ADVERTISEMENT

ಪೀಠದ ಗೌರವ ಉಳಿಸಲು ಅಮಾನತು: BJP ಶಾಸಕರ ವಿರುದ್ಧದ ಕ್ರಮ ಸಮರ್ಥಿಸಿಕೊಂಡ ಸ್ಪೀಕರ್

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2025, 23:30 IST
Last Updated 22 ಮಾರ್ಚ್ 2025, 23:30 IST
<div class="paragraphs"><p>ಯು.ಟಿ ಖಾದರ್‌</p></div>

ಯು.ಟಿ ಖಾದರ್‌

   

ಬೆಂಗಳೂರು: ಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರಿದ ಸದಸ್ಯರಿಗೆ ತಿದ್ದಿಕೊಳ್ಳಲು ಅವಕಾಶವಿದ್ದರೂ, ಕಲಾಪ ಮತ್ತೆ ಸೇರಿದ ನಂತರವೂ ಅದೇ ವರ್ತನೆ ಮುಂದುವರಿಸಿದರು. ದುರ್ವರ್ತನೆ ಸಹಿಸಲು ಸಾಧ್ಯವಿಲ್ಲ’ ಎಂದು ಬಿಜೆಪಿಯ 18 ಶಾಸಕರ ಅಮಾನತು ಕ್ರಮವನ್ನು ಸ್ಪೀಕರ್ ಯು.ಟಿ.ಖಾದರ್‌ ಸಮರ್ಥಿಸಿಕೊಂಡರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು, ‘ಮಧ್ಯಾಹ್ನ 12ರ ಸುಮಾರಿಗೆ ಘಟನೆ ನಡೆದಿತ್ತು. ಸಂಜೆ 4ಕ್ಕೆ ಕಲಾಪ ಮತ್ತೆ ಸೇರಿದಾಗಲೂ ಅವರ ವರ್ತನೆ ಬದಲಾಗಲಿಲ್ಲ. ಪೀಠಕ್ಕೆ ಅಗೌರವಾಗಿದೆ. ತಪ್ಪು ಮಾಡಿದ್ದೇವೆ ಎಂಬ ಭಾವನೆ ಅವರಲ್ಲಿ ಕಾಣಲಿಲ್ಲ. ಪೀಠದ ಗೌರವಕ್ಕಾಗಿ ಅಮಾನತು ಶಿಕ್ಷೆ ಅನಿವಾರ್ಯ ಆಗಿತ್ತು. ಬಿಜೆಪಿ ಸದಸ್ಯರ ವರ್ತನೆ ಇತರರಿಗೆ ಮಾದರಿಯಾಗಬಾರದು. ಜಿಲ್ಲಾ, ತಾಲ್ಲೂಕು ಸಭೆಗಳಲ್ಲಿ ಇಂತಹದು ಮರುಕಳಿಸಬಾರದು’ ಎಂದರು.

ADVERTISEMENT

‘ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ ಅವರು ಹನಿಟ್ರ್ಯಾಪ್‌ ವಿಷಯ ಪ್ರಸ್ತಾಪಿಸಿದಾಗ ಅವಕಾಶ ಕೊಟ್ಟೆ. ಚರ್ಚೆಯಾಯಿತು. ಗೃಹ ಸಚಿವರು, ಮುಖ್ಯಮಂತ್ರಿ ತನಿಖೆಯ ಭರವಸೆ ನೀಡಿದರು. ಆದರೂ, ಧನ ವಿನಿಯೋಗ ಮಸೂದೆಗೆ ಅಡ್ಡಿಪಡಿಸಲು ಪ್ರಯತ್ನಿಸಿದರು. ಗೊಂದಲ ಸೃಷ್ಟಿಸಿದರು. ಆರೋಗ್ಯ ಸಮಸ್ಯೆ ಇರುವ ಮುಖ್ಯಮಂತ್ರಿಗೆ ನಿರಂತರವಾಗಿ ಅಡ್ಡಿ ಮಾಡಿದರು. ಪೀಠದ ಮೇಲೇರಲು ಪ್ರಯತ್ನಿಸಿದರು’ ಎಂದು ಘಟನೆ ವಿವರಿಸಿದರು.

‘ಅವರಿಗೆ ಹೆದರಿ ಅಧಿವೇಶನ ಮೊಟುಕುಗೊಳಿಸಬೇಕಿತ್ತಾ? ಧನ ವಿನಯೋಗ ಮಸೂದೆಗೆ ಅಂಗೀಕಾರ ಪಡೆಯಲು ಮತ್ತೆ ಅಧಿವೇಶನ ಕರೆಯಬೇಕಿತ್ತಾ? ಭಾವನಾತ್ಮಕವಾಗಿ ಯೋಚಿಸಿದರೆ ಸಂವಿಧಾನ ಪೀಠದ ಗೌರವ ಉಳಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ಅವರಿಗೆ ಬುದ್ದಿ ಕಲಿಸಲು ಎಚ್ಚರಿಕೆಯ ಸಂದೇಶ ನೀಡಬೇಕಾಯಿತು’ ಎಂದರು. 

