ADVERTISEMENT

ಡಿವೈಎಫ್ಐ ಮುಖಂಡನ ಮೇಲೆ ದೌರ್ಜನ್ಯ: ವೇಣೂರು ಹೆಡ್ ಕಾನ್‌ಸ್ಟೆಬಲ್‌ ಅಮಾನತು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2018, 15:20 IST
Last Updated 19 ಅಕ್ಟೋಬರ್ 2018, 15:20 IST

ಮಂಗಳೂರು: ಮೂಡುಬಿದಿರೆಯಿಂದ ಬೆಳ್ತಂಗಡಿಗೆ ತೆರಳುತ್ತಿದ್ದ ಡಿವೈಎಫ್‌ಐ ಮುಖಂಡ ರಿಯಾಜ್‌ ಹಾಗೂ ಅವರ ಸಹೋದರರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವೇಣೂರು ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ತಾರಾನಾಥ ಅವರನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಆರ್‌. ರವಿಕಾಂತೇಗೌಡ, ಶುಕ್ರವಾರ ಆದೇಶ ಹೊರಡಿಸಿದ್ದಾರೆ.

ಇದೇ 2 ರಂದು ರಿಯಾಜ್‌ ಅವರು ತಮ್ಮ ಸಹೋದರನೊಂದಿಗೆ ಮೂಡುಬಿದಿರೆಯಿಂದ ವೇಣೂರು ಮೂಲಕ ಬೆಳ್ತಂಗಡಿಗೆ ತೆರಳುತ್ತಿದ್ದರು. ರಾತ್ರಿ ವೇಳೆ ತಪಾಸಣೆಯ ನೆಪದಲ್ಲಿ ರಿಯಾಜ್‌ ಹಾಗೂ ಅವರ ಸಹೋದರನನ್ನು ತಡೆದ ಪೊಲೀಸರು, ನಿಂದಿಸಿದ್ದರು. ಅಲ್ಲದೇ ಠಾಣೆಗೆ ಕರೆದೊಯ್ದು, ಹಲ್ಲೆ ನಡೆಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

ಪ್ರಕರಣದ ಕುರಿತು ಕೂಡಲೇ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿವೈಎಫ್‌ಐ ನಿಯೋಗ, ಪೊಲೀಸ್ ವರಿಷ್ಠಾಧಿಕಾರಿಯನ್ನು ಆಗ್ರಹಿಸಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸುವುದು ಡಾ.ಬಿ.ಆರ್. ರವಿಕಾಂತೇಗೌಡ ಭರವಸೆ ನೀಡಿದ್ದರು.

ADVERTISEMENT

ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಬೆಳ್ತಂಗಡಿ ಇನ್‌ಸ್ಪೆಕ್ಟರ್‌ಗೆ ಸೂಚನೆ ನೀಡಲಾಗಿತ್ತು. ಅವರ ವರದಿಯ ಆಧಾರದ ಮೇಲೆ, ಇಲಾಖಾ ವಿಚಾರಣೆ ಕಾಯ್ದಿರಿಸಿ, ಹೆಡ್ ಕಾನ್‌ಸ್ಟೆಬಲ್‌ ತಾರಾನಾಥ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.