ADVERTISEMENT

ಹೊಸ ಸೌರವಿದ್ಯುತ್‌ ಯೋಜನೆಗಳಿಗೆ ತಡೆ

2021ಕ್ಕೆ ಸೋಲಾರ್ ನೀತಿ ಮುಕ್ತಾಯ * ರಾಜ್ಯವೇ ಮೊದಲು

ಕೆ.ಜೆ.ಮರಿಯಪ್ಪ
Published 20 ಜನವರಿ 2020, 2:39 IST
Last Updated 20 ಜನವರಿ 2020, 2:39 IST
   

ಬೆಂಗಳೂರು: ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳನ್ನು ಬಳಸಿಕೊಂಡು ವಿದ್ಯುತ್ ಉತ್ಪಾದನೆಯಲ್ಲಿ ನಿಗದಿತ ಗುರಿ ಮುಟ್ಟಿರುವುದರಿಂದ ಮುಂದಿನ ಎರಡು ವರ್ಷಗಳ ಕಾಲ ಹೊಸ ವಿದ್ಯುತ್‌ ಯೋಜನೆಗಳಿಗೆ ಅನುಮತಿ ನೀಡದಿರಲು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (ಕ್ರೆಡೆಲ್) ನಿರ್ಧರಿಸಿದೆ.

2021ರ ವೇಳೆಗೆ 6 ಸಾವಿರ ಮೆಗಾವಾಟ್ ಸೌರ ವಿದ್ಯುತ್ ಉತ್ಪಾದನೆ ಗುರಿಯನ್ನು ಹೊಂದಿದ್ದು, ಇನ್ನೂ ಎರಡು ವರ್ಷ ಬಾಕಿ ಇರುವಾಗಲೇಈ ಗುರಿ ಸಾಧಿಸಲಾಗಿದೆ. ಹಾಗಾಗಿ ಹೊಸ ಸೌರ ವಿದ್ಯುತ್‌ ಯೋಜನೆಗಳನ್ನು ಆರಂಭಿಸಲು ಕ್ರೆಡೆಲ್ ಅವಕಾಶ ನೀಡುವುದಿಲ್ಲ.

ಶಾಖೋತ್ಪನ್ನ ಸೇರಿದಂತೆ ವಾಯುಮಾಲಿನ್ಯಕ್ಕೆ ಕಾರಣವಾಗುವ ಯೋಜನೆಗಳನ್ನು ತಗ್ಗಿಸಿ, ಪರಿಸರ ಸ್ನೇಹಿ ಹಾಗೂ ನವೀಕರಿಸಬಹುದಾದ ಇಂಧನ ಮೂಲಗಳಿಂದ ವಿದ್ಯುತ್ ಉತ್ಪಾದನೆಗೆ ರಾಜ್ಯ ಸರ್ಕಾರ ಒತ್ತುನೀಡಿದೆ. ಈ ಹಿನ್ನೆಲೆಯನ್ನು ಇಟ್ಟುಕೊಂಡು ‘ಸೋಲಾರ್ ನೀತಿ’ ರೂಪಿಸಿದ್ದು, ಅದು 2021ಕ್ಕೆ ಕೊನೆಗೊಳ್ಳಲಿದೆ. ಈ ನಿಯಮದ ಪ್ರಕಾರ ಉತ್ಪಾದನೆ ಗುರಿ ತಲುಪಿದ್ದು,ಹೊಸ ನೀತಿ ರೂಪುಗೊಳ್ಳುವವರೆಗೂ ನೂತನ ಯೋಜನೆಗಳಿಗೆ ಅವಕಾಶ ನೀಡುವಂತಿಲ್ಲ.

