ಬೆಂಗಳೂರು: ‘ಯಾರು ಬೇಕಾದರೂ ಮುಖ್ಯಮಂತ್ರಿ ಆಗಬಹುದು. ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇದ್ದಾರೆ. ಸಿದ್ದರಾಮಯ್ಯ ಒಂದು ಬಾರಿ ಮುಖ್ಯಮಂತ್ರಿ ಆಗಿದ್ದಾರೆ. ಮತ್ತೆ ಅವರು ಮುಖ್ಯಮಂತ್ರಿ ಆಗಬೇಕೆಂದು ಕೆಲವರು ಹೇಳುತ್ತಿದ್ದಾರೆ’ ಎಂದು ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಬಿಜೆಪಿಯಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ಸೂಟು ಬೂಟು ಹೊಲಿಸಿಕೊಂಡು ಈಗಲೇ ಕಿತ್ತಾಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.
‘ಕಾಂಗ್ರೆಸ್ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಹೋಗಲಿದೆ. ರಾಮಲಿಂಗಾ ರೆಡ್ಡಿ ಏಳು ಬಾರಿ ಗೆದ್ದಿದ್ದಾರೆ. ರಾಮಲಿಂಗಾ ರೆಡ್ಡಿಗೂ ಮುಖ್ಯಮಂತ್ರಿ ಅಗುವ ಆಸೆ ಇದೆ. ದೇಶಪಾಂಡೆಯವರು ಎಂಟು ಬಾರಿ ಗೆದ್ದಿದ್ದಾರೆ. ಅವರಿಗೂ ಮುಖ್ಯಮಂತ್ರಿ ಸ್ಥಾನದ ಆಸೆ ಇದೆ’ ಎಂದರು.
‘ಸಿದ್ದರಾಮಯ್ಯ ಹತ್ತು ವರ್ಷಗಳಿಂದ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಮುಂದಿನ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಪಕ್ಷದ ನಾಯಕರು ತೀರ್ಮಾನ ಮಾಡಿಲ್ಲ. ಕಾಂಗ್ರೆಸ್ ಎಲ್ಲ ಸಮಾಜವನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದೆ’ ಎಂದರು.
’ಬಿಜೆಪಿಯಲ್ಲಿ ಸಿ.ಎನ್. ಅಶ್ವತ್ಥನಾರಾಯಣ ಮುಖ್ಯಮಂತ್ರಿ ಆಗಬೇಕು ಅಂತಾರೆ. ಉಮೇಶ್ ಕತ್ತಿ ಪ್ರತ್ಯೇಕ ರಾಜ್ಯ ಘೋಷಿಸಿ, ಮುಖ್ಯಮಂತ್ರಿ ಮಾಡಿ ಅಂತಾರೆ. ಅರವಿಂದ ಬೆಲ್ಲದ್ ಮುಖ್ಯಮಂತ್ರಿ ಮಾಡಿ ಅಂತಾರೆ. ಈಗ ಅಧಿಕಾರದಲ್ಲಿ ಇರುವವರೇ ಮುಖ್ಯಮಂತ್ರಿ ನಾನಾಗಬೇಕು, ನಾನಾಗಬೇಕು ಎಂದು ಕಿತ್ತಾಡುತ್ತಿದ್ದಾರಲ್ಲ’ ಎಂದರು.
ರಾಜ್ಯ ನಾಯಕರ ಜೊತೆ ರಾಹುಲ್ ಗಾಂಧಿ ಸಭೆ ಕುರಿತು ಪ್ರತಿಕ್ರಿಯಿಸಿದ ಸುರೇಶ್, ‘ಪಕ್ಷದ ಸಂಘಟನೆ ವಿಚಾರವಾಗಿ ರಾಹುಲ್ ಗಾಂಧಿ ಜೊತೆ ಚರ್ಚೆಯಾಗಿದೆ. ಮುಂದೆ ನಮ್ಮ ನಡೆ ಹೇಗಿರಬೇಕು. ಕಾರ್ಯತಂತ್ರ ಯಾವ ರೀತಿ ರೂಪಿಸಬೇಕು ಎಂಬ ಬಗ್ಗೆ ಚರ್ಚೆ ಮಾಡಿದ್ದಾರೆ. ಭಾರತ್ ಜೋಡೋ ಯಾತ್ರೆ ಬರುವ ಎರಡನೇ ರಾಜ್ಯ ಕರ್ನಾಟಕ. ಅದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಲು ಸಭೆ ನಡೆಸಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.