ADVERTISEMENT

Caste Census | ಸಮೀಕ್ಷೆಗೆ ಸಿಬ್ಬಂದಿ; ‘ಕಡತ’ ವಿಲೇ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 15:58 IST
Last Updated 7 ಅಕ್ಟೋಬರ್ 2025, 15:58 IST
<div class="paragraphs"><p>ಜಾತಿವಾರು ಸಮೀಕ್ಷೆ</p></div>

ಜಾತಿವಾರು ಸಮೀಕ್ಷೆ

   

ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯಕ್ಕೆ ಎಲ್ಲ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರೂಪ್‌ ‘ಬಿ’ ಮತ್ತು ಗ್ರೂಪ್‌ ‘ಬಿ’ ವೃಂದದ ಅಧಿಕಾರಿ, ಸಿಬ್ಬಂದಿಯನ್ನು ನಿಯೋಜಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಆದೇಶ ಹೊರಡಿಸಿದೆ. ಇದರಿಂದಾಗಿ ‘ಆಡಳಿತ ಶಕ್ತಿ ಕೇಂದ್ರ’ಗಳಾದ ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡದಲ್ಲಿರುವ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಕಡತಗಳ ವಿಲೇವಾರಿ ಸ್ಥಗಿತಗೊಂಡಿದೆ.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿ ಅ. 4ರಿಂದ ಸಮೀಕ್ಷೆ ಆರಂಭಗೊಂಡಿದೆ. ಈ ಸಮೀಕ್ಷೆಗೆ ಸರ್ಕಾರದ ಸಚಿವಾಲಯಕ್ಕೆ ಸಂಬಂಧಿಸಿದಂತೆ ಡಿಪಿಎಆರ್‌ನ ಒಟ್ಟು 1,566 ಅಧಿಕಾರಿ, ಸಿಬ್ಬಂದಿಯನ್ನು ಒದಗಿಸುವಂತೆ ಪ್ರಾಧಿಕಾರದ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಅವರು ಮನವಿ ಮಾಡಿದ್ದರು. ಅದರಂತೆ ಅನುಮೋದನೆ ನೀಡಿ ಆದೇಶ ಹೊರಡಿಸಲಾಗಿದೆ ಎಂದು ಡಿಪಿಎಆರ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ADVERTISEMENT

‘ಸಮೀಕ್ಷೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ಆಗುವಂತೆ ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರು ಅಧಿಕಾರಿ, ಸಿಬ್ಬಂದಿಯನ್ನು ಕರ್ತವ್ಯದಿಂದ ಬಿಡುಗಡೆ ಮಾಡಬೇಕು. ಒಂದೊಮ್ಮೆ ಸಮೀಕ್ಷಾ ಕರ್ತವ್ಯ ನಿರ್ವಹಿಸಲು ನಿರ್ಲಕ್ಷ್ಯ ತೋರಿದರೆ ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಜಿಬಿಎ ಮುಖ್ಯ ಆಯುಕ್ತರಿಗೆ ಅಧಿಕಾರ ನೀಡಲಾಗಿದೆ’ ಎಂದೂ ಅವರು ತಿಳಿಸಿದರು. 

22,672 ಸಿಬ್ಬಂದಿಯ ನಿಯೋಜನೆ:

ಜಿಬಿಎ ವ್ಯಾಪ್ತಿಯಲ್ಲಿ ಸಮೀಕ್ಷೆಗೆ ವಿವಿಧ ಇಲಾಖೆ, ನಿಗಮ ಮಂಡಳಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರೂಪ್‌ ‘ಬಿ’ ಮತ್ತು ಗ್ರೂಪ್‌ ‘ಸಿ’ ವೃಂದದ ಒಟ್ಟು 22,672 ಸಿಬ್ಬಂದಿಯನ್ನು ನಿಯೋಜಿಸುವಂತೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ಮಹೇಶ್ವರ ರಾವ್ ಅವರು ಸೆ. 19ರಂದು ಪತ್ರ ಬರೆದಿದ್ದರು. ಅದರ ಅನ್ವಯ, ತಕ್ಷಣ ಆದೇಶ ಹೊರಡಿಸುವಂತೆ ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಮುಖ್ಯ ಕಾರ್ಯದರ್ಶಿ ಸೂಚನೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.