ADVERTISEMENT

ಅಕ್ರಮ ಆಸ್ತಿ ರಕ್ಷಣೆಗೆ ಪ್ರತಿಭಟನೆಯ ಹಾದಿ ಹಿಡಿದ ಕಾಂಗ್ರೆಸ್‌: ಬಿಜೆಪಿ ಟೀಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಜೂನ್ 2022, 10:45 IST
Last Updated 11 ಜೂನ್ 2022, 10:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕಾಂಗ್ರೆಸ್‌ ನಾಯಕರು ತಮ್ಮ ಅಕ್ರಮ ಆಸ್ತಿ ರಕ್ಷಿಸಿಕೊಳ್ಳಲು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, ‘ಈ ದೇಶದಲ್ಲಿ ನಕಲಿ ಗಾಂಧಿಗಳು ಕಾನೂನು ಹಾಗೂ ಸಂವಿಧಾನಕ್ಕೆ ಅತೀತರೇ? ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ನ್ಯಾಯಾಲಯದ ಸೂಚನೆ ಅನ್ವಯ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ಇಡಿ ಸಮನ್ಸ್ ಜಾರಿಗೊಳಿಸಿದೆ. ವಿಚಾರಣೆಗೆ ಎದುರಾಗಲು ಭಯವೇಕೆ?’ ಎಂದು ಪ್ರಶ್ನಿಸಿದೆ.

‘ನಕಲಿ ಗಾಂಧಿಗಳಿಗೆ ನೋಟಿಸ್ ನೀಡಿರುವುದನ್ನು ಖಂಡಿಸಿ ಇಡಿ ಕಚೇರಿ ಎದುರು ಧರಣಿಗೆ ಕಾಂಗ್ರೆಸ್‌ ಕರೆ ನೀಡಿದೆ. ಕಾಂಗ್ರೆಸ್ ನಾಯಕರಲ್ಲಿ ಬಹುತೇಕ‌ರು ಈಗಾಗಲೇ ಐಟಿ, ಇಡಿ ಕಚೇರಿಗೆ ಮೆರವಣಿಗೆ ಮಾಡಿದ್ದಾರೆ. ದೇಶದ ಬಗ್ಗೆ ನಿಮಗೆ ನಿಜಕ್ಕೂ ಕಾಳಜಿ ಇದ್ದರೆ ಗಳಿಸಿದ ಅಕ್ರಮ ಸಂಪತ್ತನ್ನು ವಾಪಾಸ್ ಮಾಡಿ’ ಎಂದು ಒತ್ತಾಯಿಸಿದೆ.

ADVERTISEMENT

‘ಬೆದರಿಕೆ ತಂತ್ರದಲ್ಲಿ ಕಾಂಗ್ರೆಸಿಗರು ನಿಸ್ಸೀಮರು. ಕಾಂಗ್ರೆಸ್ ರಾಷ್ಟ್ರೀಯ ನಾಯಕರಿಗೆ ಇಡಿ ನೋಟಿಸ್ ನೀಡಿದ ಏಕಮಾತ್ರ ಕಾರಣಕ್ಕೆ ದೇಶಾದ್ಯಂತ ಪ್ರತಿಭಟನೆಗೆ ಹೊರಟಿರುವ ಕಾಂಗ್ರೆಸ್ಸಿಗರಿಗೆ ನೈತಿಕತೆ ಇದೆಯೇ? ತಟ್ಟೆ ಬಡಿದು ಬೆಕ್ಕು ಹೆದರಿಸುವ ತಂತ್ರಕ್ಕೆ ಬಿಜೆಪಿ ಸರ್ಕಾರ ಎಂದಿಗೂ ಬೆದರದು’ ಎಂದು ಟ್ವೀಟ್‌ ಮಾಡಿದೆ.

‘ಭ್ರಷ್ಟಾಧ್ಯಕ್ಷ ಡಿ.ಕೆ.ಶಿವಕುಮಾರ್ ಮೇಲೆ ಐಟಿ ದಾಳಿಯಾದಾಗಲೂ ಕಾಂಗ್ರೆಸ್ ಇದೇ ರೀತಿ ಪ್ರತಿಭಟಿಸಿತ್ತು. ಕಾಂಗ್ರೆಸ್‌ ನಾಯಕರು ತಮ್ಮ ಅಕ್ರಮ ಆಸ್ತಿ ರಕ್ಷಿಸಿಕೊಳ್ಳಲು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಪ್ರತಿಭಟನೆಗೆ ಕರೆ ನೀಡಿದವರೇ ಭ್ರಷ್ಟಾಚಾರ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ’ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.