕ್ರಾಂತಿಯ ಬೀಜ ನೆಡಲಾಗಿತ್ತು. ಅದನ್ನು ಪೋಷಿಸಿ, ಬೃಹತ್ ಮರವಾಗಿಸಿದ ಹೆಗ್ಗಳಿಕೆ ಕೃಷ್ಣ ಅವರದ್ದು. ಹೈದರಾಬಾದ್‌ಗೆ ಇದ್ದ ಹಿರಿಮೆಯನ್ನು ಕಿತ್ತು ತಂದು, ಬೆಂಗಳೂರಿಗೆ ಪೇರಿಸಿ ಸಿಲಿಕಾನ್ ವ್ಯಾಲಿಯನ್ನು ಜಗತ್ತೇ ಬೆರಗಾಗಿ ನೋಡುವಂತೆ ಮಾಡಿದರು. ಬೆಂಗಳೂರು ಅಜೆಂಡಾ ಟಾಸ್ಕ್‌ ಫೋರ್ಸ್‌ (ಬಿಎಟಿಎಫ್‌) ರಚಿಸಿ, ನವ ನಗರ ನಿರ್ಮಾಣದ ನೀಲ ನಕಾಶೆ ರೂಪಿಸಿದರು.

ಅವರ ಕಾಳಜಿ ಅಷ್ಟಕ್ಕೇ ಸೀಮಿತವಾಗಿರಲಿಲ್ಲ. ಹಿಂದುಳಿದ ಪ್ರದೇಶಗಳನ್ನು ರಾಜ್ಯದ ಅಭಿವೃದ್ಧಿಗೆ ತಕ್ಕಂತೆ ಮುಂದಕ್ಕೆ ತರಬೇಕೆಂಬ ಕಳಕಳಿಯಿಂದ ನಂಜುಂಡಪ್ಪ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ, ವರದಿ ಪಡೆದು, ಅನುಷ್ಠಾನಕ್ಕೂ ಕಾರಣರಾದರು. ಕೃಷ್ಣಾ ಮೇಲ್ದಂಡೆ ಯೋಜನೆಗೆ ಚುರುಕು ನೀಡಿದರು. ಹೀಗೆ, ನಾಡಿನ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿದ ಕೃಷ್ಣ, ತಮ್ಮ ಅನನ್ಯ ಸಾಧನೆಗಳ ‘ಮಾರ್ಗ’ಕಾರರಾಗಿಯೇ ಜನಮಾನಸದಲ್ಲಿ ಉಳಿದಿದ್ದಾರೆ.

*** 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.