ADVERTISEMENT

ಸ್ಮಾರ್ಟ್‌ ಮೀಟರ್‌ ಗೊಂದಲ ಮೂಡಿಸಬೇಡಿ: ಸರ್ಕಾರಕ್ಕೆ ಹೈಕೋರ್ಟ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 15:47 IST
Last Updated 7 ಜುಲೈ 2025, 15:47 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗದ (ಕೆಇಆರ್‌ಸಿ) ಮಾರ್ಗಸೂಚಿಗಳಿಗೆ ಅನುಗುಣವಾಗಿ ಯಾವ ರೀತಿ ಸ್ಮಾರ್ಟ್‌ ಮೀಟರ್‌ಗಳನ್ನು ಅಳವಡಿಸಬೇಕೋ ಅದೇ ರೀತಿ ಅಳವಡಿಸಲು ಮುಂದಾಗಿ. ಅದು ಬಿಟ್ಟು, ಪ್ರೀ ಪೇಯ್ಡ್‌–ಪೋಸ್ಟ್‌ ಪೇಯ್ಡ್‌ ಎಂದು ಗ್ರಾಹಕರನ್ನು ಅನಗತ್ಯವಾಗಿ ಗೊಂದಲದ ಗೂಡಿಗೆ ತಳ್ಳುವ ಕೆಲಸ ಮಾಡಬೇಡಿ’ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ಮೌಖಿಕ ಸಲಹೆ ನೀಡಿದೆ.

‘ಸ್ಮಾರ್ಟ್‌ ಮೀಟರ್‌ ಅಳವಡಿಕೆಗೆ ಸಂಬಂಧಿಸಿದಂತೆ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ) ಹೊರಡಿಸಿರುವ ಸುತ್ತೋಲೆಯನ್ನು ರದ್ದುಪಡಿಸಬೇಕು’ ಎಂದು ಕೋರಿ ದೊಡ್ಡಬಳ್ಳಾಪುರದ ಪಿ.ಎಂ.ಹರೀಶ್‌ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲೆ ಲಕ್ಷ್ಮಿ ಅಯ್ಯಂಗಾರ್ ಅವರು, ‘ಸ್ಮಾರ್ಟ್‌ ಮೀಟರ್‌ ಅಳವಡಿಕೆ ಕಡ್ಡಾಯ ಮಾಡಿ ಹೊರಡಿಸಿರುವ ಆದೇಶ ಕೆಇಆರ್‌ಸಿ ಮಾರ್ಗಸೂಚಿಗೆ ವಿರುದ್ಧವಾಗಿದೆ.  ಅದರ ದರವೂ ಗ್ರಾಹಕರಿಗೆ ಹೊರೆಯಾಗಲಿದೆ. ಸರ್ಕಾರ ಇದೇ ಫೆಬ್ರುವರಿ 13ರಂದು ಹೊರಡಿಸಿರುವ ನಿರ್ದೇಶನಗಳನ್ನು ರದ್ದುಗೊಳಿಸಬೇಕು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ADVERTISEMENT

ಇದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ, ‘ಕೆಇಆರ್‌ಸಿ ಮಾರ್ಗಸೂಚಿಗೆ ಅನುಗುಣವಾಗಿಯೇ ಸರ್ಕಾರ ನಡೆದುಕೊಳ್ಳುತ್ತಿದೆ. ಹೊಸದಾಗಿ ಯಾರು ಸ್ಮಾರ್ಟ್‌ ಮೀಟರ್‌ಗಳನ್ನು ಅಳವಡಿಸಿಕೊಳ್ಳುತ್ತಾರೆಯೊ ಅವರಿಗೆ ಮಾತ್ರವೇ ನಿರ್ದೇಶನಗಳು ಅನ್ವಯವಾಗಲಿವೆ. ಇದು ಪೋಸ್ಟ್‌ ಪೇಯ್ಡ್‌ ಆಗಿರುತ್ತದೆ’ ಎಂದು ಪ್ರತಿಪಾದಿಸಿದರು.

ಇದನ್ನು ಒಪ್ಪದ ನ್ಯಾಯಪೀಠ, ‘ಅರ್ಜಿದಾರರ ಪರ ವಕೀಲರು ಹೇಳುವಂತೆ ಅನ್ಯ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಿಮ್ಮ ಸ್ಮಾರ್ಟ್‌ ಮೀಟರ್‌ ದರ ಹೆಚ್ಚಾಗಿ ನಿಗದಿ ಮಾಡಿದ್ದೀರಲ್ಲಾ? ಪ್ರೀ ಪೇಯ್ಡ್‌ ಅಥವಾ ಪೋಸ್ಟ್‌ ಪೇಯ್ಡ್‌ ಯಾವುದೇ ರೀತಿಯ ಶುಲ್ಕ ಪಾವತಿಯಾದರೂ ಸರಿಯೇ, ಸ್ಮಾರ್ಟ್‌ ಮೀಟರ್‌ ಅಳವಡಿಕೆ ಕಡ್ಡಾಯ ಎಂಬ ನಿಮ್ಮ ನಿಲುವು ಮಾತ್ರ ಗ್ರಾಹಕರಿಗೆ ಹೊರೆಯಾಗುವಂತಿದೆಯೆಲ್ಲಾ? ಈ ರೀತಿಯ ಕ್ರಮಗಳಿಂದಾಗಿ ಸಾರ್ವಜನಿಕರು ಹೊರೆಯಿಂದ ನರಳುವಂತೆ ಮಾಡಬೇಡಿ’ ಎಂದು ಸೂಚಿಸಿತು.

ನ್ಯಾಯಪೀಠದ ಈ ಅಭಿಪ್ರಾಯವನ್ನು ಬಲವಾಗಿ ಅಲ್ಲಗಳೆದ ಅಡ್ವೊಕೇಟ್‌ ಜನರಲ್‌, ‘ಕಡ್ಡಾಯ ಎಂಬುದೇನಿಲ್ಲ. ಬೇಕಿದ್ದರೆ ಈ ಕುರಿತಂತೆ ಮುಚ್ಚಳಿಕೆ ಕೊಡಲು ಸರ್ಕಾರ ಸಿದ್ಧವಿದೆ’ ಎಂದರು. ‘ಸ್ಮಾರ್ಟ್‌ ಮೀಟರ್‌ಗಳ ಮಾರಾಟ ಮತ್ತು ನಿರ್ವಹಣೆ ಟೆಂಡರ್‌ ನೀಡಿರುವುದು ಕಾನೂನು ಬಾಹಿರ’ ಎಂದು ಆಕ್ಷೇಪಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಈಗಾಗಲೇ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳ ಮುಂದೆ ವಿಚಾರಣೆಗೆ ಬಾಕಿ ಇವೆ’ ಎಂಬ ಅಂಶವನ್ನೂ ನ್ಯಾಯಪೀಠದ ಗಮನಕ್ಕೆ ತಂದರು. ದಿನದ ಕಲಾಪದ ವೇಳೆ ಅಂತ್ಯಗೊಳ್ಳುತ್ತಿದ್ದ ಕಾರಣ ನ್ಯಾಯಪೀಠ ವಿಚಾರಣೆಯನ್ನು ಇದೇ 9ಕ್ಕೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.