ADVERTISEMENT

‘ಒಂದು ವೇಳೆ ಯಾವುದಾದರೂ ಕಂಪನಿ ವಿದ್ಯುತ್ ಉತ್ಪಾದನೆ ಆರಂಭಿಸಿದರೂ ಸರ್ಕಾರದ ಕಂಪನಿ, ಸಂಸ್ಥೆಗಳಿಗೆ ಮಾರಾಟ ಮಾಡುವಂತಿಲ್ಲ. ಬೇಕಿದ್ದರೆ ಸ್ವಂತಕ್ಕೆ ಬಳಸಿಕೊಳ್ಳಬಹುದು. ಹಾಗಾಗಿ ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸುವ ಯೋಜನೆ
ಗಳಿಗೆ ಅವಕಾಶ ನೀಡುವುದಿಲ್ಲ’ ಎಂದು ಕ್ರೆಡೆಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ಬಿ.ಬೂದೆಪ್ಪ ತಿಳಿಸಿದರು.

ಜಲ ವಿದ್ಯುತ್– ದಾಖಲೆ: ಗೃಹಬಳಕೆ
ಗಾಗಿ ಜಲ ವಿದ್ಯುತ್ ಉತ್ಪಾದನಾ ಘಟಕಗಳನ್ನು ಹೊಂದುವಲ್ಲೂ ರಾಜ್ಯ ಮುಂಚೂಣಿಯಲ್ಲಿದೆ. ಪ್ರಸ್ತುತ 1,500 ಘಟಕಗಳನ್ನು ಸ್ಥಾಪಿಸಿದ್ದು, ಇವುಗಳ ಮೂಲಕ ಗೃಹ ಉದ್ದೇಶಕ್ಕಾಗಿ ವಿದ್ಯುತ್ ಉತ್ಪಾದನೆಮಾಡಲಾಗುತ್ತಿದೆ. ಇಷ್ಟು ಸಂಖ್ಯೆಯ ಘಟಕಗಳನ್ನುಬೇರಾವ ರಾಜ್ಯವೂ ಹೊಂದಿಲ್ಲ. ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ ಭಾಗದ ಅರಣ್ಯ ಪ್ರದೇಶಗಳಲ್ಲಿ ಪುಟ್ಟ ಜಲ ವಿದ್ಯುತ್ ಘಟಕಗಳನ್ನು ಸ್ಥಾಪಿಸಲಾಗಿದೆ.

ಝರಿ, ಸಣ್ಣ ಪುಟ್ಟ ತೊರೆಗಳಲ್ಲಿ ಹರಿಯುವ ನೀರು ಬಳಸಿಕೊಂಡು ಮನೆ ಬಳಕೆಗೆ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಪ್ರೋತ್ಸಾಹಿಸುತ್ತಿದೆ. ಪ್ರತಿ ಘಟಕಕ್ಕೆ ₹1.50 ಲಕ್ಷ ಸಬ್ಸಿಡಿ ನೀಡುತ್ತಿದ್ದು, ಉಳಿದ ಹಣವನ್ನು ಘಟಕ ಸ್ಥಾಪಿಸಿಕೊಳ್ಳುವವರು ತೊಡಗಿಸಬೇಕು. ಇಂತಹ ಘಟಕ ಹೊಂದುವುದರಿಂದ ವಿದ್ಯುತ್‌ಗಾಗಿ ಪರಾವಲಂಬನೆ ತಪ್ಪುತ್ತದೆ ಎಂದು ಕ್ರೆಡೆಲ್ ಅಧಿಕಾರಿಗಳು ಹೇಳುತ್ತಾರೆ.

ರಾಜ್ಯವೇ ಮೊದಲು
ನವೀಕರಿಸಬಹುದಾದ ಇಂಧನ ಮೂಲಗಳನ್ನು ಬಳಸಿಕೊಂಡು ವಿದ್ಯುತ್ ಉತ್ಪಾದನೆಯಲ್ಲಿ ರಾಜ್ಯ(14,863 ಮೆಗಾವಾಟ್) ಮೊದಲ ಸ್ಥಾನದಲ್ಲಿ ಇದೆ. ತಮಿಳುನಾಡು 2ನೇ (11,736 ಮೆ.ವಾ), ಮಹಾರಾಷ್ಟ್ರ 3ನೇ (8,753 ಮೆ.ವಾ) ಸ್ಥಾನದಲ್ಲಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.