ADVERTISEMENT

ಸ್ಪರ್ಧಾ ‘ಮಾರ್ಗ’ ತೋರಿಸಿದ ಕಾರ್ಯಾಗಾರ

‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್‌’, ‘ಚಾಣಕ್ಯ ಕರಿಯರ್ ಅಕಾಡೆಮಿ’ಯಿಂದ ಆಯೋಜನೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 14:07 IST
Last Updated 28 ಡಿಸೆಂಬರ್ 2019, 14:07 IST
ಬೆಳಗಾವಿಯಲ್ಲಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್‌’ ವತಿಯಿಂದ ವಿಜಯಪುರದ ‘ಚಾಣಕ್ಯ ಕರಿಯರ್‌ ಅಕಾಡೆಮಿ’ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ‘ಸ್ಪರ್ಧಾ ಮಾರ್ಗ’ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಮಾರ್ಗದರ್ಶನ ಕಾರ್ಯಾಗಾರವಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ. ರಾಜೇಂದ್ರ ಮಕ್ಕಳೊಂದಿಗೆ ಸೇರಿ ಚಾಲನೆ ನೀಡಿದರು. ಅಕಾಡೆಮಿಯ ಬೋಧಕಿ ಪರ್ವೀನ್, ವಾಣಿಜ್ಯ ತೆರಿಗೆ ಅಧಿಕಾರಿ ಅಶೋಕ ಮಿರ್ಜಿ, ಜಾಹೀರಾತು ವಿಭಾಗದ ಎಜಿಎಂ ದಿವಾಕರ್ ಭಟ್, ಪ್ರಸರಣ ವಿಭಾಗದ ಎಜಿಎಂ ಶಿವರಾಜ್‌ ನರೋಣ ಇದ್ದಾರೆ
ಬೆಳಗಾವಿಯಲ್ಲಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್‌’ ವತಿಯಿಂದ ವಿಜಯಪುರದ ‘ಚಾಣಕ್ಯ ಕರಿಯರ್‌ ಅಕಾಡೆಮಿ’ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ‘ಸ್ಪರ್ಧಾ ಮಾರ್ಗ’ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಮಾರ್ಗದರ್ಶನ ಕಾರ್ಯಾಗಾರವಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ. ರಾಜೇಂದ್ರ ಮಕ್ಕಳೊಂದಿಗೆ ಸೇರಿ ಚಾಲನೆ ನೀಡಿದರು. ಅಕಾಡೆಮಿಯ ಬೋಧಕಿ ಪರ್ವೀನ್, ವಾಣಿಜ್ಯ ತೆರಿಗೆ ಅಧಿಕಾರಿ ಅಶೋಕ ಮಿರ್ಜಿ, ಜಾಹೀರಾತು ವಿಭಾಗದ ಎಜಿಎಂ ದಿವಾಕರ್ ಭಟ್, ಪ್ರಸರಣ ವಿಭಾಗದ ಎಜಿಎಂ ಶಿವರಾಜ್‌ ನರೋಣ ಇದ್ದಾರೆ   

ಬೆಳಗಾವಿ: ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್‌’ ವತಿಯಿಂದ ವಿಜಯಪುರದ ‘ಚಾಣಕ್ಯ ಕರಿಯರ್‌ ಅಕಾಡೆಮಿ’ ಸಹಯೋಗದಲ್ಲಿ ಇಲ್ಲಿನ ಕುಮಾರಗಂಧರ್ವ ಕಲಾಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ‘ಸ್ಪರ್ಧಾ ಮಾರ್ಗ’ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಮಾರ್ಗದರ್ಶನ ಕಾರ್ಯಾಗಾರಕ್ಕೆ ಪರೀಕ್ಷಾ ಆಕಾಂಕ್ಷಿಗಳಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು. ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ನೂರಾರು ಮಂದಿ ಮಾಹಿತಿ ಮತ್ತು ಮಾರ್ಗದರ್ಶನ ಪಡೆದರು.

ಐಎಎಸ್, ಐಪಿಎಸ್, ಕೆಎಎಸ್‌ ಅಧಿಕಾರಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡು ಸ್ಫೂರ್ತಿ ತುಂಬಿದರು. ಯಾವ ಪರೀಕ್ಷೆಯೂ ಅಸಾಧ್ಯವಲ್ಲ; ಕ್ರಮಬದ್ಧವಾಗಿ ಓದಿದರೆ ಹಾಗೂ ಜ್ಞಾನ ವೃದ್ಧಿಸಿಕೊಳ್ಳುತ್ತಾ ಹೋದರೆ ಯಶಸ್ಸು ಕಾಣಬಹುದು ಎನ್ನುವುದನ್ನು ತಿಳಿಸಿಕೊಟ್ಟರು. ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದಬೇಕು, ದೊಡ್ಡ ಕನಸುಗಳನ್ನು ಇಟ್ಟುಕೊಂಡು ಸರಿಯಾದ ದಾರಿಯಲ್ಲಿ ಸಾಗಿದರೆ ಸಫಲರಾಗಬಹುದು ಮತ್ತು ಸಮಯಕ್ಕೆ ಹೆಚ್ಚಿನ ಮಹತ್ವ ಕೊಡಬೇಕು ಎಂಬ ಸಲಹೆಗಳನ್ನು ನೀಡಿ ಪ್ರೇರಣೆ ನೀಡಿದರು.

