ADVERTISEMENT

ಕಾಂಗ್ರೆಸ್‌ನಿಂದ 'ಪ್ರಜಾಪ್ರಭುತ್ವಕ್ಕಾಗಿ ಮಾತನಾಡು' ಹೆಸರಿನಲ್ಲಿ ಟ್ವಿಟರ್ ಅಭಿಯಾನ

ಬಿಜೆಪಿಯಿಂದ 'ಆಪರೇಷನ್‌ ಕಮಲ' ಆರೋಪಿಸಿ ಕೈ ನಾಯಕರಿಂದ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 26 ಜುಲೈ 2020, 11:08 IST
Last Updated 26 ಜುಲೈ 2020, 11:08 IST
ಕಾಂಗ್ರೆಸ್‌–ಬಿಜೆಪಿ
ಕಾಂಗ್ರೆಸ್‌–ಬಿಜೆಪಿ    

ಬೆಂಗಳೂರು: ರಾಜಸ್ಥಾನದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಆಪರೇಷನ್‌ ಕಮಲದ ಮೂಲಕ ಬಿಜೆಪಿ ಅಧಿಕಾರದಾಹಿ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ 'ಪ್ರಜಾಪ್ರಭುತ್ವಕ್ಕಾಗಿ ಮಾತನಾಡು' ಎಂಬ ಹೆಸರಿನಲ್ಲಿ ಕಾಂಗ್ರೆಸ್‌ ನಾಯಕರು ಟ್ವಿಟರ್ ಅಭಿಯಾನ ಆರಂಭಿಸಿದ್ದಾರೆ.

ಟ್ವಿಟ್ಟರ್‌ನಲ್ಲಿ #SpeakUpForDemocracy ಹ್ಯಾಶ್ ಟ್ಯಾಗ್‌ ಟ್ರೆಂಡ್‌ ಆಗಿದ್ದು, ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ನಾಯಕರು ವಿಡಿಯೊ ಟ್ವೀಟ್‌ ಮಾಡುವ ಮೂಲಕ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.

ಟ್ವೀಟ್ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ‘ಅಧಿಕಾರದ ದುರಾಸೆಯಿಂದ ಬಿಜೆಪಿ ಪಕ್ಷ 'ಅಪರೇಷನ್ ಲೋಟಸ್' ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೊಲೆ ಮಾಡುತ್ತಿದೆ. ಕರ್ನಾಟಕ, ಮಧ್ಯಪ್ರದೇಶಗಳಲ್ಲಿ ಏನಾಯಿತು, ಮಹಾರಾಷ್ಟ್ರದಲ್ಲಿ ಮಧ್ಯರಾತ್ರಿ ಏನು ನಡೆಯಿತು ಎಂಬುದು ನಿಮಗೆ ತಿಳಿದಿದೆ. ಇದೀಗ ರಾಜಸ್ಥಾನದಲ್ಲಿ ಕೀಳು ರಾಜಕೀಯ ನಡೆಯುತ್ತಿದ್ದು ಇದನ್ನು ನಾವೆಲ್ಲಾ ವಿರೋಧಿಸಬೇಕಿದೆ’ ಎಂದಿದ್ದಾರೆ.

ADVERTISEMENT

'ಪ್ರಜಾಪ್ರಭುತ್ವದ ಮೌಲ್ಯಗಳ ಉಳಿವಿಗಾಗಿ, ಬಿಜೆಪಿ ಪಕ್ಷದ ಸಂವಿಧಾನ ವಿರೋಧಿ ನಡೆಯ ವಿರುದ್ಧ ಸಾಮಾಜಿಕ ಜಾಲತಾಣಗಳ ಮೂಲಕ ಧ್ವನಿ ಎತ್ತುವಂತೆ ನಾನು ದೇಶದ ಪ್ರಜೆಗಳಲ್ಲಿ, ಯುವ ಜನರಲ್ಲಿ ಕಳಕಳಿಯಿಂದ ಮನವಿ ಮಾಡುತ್ತಿದ್ದೇನೆ' ಎಂದೂ ಟ್ವೀಟ್‌ ಮಾಡಿದ್ದಾರೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡಾ ಈ ವಿಚಾರವಾಗಿ ಮಾತನಾಡಿದ್ದಾರೆ. 'ಭಾರತ ಕೊರೊನಾದ ವಿರುದ್ಧ ಹೋರಾಟ ನಡೆಸುತ್ತಿದೆ. ಆದರೆ, ಇಂಥ ಸಂದರ್ಭದಲ್ಲಿ ಬಿಜೆಪಿ ಕೆಲವು ರಾಜ್ಯಗಳಲ್ಲಿ ಬಿಜೆಪಿಯೇತರ ಸರ್ಕಾರವನ್ನು ನಾಶ ಮಾಡಲು ಹೊರಟಿದೆ. ಇದು ಖಂಡನಾರ್ಹ' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.