ADVERTISEMENT

‘ಬ್ಯಾಂಕಿಂಗ್‌ ಕ್ಷೇತ್ರದಲ್ಲೂ ಬಹಳ ಅವಕಾಶ’

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 14:32 IST
Last Updated 28 ಡಿಸೆಂಬರ್ 2019, 14:32 IST
ಡಾ.ಗುರುರಾಜ ಬುಲಬುಲೆ
ಡಾ.ಗುರುರಾಜ ಬುಲಬುಲೆ   

ಬೆಳಗಾವಿ: ‘ಬ್ಯಾಂಕಿಂಗ್ ಕ್ಷೇತ್ರದ‌ಲ್ಲಿ ಉದ್ಯೋಗ ಪಡೆದುಕೊಳ್ಳಲು ಬಹಳ ಅವಕಾಶಗಳಿವೆ. ಯುವಜನರು ಇದನ್ನು ಬಳಸಿಕೊಳ್ಳಬೇಕು’ ಎಂದು ಧಾರವಾಡದ ‘ಬುಲಬುಲೆ ಸ್ಕೂಲ್‌ ಆಫ್‌ ಬ್ಯಾಂಕಿಂಗ್‌’ ನಿರ್ದೇಶಕ ಡಾ.ಗುರುರಾಜ ಬುಲಬುಲೆ ಸಲಹೆ ನೀಡಿದರು.

‘ಭಾರತದಲ್ಲಿ ಇರುವಷ್ಟು ಸರ್ಕಾರಿ ನೌಕರಿಗಳ ಸೃಷ್ಟಿ ಬೇರೆ ದೇಶಗಳಲ್ಲಿಲ್ಲ. ಇದಕ್ಕಾಗಿ ಸ್ಪರ್ಧಾತ್ಮಕ ಜಗತ್ತಿಗೆ ತಕ್ಕಂತೆ ಮನೋಭಾವ ಬೆಳೆಸಿಕೊಳ್ಳಬೇಕು. ನಿಮ್ಮನ್ನು ನೀವು ನಂಬಬೇಕು.‌ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಇಲ್ಲವಾದಲ್ಲಿ ಏನನ್ನೂ ಸಾಧಿಸಲಾಗದು. ಪರೀಕ್ಷೆ ‌ವಿಷಯದಲ್ಲಿ ಬದಲಾವಣೆಗಳು ಆಗುತ್ತಿವೆ. ಇದಕ್ಕೆ ಪೂರಕವಾಗಿ ಸಿದ್ಧ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

‘ರಾಜ್ಯ ಸರ್ಕಾರದಂತೆಯೇ ಕೇಂದ್ರವೂ ಗರಿಷ್ಠ ಸಂಖ್ಯೆಯ ಹುದ್ದೆಗಳಿಗೆ ಪರೀಕ್ಷೆ ನಡೆಸುತ್ತದೆ. ಇದರ ಮಾಹಿತಿ ಪಡೆದುಕೊಳ್ಳಬೇಕು. ಇದಕ್ಕಾಗಿ ‘ಪ್ರಜಾವಾಣಿ’, ಅದೇ ಪತ್ರಿಕೆಯ ‘ಸಹಪಾಠಿ’ ನೋಡಿದರೆ ಮಾಹಿತಿ ಸಿಗುತ್ತದೆ. ಜ್ಞಾನವನ್ನು ಕೌಶಲವಾಗಿ ಪರಿವರ್ತಿಸಿ ಬಳಸಿಕೊಳ್ಳಬೇಕು. ಕೇಂದ್ರ ಸರ್ಕಾರದ ಬಹಳ ಹುದ್ದೆಗಳಿಗೆ ಪರೀಕ್ಷೆಗಳು ಇಂಗ್ಲಿಷ್‌ನಲ್ಲಿ ನಡೆಯುತ್ತವೆ. ಹೀಗಾಗಿ ಆ ಜ್ಞಾನ ಪಡೆದುಕೊಳ್ಳಬೇಕು. ಪ್ರಶ್ನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಉತ್ತರ ಬರೆಯಬೇಕು. ನನಗೇನು ಗೊತ್ತಿಲ್ಲ ಎನ್ನುವುದನ್ನು ಗೊತ್ತು ಮಾಡಿಕೊಳ್ಳಬೇಕು. ನನ್ನಿಂದ ಸಾಧ್ಯವಿಲ್ಲ ಎಂಬುದನ್ನು ಮನಸ್ಸಿನಿಂದ ತೆಗೆದು ಹಾಕಬೇಕು’ ಎಂದರು.

ADVERTISEMENT

‘ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಫಾಸ್ ಟ್ರ್ಯಾಕ್ ಪ್ರಮೋಷನ್ ವ್ಯವಸ್ಥೆ ಇದೆ. ಈ ಮೂಲಕ ಬಾಸ್‌ಗೇ ಬಾಸ್ ಆಗುವ ಅವಕಾಶವಿದೆ. ಸ್ಪರ್ಧಾತ್ಮಕ ಪರೀಕ್ಷೆಗಳು ಕಠಿಣವಲ್ಲ; ಸುಲಭವೂ ಇರುವುದಿಲ್ಲ. ಪ್ರಶ್ನೆಗಳು ಕಠಿಣವಾಗಿರುವುದಿಲ್ಲ; ವಿಭಿನ್ನವಾಗಿರುತ್ತವೆ’ ಎಂದು ತಿಳಿಸಿದರು.

‘ಪರೀಕ್ಷೆಯಲ್ಲಿ ಫೇಲಾದರೇನು? ಅನುಭವವಾದರೂ ಆಗುತ್ತದೆ. ಓದುತ್ತಿರಬೇಕು, ಪ್ರಯತ್ನ ಪಡುತ್ತಿರಬೇಕು. ಆಗ ಯಶಸ್ಸು ದೊರೆಯುತ್ತದೆ. ಬಳಿಕ ಎಲ್ಲವೂ ನಮ್ಮನ್ನು ಹುಡುಕಿಕೊಂಡು ಬರುತ್ತವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.