ಬೆಳಿಗ್ಗೆಯಿಂದ ಸಂಜೆವರೆಗೂ ನಡೆದ ಕಾರ್ಯಾಗಾರದಲ್ಲಿ, ಪರೀಕ್ಷಾ ತಜ್ಞರು ಹಾಗೂ ಸಂಪನ್ಮೂಲ ವ್ಯಕ್ತಿಗಳು ವಿವಿಧ ವಿಷಯಗಳ ಕುರಿತು ನೀಡಿದ ಉಪನ್ಯಾಸವನ್ನು ಆಸಕ್ತಿಯಿಂದ ಆಲಿಸಿದ ಯುವಜನರು, ಸಂವಾದದಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ADVERTISEMENT

ಹಲವು ವಿಷಯ ಮನವರಿಕೆ:

ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವುದಕ್ಕೆ ಮುನ್ನ ಮಾಡಿಕೊಳ್ಳಬೇಕಾದ ಪೂರ್ವ ಸಿದ್ಧತೆಗಳೇನು, ಯಾವ ವಿಧಾನದಲ್ಲಿ ಓದಿದರೆ ಹೆಚ್ಚಿನ ಅನುಕೂಲವಾಗುತ್ತದೆ, ಯಾವ ವಿಷಯಗಳ ಮೇಲೆ ಒತ್ತು ನೀಡಬೇಕು, ಓದಿದ್ದನ್ನು ಗ್ರಹಿಸಿಕೊಳ್ಳುವ ಕೌಶಲವನ್ನು ವೃದ್ಧಿಸಿಕೊಳ್ಳುವುದು ಹೇಗೆ, ಯಾವ ಪರೀಕ್ಷೆಗೆ ಯಾವ ಪಠ್ಯಕ್ರಮವನ್ನು ಓದಿಕೊಳ್ಳಬೇಕು, ಅದಕ್ಕೆ ಸಂಬಂಧಿಸಿದಂತೆ ಪಠ್ಯಸಾಮಗ್ರಿಗಳು ಎಲ್ಲಿ ದೊರೆಯುತ್ತವೆ, ದಿನಪತ್ರಿಕೆಗಳ ಓದಿನಿಂದಾಗುವ ಲಾಭಗಳೇನು, ಪ್ರಚಲಿತ ವಿದ್ಯಮಾನಗಳನ್ನು ತಿಳಿದುಕೊಳ್ಳುವುದರ ಮಹತ್ವವೇನು ಎಂಬಿತ್ಯಾದಿ ವಿಷಯಗಳನ್ನು ಅಧಿಕಾರಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳು ಆಪ್ತವಾಗಿ ಹಂಚಿಕೊಂಡರು. ಪರೀಕ್ಷಾ ಭಯ ಹೋಗಲಾಡಿಸುವ ಪ್ರಯತ್ನವನ್ನು ಪರಿಣಾಮಕಾರಿಯಾಗಿ ಮಾಡಿದರು.

ಪಾಲ್ಗೊಂಡಿದ್ದವರಿಗೆ ‘ಚಾಣಕ್ಯ ಕರಿಯರ್ ಅಕಾಡೆಮಿ’ಯಿಂದ ಕೆಎಎಸ್, ಐಎಎಸ್‌ ಪರೀಕ್ಷಾ ಕೈಪಿಡಿಯನ್ನು ಉಚಿತವಾಗಿ ವಿತರಿಸಲಾಯಿತು. ಐಎಎಸ್‌, ಐಪಿಎಸ್, ಕೆಎಎಸ್, ಪಿಎಸ್‌ಐ, ಐಬಿಪಿಎಸ್, ಎಫ್‌ಡಿಸಿ, ಎಸ್‌ಡಿಸಿ ಮೊದಲಾದ ಪರೀಕ್ಷೆಗಳನ್ನು ತೆಗೆದುಕೊಳ್ಳುವವರಿಗೆ ಅನುಕೂಲವಾಗುವ ಪುಸ್ತಕಗಳ ಪ್ರದರ್ಶನವನ್ನೂ ಅಕಾಡೆಮಿಯವರು ಏರ್ಪಡಿಸಿದ್ದರು.

‘ಕಾರ್ಯಾಗಾರದಿಂದ ಬಹಳ ಅನುಕೂಲವಾಯಿತು. ಮಾಹಿತಿ ಮತ್ತು ಮಾರ್ಗದರ್ಶನದ ಮಹಾಪೂರವೇ ಇತ್ತು. ಪರೀಕ್ಷಾ ಆಕಾಂಕ್ಷಿಗಳಿಗೆ ಉತ್ತಮ ದಿಕ್ಕನ್ನು ಕಾರ್ಯಾಗಾರ ತೋರಿಸಿಕೊಟ್ಟಿತು’ ಎಂಬ ಅಭಿ‍ಪ್ರಾಯ ಭಾಗವಹಿಸಿದ್ದವರಿಂದ ವ್ಯಕ್ತವಾಯಿತು. ಕೆಲವು ಪೋಷಕರೂ ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.