ADVERTISEMENT

ಸ್ಮಿತಾ ಹರಿಕೃಷ್ಣಗೆ ಹಳೇ ದರದಲ್ಲೇ ನಿವೇಶನ ನೀಡಲು ಸೂಚನೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2021, 20:45 IST
Last Updated 24 ಆಗಸ್ಟ್ 2021, 20:45 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಕ್ರಿಕೆಟ್ ಆಟಗಾರ್ತಿ ಸ್ಮಿತಾ ಹರಿಕೃಷ್ಣ ಅವರಿಗೆ 2008ರಲ್ಲಿ ಇದ್ದ ದರದಲ್ಲೇ ನಿವೇಶನ ನೀಡಬೇಕು ಎಂಬ ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್‌ ತಿರಸ್ಕರಿಸಿದೆ.‌

ಕ್ರಿಕೆಟ್ ಆಟದಲ್ಲಿ ಅವರು ದೇಶಕ್ಕೆ ನೀಡಿದ ಕೊಡುಗೆ ಪರಿಗಣಿಸಿ 2008ರಲ್ಲಿ ಸ್ಮಿತಾ ಅವರಿಗೆ ಬಿಡಿಎ ನಿವೇಶನವನ್ನು ಸರ್ಕಾರ ಮಂಜೂರು ಮಾಡಿತ್ತು. ಆದರೆ, ನಿವೇಶನ ಹಂಚಿಕೆ ಆಗಿರಲಿಲ್ಲ. ಸ್ಮಿತಾ ಅವರು ‌ಮೂರು ಬಾರಿ ಮನವಿ ಸಲ್ಲಿಸಿ ನಿವೇಶನ ಹಂಚಿಕೆ ಮಾಡಲು ಕೋರಿದ್ದರು. ಬಳಿಕ 2020ರಲ್ಲಿ ಹಂಚಿಕೆ ಮಾಡಿದ ಬಿಡಿಎ, ₹77.22 ಲಕ್ಷ ದರ ನಿಗದಿ ಮಾಡಿತು.

ಇದನ್ನು ‍ಪ್ರಶ್ನಿಸಿ ಅವರು ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ಆಧರಿಸಿ 2008ರ ದರದಲ್ಲೇ ನಿವೇಶನ ಹಂಚಿಕೆ ಮಾಡಬೇಕು ಎಂದು ಏಕ ಸದಸ್ಯ ಪೀಠ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ದ್ವಿಸದಸ್ಯ ಪೀಠಕ್ಕೆ ಬಿಡಿಎ ಮೇಲ್ಮನವಿ ಸಲ್ಲಿಸಿತ್ತು.

ADVERTISEMENT

ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ, 2008ರಲ್ಲೇ ಮಂಜೂರು ಮಾಡಿದರೂ, ಈ ತನಕ ಹಂಚಿಕೆ ಮಾಡಿಲ್ಲ ಏಕೆ ಎಂದು ಪ್ರಶ್ನಿಸಿತು. ‘ಕಡತ ಕಾಣೆಯಾಗಿದೆ ಎಂಬ ಬಿಡಿಎ ಅಧಿಕಾರಿಗಳ ನೆಪ ಆಘಾತಕಾರಿ. ಬಿಡಿಎ ಮಾಡಿರುವ ತಪ್ಪಿಗೆ ಆಟಗಾರ್ತಿಯನ್ನು ದೂಷಿಸಲು ಆಗುವುದಿಲ್ಲ. ಏಕ ಸದಸ್ಯ ಪೀಠದ ಆದೇಶದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ’ ಎಂದು ಪೀಠ ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.