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿದರು.ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್

ಪ್ರತಿಭಟನೆ ಮಾಡಿದ್ದಕ್ಕೇ ಅಮಾನತು: ಆರ್‌. ಅಶೋಕ

ಬೆಂಗಳೂರು: ‘ಸಿದ್ದರಾಮಯ್ಯ ಅವರು ಹಿಂದೆ ಸದನದ ಬಾಗಿಲು ಒದ್ದಿದ್ದರು, ಜಮೀರ್ ಅಹಮದ್‌ ಸಭಾಧ್ಯಕ್ಷರ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಆಗ ಅಮಾನತಿಗೆ ಆದೇಶಿಸಿರಲಿಲ್ಲ. ಈಗ ನಮ್ಮವರು ಪ್ರತಿಭಟಿಸಿದ್ದಕ್ಕೇ ಅಮಾನತು ಮಾಡಲಾಗಿದೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅಶೋಕ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಾಸಕರನ್ನು ಹನಿಟ್ರ್ಯಾಪ್‌ ಮಾಡುವ ಹುನ್ನಾರಗಳ ವಿರುದ್ಧ ತನಿಖೆ ಮತ್ತು ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ವಿರೋಧಿಸಿ ಸದಸ್ಯರು ಪ್ರತಿಭಟಿಸುತ್ತಿದ್ದರು. ಅಷ್ಟಕ್ಕೇ ಅಮಾನತು ಮಾಡಲಾಗಿದೆ. ಇದು ತುಘಲಕ್ ಆಡಳಿತ’ ಎಂದು ಹೇಳಿದರು.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ‘ಸಭಾಧ್ಯಕ್ಷರು ನಮ್ಮ ರಕ್ಷಣೆಗೆ ಬರಬೇಕಿತ್ತು. ಆದರೆ ಸರ್ಕಾರದ ತಾಳಕ್ಕೆ ಕುಣಿದರು. ಅಮಾನತಾದ ಶಾಸಕರು ವಿಧಾನಸಭೆ ಲಾಬಿ, ಸಭಾಂಗಣ ಪ್ರವೇಶಿಸುವಂತಿಲ್ಲ ಎಂದಿದ್ದಾರೆ. ಅವರೇನು ಭಯೋತ್ಪಾದಕರೇ,ನಕ್ಸಲರೇ’ ಎಂದು ಪ್ರಶ್ನಿಸಿದರು.

ವಿಧಾನ ಪರಿಷತ್‌ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಸುದ್ದಿಗೋಷ್ಠಿಯಲ್ಲಿ ಇದ್ದರು.

ರಮೇಶ್‌ಬಾಬು
‘ಪೀಠದತ್ತ ನುಗ್ಗಿ ಎಂದಿದ್ದು ಅಶೋಕ’
‘ಬಿಜೆಪಿ ಸದಸ್ಯರು ಸಭಾಧ್ಯಕ್ಷರ ಪೀಠಕ್ಕೆ ಮುತ್ತಿಗೆ ಹಾಕುವಂತೆ ಪ್ರಚೋದಿಸಿದ್ದೇ ಆರ್‌.ಅಶೋಕ. ಪೀಠದತ್ತ ನುಗ್ಗಿ ಎಂದು ಅವರು ಹೇಳಿದ್ದು ಮಾಧ್ಯಮಗಳಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಹೀಗಾಗಿ ಅವರ ವಿರುದ್ಧ ಕ್ರಮತೆಗೆದುಕೊಳ್ಳಬೇಕು’ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಒತ್ತಾಯಿಸಿದ್ದಾರೆ. ಈ ಸಂಬಂಧ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಪತ್ರ ಬರೆದಿದ್ದಾರೆ. ‘ಸದನದ ನಿಯಮಾವಳಿ ಮೀರಿ, ಇಡೀ ಘಟನೆಗೆ ಕಾರಣಕರ್ತರಾದ ಅಶೋಕ ಅವರನ್ನು ಅಮಾನತು ಪಡಿಸಿ, ಅವರ ವಿರುದ್ಧವೂ ಕ್ರಮಜರುಗಿಸಿ’ ಎಂದು ಮನವಿ ಮಾಡಿದ್ದಾರೆ.

ರಾಜ್ಯದಾದ್ಯಂತ ಹೋರಾಟ: ‘ಧರ್ಮಾಧಾರಿತ ಮೀಸಲಾತಿ ಅಸಂವಿಧಾನಿಕ. ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ವಿರೋಧಿಸಿ ಜನಜಾಗೃತಿ ಮೂಡಿಸಲು ರಾಜ್ಯದಾದ್ಯಂತ ಹೋರಾಟ ನಡೆಸುತ್ತೇವೆ’ ಎಂದು ಹೇಳಿದರು. ವಿಧಾನ ಪರಿಷತ್‌ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಸುದ್ದಿಗೋಷ್ಠಿಯಲ್ಲಿ ಇದ್ದರು.

‘ಆದೇಶ ನಿಮ್ಮದೋ? ಸಿ.ಎಂ.ದೋ’
‘ಶಾಸಕರ ಜತೆ ಸಂಧಾನಸಭೆ ನಡೆಸದೆಯೇ ಅಮಾನತು ಆದೇಶ ಮಾಡಿದ ನಿಮ್ಮ ಕ್ರಮ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಪಾಲಿಗೆ ಶಾಶ್ವತ ಕಪ್ಪುಚುಕ್ಕೆ’ ಎಂದು ಬಿಜೆಪಿ ಶಾಸಕ ವಿ.ಸುನಿಲ್‌ ಕುಮಾರ್ ಅವರು ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಪತ್ರ ಬರೆದಿದ್ದಾರೆ. ‘ಬಿಜೆಪಿ–ಜೆಡಿಎಸ್‌ ಶಾಸಕರ ಜತೆ ಸಭೆ ನಡೆಸದೆಯೇ ಮುಖ್ಯಮಂತ್ರಿ ಮತ್ತು ಕಾನೂನು ಸಚಿವರ ಜತೆ ರಹಸ್ಯ ಸಭೆ ನಡೆಸಿದಿರಿ. ಅಮಾನತು ಆದೇಶ ತಮ್ಮದೋ ಅಥವಾ ಮುಖ್ಯಮಂತ್ರಿಯೇ ಕೈಹಿಡಿದು ಬಲವಂತದಿಂದ ಬರೆಸಿದ್ದೋ’ ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.