ಬೆಂಗಳೂರು: ‘ಅಂಬರೀಶ್ ಅವರನ್ನು ಮತ್ತೆ ಕಾಂಗ್ರೆಸ್ ಗೆ ಮರಳಿ ತಂದಿದ್ದು ಎಸ್.ಎಂ. ಕೃಷ್ಣ ಅವರು. ನಾನು ರಾಜಕೀಯ ಆರಂಭ ಮಾಡುವ ಮೊದಲು ಅವರ ಆಶೀರ್ವಾದ ಪಡೆದುಕೊಂಡಿದ್ದೆ’ ಮಾಜಿ ಸಂಸದೆ ಸುಮಲತಾ ಹೇಳಿದರು.
ಎಸ್.ಎಂ.ಕೃಷ್ಣ ಅವರ ಅಂತಿಮ ದರ್ಶನ ಪಡೆದು ಮಾತನಾಡಿದ ಅವರು, ‘ನಮ್ಮ ಮಂಡ್ಯದ ಮಣ್ಣಿನ ಮಗ ಕೃಷ್ಣ ಅವರು, ಡಿಗ್ನಿಫೈಡ್ ಪೊಲಿಟಿಷಿಯನ್ ಅಂತ ಅವರು ಹೆಸರು ಪಡೆದಿದ್ದರು. ಅಂತಹ ರಾಜಕಾರಣಿಗಳನ್ನು ಇಂದು ನೋಡಲು ಸಾಧ್ಯ ಇಲ್ಲವೇನೋ! ಅವರ ಜನಪ್ರಿಯ ಯೋಜನೆಗಳನ್ನು ಮರೆಯಲು ಸಾಧ್ಯ ಇಲ್ಲ’ ಎಂದರು.
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮಾತನಾಡಿ, ‘ನಾನು ಮುಖ್ಯಮಂತ್ರಿ ಆಗಿದ್ದಾಗ ಕೃಷ್ಣ ಉಪ ಮುಖ್ಯಮಂತ್ರಿ ಆಗಿದ್ದರು. ನಾವಿಬ್ಬರೂ ಸೇರಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ರಾಜ್ಯದ ನೀರಾವರಿ ಯೋಜನೆಗಳು ಜಾರಿಯಾಗಲು ಕೃಷ್ಣ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರು ಸಜ್ಜನ ರಾಜಕಾರಣಿಗಳಾಗಿದ್ದರು. ಕೇಂದ್ರದಲ್ಲಿ ನಾವು ಸಚಿವರಾಗಿ ಕೆಲಸ ಮಾಡಿದ್ದೇವೆ. ಕೃಷ್ಣ ಅವರ ಅಗಲಿಕೆ ನೋವು ತಂದಿದೆ’ ಎಂದು ಹೇಳಿದರು.
‘ಡಾಲರ್ಸ್ ಕಾಲೋನಿಯಲ್ಲಿ ಮನೆ ಮಾಡಿದ್ದೇನೆ ಎಂದರೆ ಅದಕ್ಕೆ ಕೃಷ್ಣ ಅವರೇ ಕಾರಣ. ಅದಕ್ಕೆ ನಾನು ಕೃಷ್ಣಾಶ್ರಯ ಎಂದೇ ಮನೆಗೆ ಹೆಸರು ಇಟ್ಟಿದ್ದೇನೆ. ಅವರು ಮುಖ್ಯಮಂತ್ರಿ ಆಗಿದ್ದಾಗ ನಾನು ಮಂತ್ರಿಯಾಗಿದ್ದೇನೆ. ಸೋನಿಯಾ ಗಾಂಧಿ ಅವರ ಕಾರ್ಯಕ್ರಮಕ್ಕೆ ಅತಿ ಹೆಚ್ಚು ಹೆಣ್ಣು ಮಕ್ಕಳನ್ನು ಸೇರಿಸಿದಾಗ ನನ್ನ ಬೆನ್ನು ತಟ್ಟಿ ಶ್ಲಾಘಿಸಿದ್ದರು. ಸ್ತ್ರೀಯರಿಗೆ ಅವರು ಪ್ರಾಮುಖ್ಯ ನೀಡುತ್ತಿದ್ದರು. ಅವರ ಸಚಿವ ಸಂಪುಟದಲ್ಲಿ ನಾಲ್ವರು ಮಹಿಳೆಯರಿಗೆ ಸ್ಥಾನ ಕೊಟ್ಟಿದ್ದರು. ನಾನು, ರಾಣಿ ಸತೀಶ್, ಸುಮಾ ವಸಂತ್, ನಫೀಸಾ ಮಂತ್ರಿಯಾಗಿದ್ದೆವು. ಈಗಿನ ಮಂತ್ರಿ ಮಂಡಲದಲ್ಲಿ ಎಷ್ಟು ಜನ ಮಹಿಳೆಯರು ಇದ್ದಾರೆ ಹೇಳಿ? ಹೆಣ್ಣು ಮಕ್ಕಳು ಸ್ವಾವಲಂಬಿಗಳಾಗಬೇಕು ಎಂದು ಅವರು ಸ್ತ್ರೀ ಶಕ್ತಿ ಸಂಘಗಳನ್ನು ಸ್ಥಾಪಿಸಿದರು’ ಎಂದು ಮಾಜಿ ಸಚಿವೆ ಮೋಟಮ್ಮ ಸ್ಮರಿಸಿಕೊಂಡು ಕಣ್ಣೀರಾದರು.
ರಾಜ್ಯಪಾಲ ಥಾವರ್ ಚಂದ ಗೆಹ್ಲೋಟ್ ಅವರು ಸದಾಶಿವ ನಗರಕ್ಕೆ ಬಂದು ಅಂತಿಮ ನಮನ ಸಲ್ಲಿಸಿದರು. ‘ರಾಜ್ಯದ ಮುಖ್ಯಮಂತ್ರಿ, ಕೇಂದ್ರದ ಸಚಿವ, ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದ ಎಸ್.ಎಂ. ಕೃಷ್ಣ ಅವರನ್ನು ಕಳೆದುಕೊಂಡಿರುವುದು ಅತ್ಯಂತ ನೋವಿನ ಸಂಗತಿ. ಅವರ ಕುಟುಂಬದವರಿಗೆ ದುಃಖ ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾಥಿಸುತ್ತೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.