ADVERTISEMENT

ಶಾಸಕರ ಜತೆ ಸಭಾಧ್ಯಕ್ಷ ಕಾಗೇರಿ ಸಮಾಲೋಚನೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 16:10 IST
Last Updated 18 ಜೂನ್ 2021, 16:10 IST
ವಿಶ್ವೇಶ್ವರ ಹೆಗಡೆ ಕಾಗೇರಿ
ವಿಶ್ವೇಶ್ವರ ಹೆಗಡೆ ಕಾಗೇರಿ   

ಬೆಂಗಳೂರು: ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕೋವಿಡ್‌ ನಿಯಂತ್ರಣ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಕುರಿತು ಶಾಸಕರೊಂದಿಗೆ ಸಮಾಲೋಚನೆ ಮುಂದುವರಿಸಿದ್ದಾರೆ.

‘ಕೋವಿಡ್‌ನಿಂದ ಗುಣಮುಖರಾಗಿ ಬಂದಿರುವ ಸಭಾಧ್ಯಕ್ಷರು, ಪುನಃ ಶಾಸಕರೊಂದಿಗೆ ಸಮಾಲೋಚನೆ ಆರಂಭಿಸಿದ್ದಾರೆ. ಶಾಸಕರಿಗೆ ದೂರವಾಣಿ ಕರೆಮಾಡಿ, ಅವರ ಆರೋಗ್ಯ ವಿಚಾರಿಸುತ್ತಿದ್ದಾರೆ. ಆಯಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕೋವಿಡ್‌ ನಿಯಂತ್ರಣ ಹಾಗೂ ಜನರ ನೆರವಿಗಾಗಿ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆಯುತ್ತಿದ್ದಾರೆ’ ಎಂದು ಸಭಾಧ್ಯಕ್ಷರ ಕಚೇರಿಯ ಪ್ರಕಟಣೆ ತಿಳಿಸಿದೆ.

ಕೋವಿಡ್‌ ನಿಯಂತ್ರಣ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಎಲ್ಲ ಶಾಸಕರಿಗೂ ಸಭಾಧ್ಯಕ್ಷರು ಸಲಹೆ ನೀಡುತ್ತಿದ್ದಾರೆ. ಮಾಸ್ಕ್‌ ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ಕೈ ತೊಳೆದುಕೊಳ್ಳುವುದು, ಸ್ಯಾನಿಟೈಸರ್‌ ಬಳಕೆ ಕುರಿತು ನೆನಪಿಸುತ್ತಿದ್ದಾರೆ. ಪ್ರಯಾಣದ ಅವಧಿಯಲ್ಲಿ ಸ್ಯಾನಿಟೈಸರ್‌ ಜತೆಗೆ ಇರಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

‘ಕೋವಿಡ್‌ ಮತ್ತು ಲಾಕ್‌ಡೌನ್‌ನಿಂದ ತೊಂದರೆಗೊಳಗಾದ ಜನರಿಗೆ ನೆರವು ಒದಗಿಸುವ ನಿಮ್ಮ ಪ್ರಯತ್ನ ಶ್ಲಾಘನೀಯ. ಆದರೆ, ನಿಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ಇರಲಿ. ನೀವು ಆರೋಗ್ಯಯುತವಾಗಿ ಇದ್ದಲ್ಲಿ ಮಾತ್ರ ಜನರ ಸೇವೆ ಮಾಡಲು ಸಾಧ್ಯ. ಈ ಕಾರಣದಿಂದ ಜಾಗ್ರತೆಯಾಗಿ ಇರಿ. ಕೋವಿಡ್‌ ನಿಯಂತ್ರಣ ಕ್ರಮಗಳ ಕುರಿತು ಜನರಲ್ಲೂ ಅರಿವು ಮೂಡಿಸಿ’ ಎಂದು ಶಾಸಕರಿಗೆ ಕಾಗೇರಿ ಸಲಹೆ ನೀಡಿದ್ದಾರೆ.

ರಾಜ್ಯದ 224 ಶಾಸಕರ ಜತೆಗೂ ಸಭಾಧ್ಯಕ್ಷರು ಸಮಾಲೋಚನೆ ನಡೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.