
ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಹಾಗೂ ಅವಹೇಳನಕಾರಿ ಸಂದೇಶಗಳನ್ನು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ಕ್ರೈಂ ಪೊಲೀಸರು ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರ ಹೇಳಿಕೆ ದಾಖಿಲಿಸಿಕೊಂಡಿದ್ದಾರೆ.
ದೂರಿನಲ್ಲಿ ಹೇಳಿರುವ ಅಂಶಗಳನ್ನೇ ವಿಜಯಲಕ್ಷ್ಮೀ ಹೇಳಿಕೆಯಲ್ಲೂ ನೀಡಿದ್ದಾರೆ. ಯಾವ ಖಾತೆಗಳಲ್ಲಿ ಅಶ್ಲೀಲ ಸಂದೇಶ ಹಾಕಲಾಗಿದೆ? ಯಾರು ಅವಹೇಳನಕಾರಿ ಸಂದೇಶ ಹಾಕಿದ್ದಾರೆ ಎಂಬ ಪ್ರಶ್ನೆಗಳನ್ನು ಕೇಳಿ, ಹೇಳಿಕೆ ದಾಖಲಿಸಿದ್ದಾರೆ.
ದೂರು ದಾಖಲಾಗುತ್ತಿದ್ದಂತೆ ಅಶ್ಲೀಲ ಹಾಗೂ ಅವಹೇಳನಕಾರಿ ಸಂದೇಶಗಳನ್ನು ಹಾಕಿದ್ದ 18 ಇನ್‌ಸ್ಟಾಗ್ರಾಂ ಖಾತೆಗಳನ್ನು ಅಳಿಸಲಾಗಿದ್ದು, ಇದಕ್ಕೂ ಮೊದಲೇ ಸಂಬಂಧಪಟ್ಟ ಖಾತೆಗಳ ಬಗ್ಗೆ ಪೊಲೀಸರು ಮಾಹಿತಿ ಪಡೆದುಕೊಂಡಿದ್ದರು.
ಅವಹೇಳನಕಾರಿ ಸಂದೇಶಗಳ ಸ್ಕ್ರಿನ್ ಶಾಟ್ಗಳ ಸಮೇತ ವಿಜಯಲಕ್ಷ್ಮಿ ದೂರು ನೀಡಿದ್ದರು. ದೂರು ಆಧರಿಸಿ ಯೋಗಿ ಕಿಚ್ಚ, ಮಿ.ಅನಾಥ, ಮಹಿ ಕಿಚ್ಚ, ವಿರಾಟ್ ಕಿಚ್ಚ ಎಂಬ ಖಾತೆ ಸೇರಿ ಹಲವು ಇನ್‌ಸ್ಟ್ರಾಗ್ರಾಂ ಖಾತೆಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
‘ದಾವಣಗೆರೆಯಲ್ಲಿ ಆಯೋಜಿಸಲಾಗಿದ್ದ ಡೆವಿಲ್ ಸಿನಿಮಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಾನು ವೇದಿಕೆಯ ಮೇಲೆ ಪತಿ ದರ್ಶನ್ ಕುರಿತು ಮಾತನಾಡಿದ್ದೆ. ಯಾರು ಏನೇ ಹೇಳಿದರೂ ತಲೆಕೆಡಿಸಿಕೊಳ್ಳಬೇಡಿ ಎಂದು ಅಭಿಮಾನಿಗಳಿಗೆ ಹೇಳಿದ್ದೆ. ಈ ಬಗ್ಗೆ ಹಲವರು ಸಾಮಾಜಿಕ ಜಾಲತಾಣದ ಮೂಲಕ ನನ್ನ ಹಾಗೂ ನಮ್ಮ ಕುಟುಂಬದ ಕುರಿತು ಅಶ್ಲೀಲ ಸಂದೇಶಗಳನ್ನು ಹಾಕುತ್ತಿದ್ದಾರೆ. ಅದರಿಂದ ನಮ್ಮ ಗೌರವಕ್ಕೆ ಧಕ್ಕೆಯಾಗುತ್ತಿದ್ದು, ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ. ಆದ್ದರಿಂದ ಅಂತಹ ಸಾಮಾಜಿಕ ಜಾಲತಾಣ ಖಾತೆ ಬಳಕೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ವಿಜಯಲಕ್ಷ್ಮಿ ದರ್ಶನ್ ದೂರಿನಲ್ಲಿ ಕೋರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.