ADVERTISEMENT

ಐಎಎಸ್‌ ಅಧಿಕಾರಿ ಜಿ.ಸಿ. ಪ್ರಕಾಶ್‌ಗೆ ನಿರೀಕ್ಷಣಾ ಜಾಮೀನು

ಬಿಡಿಎ ವಸತಿ ಯೋಜನೆ ಗುತ್ತಿಗೆಯಲ್ಲಿ ಭ್ರಷ್ಟಾಚಾರದ ಆರೋಪ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2022, 19:30 IST
Last Updated 16 ಅಕ್ಟೋಬರ್ 2022, 19:30 IST
ಜಿ.ಸಿ.ಪ್ರಕಾಶ್‌
ಜಿ.ಸಿ.ಪ್ರಕಾಶ್‌   

ಬೆಂಗಳೂರು: ಬಿಡಿಎ ಬಹುಮಹಡಿ ವಸತಿ ಯೋಜನೆ ಕಾಮಗಾರಿಯ ಗುತ್ತಿಗೆಯಲ್ಲಿ ಭ್ರಷ್ಟಾಚಾರ ನಡೆಸಿದ ಆರೋಪದ ಮೇಲೆ ಬಿಜೆಪಿ ಶಾಸಕ ಬಿ.ಎಸ್‌. ಯಡಿಯೂರಪ್ಪ ಮತ್ತು ಇತರರ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ಏಳನೇ ಆರೋಪಿಯಾಗಿರುವ ಐಎಎಸ್‌ ಅಧಿಕಾರಿ ಜಿ.ಸಿ. ಪ್ರಕಾಶ್‌ ಅವರಿಗೆ ವಿಶೇಷ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಕರ್ನಾಟಕ ಆ್ಯಂಟಿ ಗ್ರಾಫ್ಟ್‌ ಮತ್ತು ಪರಿಸರ ವೇದಿಕೆ ಅಧ್ಯಕ್ಷ ಟಿ.ಜೆ. ಅಬ್ರಹಾಂ ಸಲ್ಲಿಸಿದ್ದ ಖಾಸಗಿ ದೂರಿನಲ್ಲಿರುವ ಆರೋಪಗಳ ಕುರಿತು ತನಿಖೆ ನಡೆಸುವಂತೆ ಜನಪ್ರತಿನಿಧಿಗಳ ಪ್ರಕರಣಗಳ ವಿಶೇಷ ನ್ಯಾಯಾಲಯವು ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿತ್ತು. ಸೆಪ್ಟೆಂಬರ್‌ 16 ರಂದು ಎಫ್‌ಐಆರ್‌ ದಾಖಲಿಸಿದ್ದ ಲೋಕಾಯುಕ್ತ ಪೊಲೀಸರು ತನಿಖೆ ಆರಂಭಿಸಿದ್ದರು.

ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌. ಯಡಿಯೂರಪ್ಪ ಅವರಿಗೆ ನೀಡುವುದಾಗಿ ಹೇಳಿ ಗುತ್ತಿಗೆದಾರ ಚಂದ್ರಕಾಂತ್‌ ರಾಮಲಿಂಗಂ ಅವರಿಂದ ₹ 12 ಕೋಟಿ ಲಂಚ ಪಡೆದ ಆರೋಪ ಹಿಂದೆ ಬಿಡಿಎ ಆಯುಕ್ತರಾಗಿದ್ದ ಪ್ರಕಾಶ್‌ ಮೇಲಿದೆ. ಈಗ ಮೈಸೂರು ಪ್ರಾದೇಶಿಕ ಆಯುಕ್ತರ ಹುದ್ದೆಯಲ್ಲಿರುವ ಅವರು, ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನು ಕೋರಿ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ADVERTISEMENT

ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಾರದು ಎಂದು ಲೋಕಾಯುಕ್ತದ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ವಾದಿಸಿದ್ದರು. ಎರಡೂ ಕಡೆಯ ವಾದಗಳನ್ನು ಆಲಿಸಿದ ಬಳಿಕ ಗುರುವಾರ ಆದೇಶ ಪ್ರಕಟಿಸಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ. ಜಯಂತ್‌ ಕುಮಾರ್‌, ಅಧಿಕಾರಿಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ.

ಆರೋಪಿಯು ಮೂರು ವಾರಗಳೊಳಗೆ ತನಿಖಾಧಿಕಾರಿಯ ಎದುರು ಶರಣಾಗಬೇಕು. ಬಂಧನದ ಅಗತ್ಯ ಕಂಡುಬಂದಲ್ಲಿ ತನಿಖಾಧಿಕಾರಿಯು ₹ 1 ಲಕ್ಷ ಮೊತ್ತದ ಬಾಂಡ್‌ ಹಾಗೂ ಅಷ್ಟೇ ಮೊತ್ತದ ವೈಯಕ್ತಿಕ ಭದ್ರತೆ ಪಡೆದು ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು. ಆರೋಪಿಯು ತಲೆಮರೆಸಿಕೊಳ್ಳುವುದು ಮತ್ತು ಸಾಕ್ಷ್ಯನಾಶಕ್ಕೆ ಪ್ರಯತ್ನಿಸುವಂತಿಲ್ಲ. ತಿಂಗಳಲ್ಲಿ ಒಂದು ದಿನ ತನಿಖಾಧಿಕಾರಿ ಎದುರು ಹಾಜರಾತಿ ನೀಡಬೇಕು ಎಂದು ನ್ಯಾಯಾಲಯ ಷರತ್ತು ವಿಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.